
ನವದೆಹಲಿ(ಸೆ.28): ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಾಣಿಜ್ಯ ಸಮರದಿಂದಾಗಿ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಸ್ತುತ ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಮತ್ತು ವ್ಯಾಪಾರ ಸಮರ ನಡೆಯುತ್ತಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಆಮದು ಮತ್ತು ರಫ್ತು ಸಮಸ್ಯೆ ಸೃಷ್ಟಿಯಾಗುತ್ತಿದೆ. ಜೊತೆಗೆ ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ಅತ್ಯಧಿಕ ತೆರಿಗೆ ವಿಧಿಸುತ್ತಿದ್ದು, ಚೀನಾದಲ್ಲೂ ಅಮೆರಿಕ ಉತ್ಪನ್ನಗಳಿಗೆ ನಿರ್ಬಂಧ, ಆಮದು ತೆರಿಗೆ ವಿಧಿಸಲಾಗುತ್ತಿದೆ.
ಆದರೆ ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತು ವಿಶೇಷವಾಗಿ ಅಮೆರಿಕದಲ್ಲಿ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದ ಬೇಡಿಕೆ ವ್ಯಕ್ತವಾಗಿದೆ. ಭಾರತದಿಂದ ಯಂತ್ರೋಪಕರಣ, ವಾಹನ ಮತ್ತು ಬಿಡಿಭಾಗಗಳು, ಎಲೆಕ್ಟ್ರಾನಿಕ್ ಉತ್ಪನ್ನ, ಕೆಮಿಕಲ್, ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳು ರಫ್ತಾಗುತ್ತಿದ್ದು, ಅಮೆರಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುವ ಜೊತೆಗೆ ಬೇಡಿಕೆ ಕುದುರಿಸಿಕೊಂಡಿವೆ.
ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತೀಯ ವಾಣಿಜ್ಯ ಮಾರುಕಟ್ಟೆಗೆ ಸಂಕಷ್ಟ ಒದಗಿದ್ದರೂ, ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಜತೆಗೆ, ಜಾಗತಿಕವಾಗಿ ಅವಕಾಶ ತೆರೆದಿದೆ ಎಂದು ಸಚಿವ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.