
ನವದೆಹಲಿ[ಏ.01]: 2019-20ರ ಹೊಸ ವಿತ್ತೀಯ ವರ್ಷ ಏಪ್ರಿಲ್ 1ರಿಂದ ಆರಂಭಗೊಳ್ಳುತ್ತಿದ್ದು, ಅರ್ಥವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗಲಿವೆ. ಪರಿಷ್ಕೃತ ಆದಾಯ ತೆರಿಗೆ ನಿಯಮಗಳು ಸೇರಿ ಹಲವು ಹೊಸ ನಿಯಮಗಳು ಈ ದಿವಸದಿಂದ ಜಾರಿಗೆ ಬರಲಿದೆ.
ಆದಾಯ ತೆರಿಗೆ ಪಾವತಿದಾರರಿಗೆ ಫೆ.1ರಂದು ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಬಹುದೊಡ್ಡ ಕೊಡುಗೆ ಲಭಿಸಿತ್ತು. ಈ ಪ್ರಕಾರ, 5 ಲಕ್ಷ ರು.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಾಗಂತ ಆದಾಯ ತೆರಿಗೆ ವಿನಾಯ್ತಿ ಮಿತಿಯಲ್ಲಿ ಹೆಚ್ಚಳವನೂ ಆಗುವುದಿಲ್ಲ. ಆದರೆ, 5 ಲಕ್ಷ ರು. ವರೆಗಿನ ಆದಾಯವಿರುವವರಿಗೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲಾಗಿದೆ. ಸದ್ಯ ಇಷ್ಟು ಆದಾಯವಿರುವವರು ವರ್ಷಕ್ಕೆ ಸುಮಾರು 13,000 ರು. ತೆರಿಗೆ ಪಾವತಿಸಬೇಕಿತ್ತು.
ಈ ನಿಯಮದಿಂದ 3 ಕೋಟಿ ತೆರಿಗೆದಾರಿಗೆ ಅನುಕೂಲವಾಗಲಿದ್ದು, ಈ ವರ್ಗಕ್ಕೆ 18,500 ಕೋಟಿ ರು. ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ
ಜಿಎಸ್‌ಟಿ ದರ ಇಳಿಕೆ: ನಿರ್ಮಾಣ ಹಂತದ ಫ್ಲ್ಯಾಟ್‌ಗಳ ತೆರಿಗೆ ದರ ಇಳಿಸುವ ಜಿಎಸ್‌ಟಿ ಮಂಡಳಿ ಸಭೆಯ ನಿರ್ಣಯ ಕೂಡ ಏ.1ರಿಂದಲೇ ಜಾರಿಗೆ ಬರಲಿದೆ. ಈ ಮುನ್ನ ಇದಕ್ಕೆ ಶೇ.12 ತೆರಿಗೆ ಇತ್ತು. ಇದೀಗ ಶೇ.5 ದರದ ತೆರಿಗೆಗೆ ಒಳಪಡಲಿದೆಘಿ
ಟಿಡಿಎಸ್ ಮಿತಿ ಹೆಚ್ಚಳ:
ಅಂಚೆ ಕಚೇರಿ ಉಳಿತಾಯದ 10 ಸಾವಿರ ರು.ಗಿಂತ ಮೇಲ್ಪಟ್ಟ ಹಣಕ್ಕೆ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ವಯವಾಗುತ್ತಿತ್ತು. ಇದರ ಮಿತಿ ಏಪ್ರಿಲ್ 1ರಿಂದ 40 ಸಾವಿರ ರು.ಗೆ ಏರಲಿದೆ. ಇದೇ ವೇಳೆ, ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಬಾಡಿಗೆ ಪಾವತಿಸುವವರು ಟಿಡಿಎಸ್ ಕಡಿತ ಮಾಡಿಕೊಳ್ಳುವ ವಾರ್ಷಿಕ ಮಿತಿಯನ್ನು 1.8 ಲಕ್ಷ ರು.ನಿಂದ 2.4 ಲಕ್ಷ ರು.ಗೆ ಏರಿಸಲಾಗಿದ್ದು, ಇದೂ ಕೂಡ ಸೋಮವಾರದಿಂದ ಜಾರಿಯಾಗಲಿದೆ.
