ಮಗು ನಿರೀಕ್ಷೆಯಲ್ಲಿರೋ ದಂಪತಿ ಫೈನಾನ್ಷಿಯಲ್‌ ಪ್ಲ್ಯಾನ್‌ ಹೇಗಿರಬೇಕು?

By Suvarna News  |  First Published Aug 5, 2021, 5:22 PM IST

ಮಗು ಹುಟ್ಟಿದ ಬಳಿಕ ಕುಟುಂಬದ ವೆಚ್ಚಗಳು ಹೆಚ್ಚೋದು ಸಹಜ. ಹೀಗಾಗಿ ಮಗುವಿನ ನಿರೀಕ್ಷೆಯಲ್ಲಿರೋ ದಂಪತಿ ಈ ಬಗ್ಗೆ ಸೂಕ್ತ ಫೈನಾನ್ಷಿಯಲ್‌ ಪ್ಲ್ಯಾನಿಂಗ್‌ ಮಾಡೋದು ಅಗತ್ಯ.


ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳೋದು ಪ್ರತಿ ದಂಪತಿಗೂ ಅತ್ಯಂತ ಆನಂದದ ಕ್ಷಣ. ಆದ್ರೆ ಈ ಮಧುರ ಕ್ಷಣಗಳನ್ನು ಆಸ್ವಾದಿಸಲು ಆರ್ಥಿಕ ಚೈತನ್ಯವೂ ಅಗತ್ಯ. ವೈದ್ಯಕೀಯ ವೆಚ್ಚದಿಂದ ಹಿಡಿದು ಮಗುವಿನ ಶೈಕ್ಷಣಿಕ ವೆಚ್ಚಗಳ ತನಕ ಪ್ರತಿಯೊಂದನ್ನೂ ಪ್ಲ್ಯಾನ್‌ ಮಾಡೋದು ಇಂದಿನ ಪರಿಸ್ಥಿತಿಯಲ್ಲಿಅಗತ್ಯ.ಯಾವೆಲ್ಲಕಾರಣಗಳಿಗಾಗಿ ಮಗುವಿನ ನಿರೀಕ್ಷೆಯಲ್ಲಿರೋರು ಫೈನಾನ್ಷಿಯಲ್‌ ಪ್ಲ್ಯಾನಿಂಗ್ ಮಾಡೋದು ಅಗತ್ಯ? ಇಲ್ಲಿದೆ ಮಾಹಿತಿ.

ಇ-ರುಪಿ ಅಂದ್ರೆ ಏನು? ಇದ್ರ ಪ್ರಯೋಜನಗಳೇನು?

Tap to resize

Latest Videos

undefined

ಗರ್ಭಧಾರಣೆಗೆ ಸಂಬಂಧಿಸಿದ ವೆಚ್ಚ
ಗರ್ಭಿಣಿಯೆಂದು ತಿಳಿದ ಬಳಿಕ ನಿರಂತರ ವೈದ್ಯಕೀಯ ತಪಾಸಣೆಗಳು, ವೈದ್ಯರ ಸಲಹೆ ಹಾಗೂ ಕಾಳಜಿಯ ಅಗತ್ಯವಿದೆ. ಒಂದು ವೇಳೆ ಗರ್ಭಧಾರಣೆ‌ ಸಮಯದಲ್ಲಿ ಏನಾದ್ರೂ ಸಮಸ್ಯೆಗಳಿದ್ರೆ ಆಗ ವೈದ್ಯಕೀಯ ವೆಚ್ಚಗಳು ಇನ್ನೂ ಹೆಚ್ಚಾಗುತ್ತವೆ. ಔಷಧ ಹಾಗೂ ಆಸ್ಪತ್ರೆ ವೆಚ್ಚಗಳನ್ನು ಭರಿಸಲು ವಿಮೆ ಅಥವಾ ಒಂದಿಷ್ಟು ಹಣ ಕಾಯ್ದಿರಿಸೋದು ಅಗತ್ಯ. 
 

