
ನವದೆಹಲಿ(ಫೆ.01): ಕೋವಿಡ್ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದ್ದು, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇಂಥ ಹೊತ್ತಿನಲ್ಲಿ ಇಡೀ ದೇಶದ ಜನತೆ ಹಲವು ನಿರೀಕ್ಷೆಗಳನ್ನು ಹೊತ್ತು ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನತ್ತ ಗಮನನೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಸಿದ್ಧಪಡಿಸುವ ಸಚಿವೆ ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಯಾರಿದ್ದಾರೆ ಎಂಬ ವಿವರ ಇಲ್ಲಿದೆ.
1.ಅಜಯ್ ಭೂಷಣ್ ಪಾಂಡೆ
ಕೇಂದ್ರ ಹಣಕಾಸು ಸಚಿವಾಲಯದ ಕಾರ‍್ಯದರ್ಶಿ ಅಜಯ್ ಭೂಷಣ್ ಪಾಂಡೆ. 1984ನೇ ಬ್ಯಾಚಿನ ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿ. ಇವರು ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ (ಯುಐಎಐ) ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಮುಖ್ಯಸ್ಥರಾಗಿರುವ ಪಾಂಡೆ ಫೆಬ್ರವರಿ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
2. ಟಿ.ವಿ.ಸೋಮನಾಥನ್
ವೆಚ್ಚ ಇಲಾಖೆಯ ಕಾರ‍್ಯದರ್ಶಿಯಾಗಿರುವ ಸೋಮನಾಥನ್ 1987ನೇ ಬ್ಯಾಚಿನ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿ. ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 2015-17ರ ವರೆಗೆ ಪ್ರಧಾನಿ ಕಾರಾರಯಲಯದಲ್ಲಿ ಕಾರ‍್ಯನಿರ್ವಹಿಸಿದ್ದಾರೆ. ಇವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ಕಿವಿ’ ಎಂದೇ ಕರೆಯಲಾಗುತ್ತದೆ. ಪ್ರಧಾನಿ ಕಾರಾರಯಲಯದಿಂದ ಬಜೆಟ್ ಕುರಿತಂತೆ ನೀಡುವ ಬಹುತೇಕ ಸಲಹೆಗಳು ಸೋಮನಾಥನ್‌ರ ಶಿಫಾರಸುಗಳೇ ಆಗಿರುತ್ತವೆ.
3.ತರುಣ್ ಬಜಾಜ್
ಆರ್ಥಿಕ ವ್ಯವಹಾರ ಇಲಾಖೆಯ ಕಾರ‍್ಯದರ್ಶಿ ತರುಣ್ ಬಜಾಜ್, 1988ನೇ ಬ್ಯಾಚಿನ ಹರಾರಯಣ ಕೇಡರ್‌ನ ಐಎಎಸ್ ಅಧಿಕಾರಿ. ಪ್ರಧಾನಿ ಕಾರಾರಯಲಯದಲ್ಲಿ 5 ವರ್ಷ ಕಾರ‍್ಯನಿರ್ವಹಿಸಿದ್ದಾರೆ. 3 ಆತ್ಮನಿರ್ಭರ ಪ್ಯಾಕೇಜ್ ಸಿದ್ಧಪಡಿಸಿದ ತಂಡದಲ್ಲಿ ತರುಣ್ ಪ್ರಮುಖರು. ಅಲ್ಲದೆ ಇವರು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಕರಡನ್ನು ಸಿದ್ಧಪಡಿಸಲಿದ್ದಾರೆ ಎಂದು ಹೇಳಲಾಗುತ್ತದೆ.
4.ತುಹಿನ್ ಕಾಂತಾ
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಇಲಾಖೆ ಕಾರ‍್ಯದರ್ಶಿ ತುಹಿನ್ ಕಾಂತಾ 1987ನೇ ಬ್ಯಾಚಿನ ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ.
5.ದೇವಶಿಶ್ ಪಾಂಡಾ
ದೇವಶಿಶ್ ಪಾಂಡಾ ಅವರು ಉತ್ತರ ಪ್ರದೇಶ ಕೇಡರ್‌ನ 1987ನೇ ಬ್ಯಾಚಿನ ಐಎಎಸ್ ಅಧಿಕಾರಿ. ಸದ್ಯ ಹಣಕಾಸು ಇಲಾಖೆಯ ಕಾರ‍್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
6. ಕೃಷ್ಣಮೂರ್ತಿ ಸುಬ್ರಮಣಿಯನ್
ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಅವರು ಐಐಟಿ, ಐಐಎಂನಲ್ಲಿ ವ್ಯಾಸಂಗ ಮಾಡಿದ್ದಾರೆ. ಹಾಗೆಯೇ ಯೂನಿವರ್ಸಿಟಿ ಆಫ್ ಷಿಕಾಗೋದಲ್ಲಿ ಓದಿದ ಹೆಗ್ಗಳಿಕೆ ಇವರದ್ದು. ಇದಕ್ಕೂ ಮೊದಲು ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಪ್ರಾದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯ ಕರಡು ಸಿದ್ಧಪಡಿಸಿದವರಲ್ಲಿ ಇವರು ಪ್ರಮುಖರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.