ಮನೆ ಬಾಡಿಗೆ ಪಾವತಿಸುವವರು ವರ್ಷಕ್ಕೆ 2.4 ಲಕ್ಷ ರು.ಗಿಂತ ಹೆಚ್ಚು ಪಾವತಿಸಿದರೆ ಮಾತ್ರ ಟಿಡಿಎಸ್ ಕಡಿತ ಮಾಡಿಕೊಂಡು ಮಾಲಿಕರಿಗೆ ಬಾಡಿಗೆ ಪಾವತಿಸಬೇಕು. ಈ ಹಿಂದೆ ಈ ಮಿತಿ 1.8 ಲಕ್ಷ ರು. ಇತ್ತು. ಅದನ್ನೀಗ 2.4 ಲಕ್ಷಕ್ಕೆ ಏರಿಸಲಾಗಿದೆ.
ಕ್ಯಾಪಿಟಲ್ ಗೇನ್ ತೆರಿಗೆ:
‘ಕ್ಯಾಪಿಟಲ್ ಗೇನ್ ತೆರಿಗೆ ಪಾವತಿ ಯಿಂದ ಪಾರಾಗಲು ಒಂದರ ಬದಲು ಎರಡು ಮನೆ ಖರೀದಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. 2 ಕೋಟಿ ರು.ವರೆಗಿನ ಕ್ಯಾಪಿಟಲ್ ಗೇನ್ ಹೊಂದಿರುವವರಿಗೆ ಇದು ಅನ್ವಯವಾಗಲಿದ್ದು, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬಳಸಬಹುದಾಗಿದೆ’ ಎಂಬ ಬಜೆಟ್ ಘೋಷಣೆ ಕೂಡ ಈ ದಿನ ಜಾರಿಗೆ ಬರಲಿ
ಡಿಮ್ಯಾಟ್ ಕಡ್ಡಾಯ:
ಷೇರುದಾರರು ಏಪ್ರಿಲ್ 1ರಿಂದ ಡಿಮ್ಯಾಟ್ ಮುಖಾಂತರ ಮಾತ್ರ ಷೇರನ್ನು ವರ್ಗಾಯಿಸಬಹುದು. ಭೌತಿಕವಾಗಿ ಷೇರುಗಳನ್ನು ಹೊಂದಿದವರಿಗೆ ಇದು ಅನ್ವಯವಾಗಲಿದೆ. ಆದರೆ ಭೌತಿಕವಾಗಿ ಷೇರುಗಳನ್ನು ಇಟ್ಟುಕೊಂಡಿರಲು ಯಾವುದೇ ಅಡ್ಡಿಯಿಲ್ಲ.
ಇಂದಿನಿಂದ ಏನೇನು ಬದಲಾವಣೆ?