ರಜೆ ಹಾಕೋದು ಅನಿವಾರ್ಯ
ಉದ್ಯೋಗಸ್ಥ ಮಹಿಳೆ ಹೆರಿಗೆ ಹಾಗೂ ಮಗುವಿನ ಆರೈಕೆಗಾಗಿ ರಜೆ ಹಾಕೋದು ಅನಿವಾರ್ಯ. ಪ್ರಸಕ್ತ ಭಾರತದಲ್ಲಿ 6 ತಿಂಗಳ ತನಕ ವೇತನಸಹಿತ ರಜಾ ಸೌಲಭ್ಯವನ್ನು ಎಲ್ಲ ಸರ್ಕಾರಿ ಹಾಗೂ ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಕಲ್ಪಿಸಲಾಗಿದೆ. ಆದರೂ ಗರ್ಭಿಣಿಯಾಗಿರೋ ಸಮಯದಲ್ಲಿಸಮಸ್ಯೆಗಳಿದ್ರೆ ಅಥವಾ ಹೆರಿಗೆ ಬಳಿಕ ಮಗುವಿನ ಆರೈಕೆಗೆ ನೆರವು ನೀಡಲು ಅಮ್ಮ ಅಥವಾ ಅತ್ತೆಯಿಲ್ಲದಿದ್ರೆ ರಜೆಯನ್ನು ಮತ್ತಷ್ಟು ವಿಸ್ತರಿಸೋದು ಆಕೆಗೆ ಅನಿವಾರ್ಯ. ಇಂಥ ಸಮಯದಲ್ಲಿ ವೇತನ ಸಿಗದಿರಬಹುದು. ಅಥವಾ ಹೆರಿಗೆ ಬಳಿಕ ಉದ್ಯೋಗವನ್ನೇ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಇಂಥ ಸಮಯದಲ್ಲಿಸಹಜವಾಗಿ ಆದಾಯದಲ್ಲಿಇಳಿಕೆಯಾಗುತ್ತದೆ. ಹೀಗಾಗಿ ಒಬ್ಬರ ದುಡಿಮೆಯಲ್ಲೇ ಸಂಸಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ಎಲ್ಲ ಪರಿಸ್ಥಿತಿಗಳನ್ನು ಎದುರಿಸಲು ಮೊದಲೇ ಸಿದ್ಧತೆ ಮಾಡಿಕೊಳ್ಳೋದು ಅಗತ್ಯ.

ಗೃಹ ಸಾಲದ EMI ಮೊತ್ತ ತಗ್ಗಿಸೋದು ಹೇಗೆ?

ಮಗುವಿನ ಆಗಮನಕ್ಕೆ ಸಿದ್ಧತೆ
ಪುಟ್ಟ ಕಂದಮ್ಮ ಮನೆಗೆ ಬರುತ್ತಿದೆ ಎಂಬುದು ಇಡೀ ಕುಟುಂಬಕ್ಕೆ ಖುಷಿಯ ಸಂಗತಿ. ಹೀಗಾಗಿ ಮಗುವನ್ನು ಬರ ಮಾಡಿಕೊಳ್ಳಲು ಸಿದ್ಧತೆ ಭರದಿಂದಲೇ ಸಾಗುತ್ತದೆ. ಸೀಮಂತ ಶಾಸ್ತ್ರದಿಂದ ಹಿಡಿದು ನಾಮಕರಣ ಮುಂತಾದ ಕಾರ್ಯಕ್ರಮಗಳಿಗೆ ಸಾಕಷ್ಟು ಖರ್ಚಾಗೋ ಕಾರಣ ಮೊದಲೇ ಪ್ಲ್ಯಾನ್‌ ಮಾಡೋದು ಅಗತ್ಯ. ಅಲ್ಲದೆ, ಮಗುವಿಗೆ ಬಟ್ಟೆ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಕೂಡ ಒಂದಿಷ್ಟು ಹಣ ತೆಗೆದಿಡಬೇಕಾಗುತ್ತದೆ.

