
ನವದೆಹಲಿ (ಫೆ.21): ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿನ ಹಲವು ನಾಗರಿಕರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ದೀದಿ ಪ್ರಶ್ನೆಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಇದೀಗ ಉತ್ತರ ನೀಡಿದೆ. ಆಧಾರ್ ಕಾರ್ಡ್ ವಿತರಣೆ ಹಾಗೂ ಅದರ ನಿರ್ವಹಣೆ ಯುಐಡಿಎಐ ಹೊಣೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ಯುಐಡಿಎಐ ಉತ್ತರ ನೀಡಿದೆ. ಆಧಾರ್ ಮಾಹಿತಿಗಳನ್ನು ಅಪ್ಡೇಟ್ ಮಾಡುವ ಸಂಬಂಧ ಆಗಾಗ ಆಧಾರ್ ಕಾರ್ಡ್ ಹೊಂದಿರೋರಿಗೆ ಮಾಹಿತಿ ನೀಡಲಾಗುತ್ತಿದೆ. ಆದರೆ, ಯಾವುದೇ ಆಧಾರ್ ಸಂಖ್ಯೆಯಲ್ಲಿ ರದ್ದುಗೊಳಿಸಿಲ್ಲ ಎಂದು ಯುಐಡಿಎಐ ಸ್ಪಷ್ಟನೆ ನೀಡಿದೆ. ಆಧಾರ್ ಕಾರ್ಡ್ ಭಾರತದ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ವಿವಿಧ ಯೋಜನೆಗಳ ಸಬ್ಸಿಡಿ, ಪ್ರಯೋಜನಗಳು ಹಾಗೂ ಸೇವೆಗಳನ್ನು ಪಡೆಯಲು ಇದನ್ನು ಬಳಸಲಾಗುತ್ತದೆ ಎಂದು ಯುಐಡಿಎಐ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.
ಆಧಾರ್ ಮಾಹಿತಿಗಳ ನಿಖರತೆಯ ನಿರ್ವಹಣೆಗೆ ಪ್ರಾಧಿಕಾರವು ದಾಖಲೆಗಳು ಹಾಗೂ ಆಧಾರ್ ಮಾಹಿತಿಗಳ ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂಬ ಮಾಹಿತಿಯನ್ನು ಕೂಡ ಯುಐಡಿಎಐ ನೀಡಿದೆ. ಒಂದು ವೇಳೆ ಆಧಾರ್ ಕಾರ್ಡ್ ಹೊಂದಿರೋರಿಗೆ ಯಾವುದೇ ಸಮಸ್ಯೆಗಳಿದ್ದರೆ ಯುಐಡಿಎಐಗೆ ಅವರು ಈ ಬಗ್ಗೆ ಮಾಹಿತಿ ನೀಡಬಹುದು. ಖಂಡಿತವಾಗಿಯೂ ಅವರ ಸಮಸ್ಯೆ ಪರಿಹರಿಸಲಾಗುವುದು ಎಂದು ಯುಐಡಿಎಐ ಭರವಸೆ ನೀಡಿದೆ.
ಪ್ರಧಾನಿಗೆ ಮಮತಾ ಬ್ಯಾನರ್ಜಿ ಪತ್ರ; ಪಶ್ಚಿಮ ಬಂಗಾಳದಲ್ಲಿ ಹಲವರ ಆಧಾರ್ ಕಾರ್ಡ್ ರದ್ದತಿಗೆ ಕಾರಣ ಕೇಳಿದ ದೀದಿ
ಆಧಾರ್ ಕಾರ್ಡ್ ದಾರರು ಯಾವುದೇ ಸಮಸ್ಯೆಯಿದ್ದರೆ ಯುಐಡಿಎಐ ಲಿಂಕ್ https://uidai.gov.in/en/contact-support/feedback.htmlನಲ್ಲಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಬಹುದು. ಅಂಥ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ಪರಿಹರಿಸಲಾಗುವುದು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ದಿಢೀರ್ ಆಗಿ ಕೆಲವು ಜನರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಇದಕ್ಕೇನು ಕಾರಣ ಎಂದು ಪ್ರಶ್ನಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದು ಸಾಮಾಜಿಕ ನ್ಯಾಯದ ವಿರುದ್ಧವಾದ ಕ್ರಮ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ಈ ಜನರಿಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದರು.
'ಈ ಸಂಬಂಧ ಯಾವುದೇ ವಿಚಾರಣೆ ಅಥವಾ ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ಪಡೆಯದೆ ಹಾಗೂ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನವದೆಹಲಿಯಲ್ಲಿರುವ ಯುಐಡಿಎಐ ಮುಖ್ಯ ಕಚೇರಿ ವ್ಯಕ್ತಿಗಳು ಹಾಗೂ ಅವರ ಕುಟುಂಬಕ್ಕೆ ನೇರವಾಗಿ ಪತ್ರಗಳನ್ನು ನೀಡಿದ್ದು, ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ' ಎಂದು ಬ್ಯಾನರ್ಜಿ ಆರೋಪಿಸಿದ್ದರು.
ಕೇಂದ್ರದ ನಿಯಮಕ್ಕೆ ತಲೆಬಾಗಿದ ಚೀನಾ ಮೊಬೈಲ್ ದೈತ್ಯ, ಭಾರತದ ಕಂಪನಿಗಳ ಜೊತೆ ಒಪ್ಪಂದ!
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀದ್ರ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ನಾಗರಿಕರ ರಾಷ್ಟ್ರೀಯ ನೋಂದಣಿ (NRC) ಜಾರಿಗೆ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಈಗಾಗಲೇ ನೋಟು ಅಮಾನ್ಯೀಕರಣದ ಮೂಲಕ ನೀವು ಜನರಿಗೆ ಹಿಂಸೆ ನೀಡಿದ್ದೀರಿ. ಆ ಬಳಿಕ ಆಧಾರ್ ಕಾರ್ಡ್ ಮಾಡುವಂತೆ ಒತ್ತಡ ಹೇರಿದ್ದೀರಿ. ಈಗ ಆಧಾರ್ ಕಾರ್ಡ್ ರದ್ದುಗೊಳಿಸಿರುವ ಜೊತೆಗೆ 1000ರೂ. ದಂಡ ಕೂಡ ವಿಧಿಸಿದ್ದೀರಿ ಎಂದು ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿಕಾರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.