1. 5 ಲಕ್ಷ ರು.ವರೆಗೆ ಆದಾಯ ಹೊಂದಿದವರು ಆದಾಯ ತೆರಿಗೆ ಪಾವತಿಸಬೇಕಿಲ್ಲ
2. ಅಂಚೆ ಕಚೇರಿಯ 40 ಸಾವಿರ ರು.ವರೆಗಿನ ಉಳಿತಾಯದ ಹಣಕ್ಕಿನ್ನು ಟಿಡಿಎಸ್ ಕಟ್ಟಬೇಕಿಲ್ಲ
3. ಮನೆ ಬಾಡಿಗೆ ಟಿಡಿಎಸ್ ಮಿತಿ 1.8 ಲಕ್ಷ ರು.ನಿಂದ 2.4 ಲಕ್ಷ ರು.ಗೆ
4. ನಿರ್ಮಾಣ ಹಂತದ ಫ್ಲ್ಯಾಟ್‌ಗಳಿಗೆ ಇನ್ನು ಕೇವಲ ಶೇ.5 ಜಿಎಸ್‌ಟಿ
5. ಕ್ಯಾಪಿಟಲ್ ಗೇನ್ ತೆರಿಗೆ ಉಳಿಸಲು 2 ಮನೆ ಖರೀದಿಸಲು ಅವಕಾಶ. 2 ಕೋಟಿ ವರೆಗಿನ ಕ್ಯಾಪಿಟಲ್ ಗೇನ್‌ಗೆ ಅನ್ವಯ
6. ಷೇರುಗಳನ್ನು ವರ್ಗಾಯಿಸಬೇಕಾದರೆ ಡಿಮ್ಯಾಟ್ ಕಡ್ಡಾಯ
7. ಕಾರು, ಬೈಕ್ ಸೇರಿದಂತೆ ಕೆಲವು ಮೋಟಾರು ವಾಹನಗಳ ದರ ಏರಿಕೆ
ಸರಳೀಕೃತ ಜಿಎಸ್‌ಟಿ ರಿಟನ್ಸ್ ರ್ ಫಾರ್ಮ್ ಇಂದಿನಿಂದ ಜಾರಿ ಇಲ್ಲ
ಸರಳೀಕೃತ ಮಾಸಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಜಾರಿಯನ್ನು ಮುಂದೂಡಲಾಗಿದೆ. ಈ ಮುಂಚಿನ ನಿರ್ಧಾರದ ಪ್ರಕಾರ ಏಪ್ರಿಲ್ 1ರಿಂದ ಇದರ ಜಾರಿಯಾಗಬೇಕಿತ್ತು. ‘ಸಹಜ’ ಹಾಗೂ ‘ಸುಗಮ’ ಎಂಬ ಎರಡು ಸರಳೀಕೃತ ಜಿಎಸ್‌ಟಿ ರಿಟರ್ನ್ಸ್ ಫಾರ್ಮ್ ಗಳನ್ನು 2019ರ ಏಪ್ರಿಲ್ 1ರಿಂದ ಜಾ ರಿಗೊಳಿಸಲು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಕಳೆದ ವರ್ಷ ಜುಲೈನಲ್ಲೇ ನಿರ್ಧರಿಸಿತ್ತು. ಆದರೆ ಈ ತಂತ್ರಾಂಶ ಸಿದ್ಧಪಡಿಸುವಿಕೆ ವಿಳಂಬವಾದ ಕಾರಣ ಜಾರಿ ಕೂಡ ವಿಳಂಬವಾಗಿದೆ.
‘ಒಮ್ಮೆ ಅಧಿಕೃತ ಅನುಮೋದನೆ ದೊರೆತ ಬಳಿಕ, ತಂತ್ರಾಂಶ ಸಿದ್ಧಗೊಂಡ ಬಳಿಕ ಸರಳೀ ಕೃತ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿ ಸಲಾಗುತ್ತದೆ’ ಎಂದು ಸರ್ಕಾರ ಹೇಳಿದೆ. ಹೊಸ ಫಾರ್ಮ್‌ಗಳು ಹಾಲಿ ಇರುವ ಜಿಎಸ್‌ಟಿಆರ್-1 ಫಾರ್ಮ್ ಗಳ ಬದಲಿಗೆ ಜಾರಿಗೆ ಬರಲಿವೆ. ಆದರೆ ಜಿಎಸ್‌ಟಿಆರ್-3ಬಿ ಫಾರ್ಮ್ ಗಳು ಕೆಲ ಅವಧಿಗೆ ಮುಂದುವರಿಯಲಿವೆ ಎನ್ನಲಾಗಿದೆ.
ಕೇಂದ್ರ ಬಜೆಟ್ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: Union Budget 2019
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.