ಹೆರಿಗೆ ಹಾಗೂ ಆಸ್ಪತ್ರೆ ವೆಚ್ಚ
ಇದು ಅತ್ಯಂತ ದುಬಾರಿ ವೆಚ್ಚ. ಮೊದಲೇ ಆರೋಗ್ಯ ವಿಮೆ ಮಾಡಿಸಿಡೋದು ಒಳ್ಳೆಯದು. ಇದ್ರಿಂದ ಹೆರಿಗೆ ಹಾಗೂ ಆಸ್ಪತ್ರೆ ವೆಚ್ಚಗಳು ಹೊರೆ ಅನಿಸೋದಿಲ್ಲ. ಉದ್ಯೋಗಿಗಳಿಗೆ ಕಂಪನಿಗಳಿಂದಲೇ ಆರೋಗ್ಯ ವಿಮೆ ಕವರೇಜ್‌ ಇರೋ ಕಾರಣ ಅದನ್ನು ಕೂಡ ಬಳಸಿಕೊಳ್ಳಬಹುದು. ಆದ್ರೆ ಎಲ್ಲ ವೆಚ್ಚಗಳು ವಿಮೆಯಲ್ಲಿ ಕವರ್‌ ಆಗೋದಿಲ್ಲ. ಹೀಗಾಗಿ ಸ್ವಲ್ಪ ಹಣವನ್ನು ಕೈಯಿಂದಲೇ ಭರಿಸಬೇಕಾಗೋ ಕಾರಣ ಅದಕ್ಕೆ ವ್ಯವಸ್ಥೆ ಮಾಡಿಡೋದು ಉತ್ತಮ.

ಬಾಣಂತನ ಹಾಗೂ ಮಗುವಿನ ಆರೈಕೆ
ಹೆರಿಗೆ ಬಳಿಕ ಬಾಣಂತನ ಹಾಗೂ ಮಗುವಿನ ಆರೈಕೆಗೆ ಕೂಡ ಒಂದಿಷ್ಟು ಹಣ ತೆಗೆದಿಡೋದು ಅಗತ್ಯ. ಮನೆಯ ಹಿರಿಯರ ನೆರವು ಇಲ್ಲದಿದ್ರೆ ಬಾಣಂತನ ಮಾಡಲು ಯಾರನ್ನಾದ್ರೂ ಸಂಬಳ ನೀಡಿ ನೇಮಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಮೊದಲೇ ಯೋಚಿಸಿ ನಿರ್ಧಾರ ಕೈಗೊಳ್ಳೋದು ಅಗತ್ಯ.

ಮಕ್ಕಳ ತಜ್ಞರು ಹಾಗೂ ಲಸಿಕೆ ವೆಚ್ಚ
ಮಕ್ಕಳಿಗೆ ರೋಗಗಳು ಬಾರದಂತೆ ತಡೆಯಲು ಸಮಯಕ್ಕೆ ಸರಿಯಾಗಿ ವಿವಿಧ ಲಸಿಕೆಗಳನ್ನು ನೀಡೋದು ಅಗತ್ಯ. ಅಲ್ಲದೆ, ಪುಟ್ಟ ಮಕ್ಕಳು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ತಿಂಗಳಿಗೊಮ್ಮೆಯಾದ್ರೂ ಮಕ್ಕಳ ತಜ್ಞ ವೈದ್ಯರ ಬಳಿ ಹೋಗೋದು ಅನಿವಾರ್ಯ. ಹೀಗಾಗಿ ಈ ಬಗ್ಗೆಯೂ ಮೊದಲೇ ಯೋಚಿಸಿ ಹಣದ ಅಡಚಣೆಯಾಗದಂತೆ ಎಚ್ಚರ ವಹಿಸೋದು ಉತ್ತಮ.

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? 

ಶಿಕ್ಷಣ ವೆಚ್ಚ
ಮಗು ಹುಟ್ಟಿದ ತಕ್ಷಣ ಅದರ ಶಿಕ್ಷಣದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇನ್ನೂ ಸಮಯವಿದೆ ಎಂದು ಸುಮ್ಮನಿರೋದು ತಪ್ಪು. ಈಗಂತೂ 3 ವರ್ಷಕ್ಕೆ ಮಗುವನ್ನು ಶಾಲೆಗೆ ಸೇರಿಸಿ ಬಿಡುತ್ತೇವೆ. ಅಲ್ಲದೆ, ಶಾಲಾ ಶುಲ್ಕ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಹೀಗಾಗಿ ದುಬಾರಿ ಶಾಲಾ ಶುಲ್ಕ ಭರಿಸೋ ಬಗ್ಗೆ ಮೊದಲೇ ಯೋಜನೆ ರೂಪಿಸೋದು ಅಗತ್ಯ. 

click me!