ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡುತ್ತಿದ್ದರೆ ಇವುಗಳಲ್ಲಿ ಏ.1ರಿಂದ ಆಗುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಹಾಗೆಯೇ ಮಹಿಳೆಯರಿಗಾಗಿ ಬಜೆಟ್ ನಲ್ಲಿ ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಕೂಡ ಏ.1ರಿಂದ ಅಂಚೆ ಕಚೇರಿಗಳಲ್ಲಿ ಲಭಿಸಲಿದೆ.
ನವದೆಹಲಿ (ಮಾ.30): ಹೂಡಿಕೆ ಅಥವಾ ಉಳಿತಾಯದ ವಿಚಾರಕ್ಕೆ ಬಂದರೆ ಭಾರತೀಯರಿಗೆ ಇಂದಿಗೂ ಅಂಚೆ ಕಚೇರಿ ಅಚ್ಚುಮೆಚ್ಚು. ಇದಕ್ಕೆ ಮುಖ್ಯಕಾರಣ ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿರ್ಟನ್ಸ್ ಕೂಡ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರ್ ಬಿಐ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಏರಿಕೆಯಾಗಿದೆ. ಹೀಗಾಗಿ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ ಕೂಡ, ಇನ್ನುಅಂಚೆ ಕಚೇರಿಯ ಕೆಲವು ಜನಪ್ರಿಯ ಯೋಜನೆಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಘೋಷಿಸಿದ್ದಾರೆ. ಅದರ ಭಾಗವಾಗಿ ಅಂಚೆ ಕಚೇರಿಯ ಕೆಲವು ಜನಪ್ರಿಯ ಯೋಜನೆಗಳಲ್ಲಿ ಏ.1ರಿಂದ ಬದಲಾಣೆಯಾಗಲಿವೆ. ಹಾಗಾದ್ರೆ ಅಂಚೆ ಕಚೇರಿಯ ಯಾವೆಲ್ಲ ಯೋಜನೆಗಳಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ? ಅಂಚೆ ಕಚೇರಿಯಲ್ಲಿ ಹೊಸದಾಗಿ ಯಾವ ಯೋಜನೆಯನ್ನು ಪರಿಚಯಿಸಲಾಗಿದೆ? ಇಲ್ಲಿದೆ ಮಾಹಿತಿ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): 2023ನೇ ಕೇಂದ್ರ ಬಜೆಟ್ ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಹೂಡಿಕೆ ಮಿತಿಯನ್ನು 15ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ಹಿರಿಯ ನಾಗರಿಕರು ಪ್ರತ್ಯೇಕ ಎಸ್ ಸಿಎಸ್ ಎಸ್ ಖಾತೆಗಳನ್ನು ತೆರೆದು ಪ್ರತಿ ಖಾತೆಯಲ್ಲಿ 30ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಹೆಚ್ಚಳ 2023ರ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ನಿವೃತ್ತಿ ಬಳಿಕ ಹಿರಿಯ ನಾಗರಿಕರಿಗೆ ನಂಬಿಕಾರ್ಹ ಹಾಗೂ ಸುರಕ್ಷಿತ ಆದಾಯದ ಮೂಲವನ್ನು ಒದಗಿಸುವ ಗುರಿಯೊಂದಿಗೆ ಸರ್ಕಾರಿ ಬೆಂಬಲಿತ ಈ ಯೋಜನೆಯನ್ನು 2004ರಲ್ಲಿ ಪ್ರಾರಂಭಿಸಲಾಗಿತ್ತು. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಎಸ್ ಸಿಎಸ್ ಎಸ್ ಬಡ್ಡಿದರ ಶೇ.8ರಷ್ಟಿದೆ. 55 ವರ್ಷದಿಂದ 60 ವರ್ಷಗಳ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 1000 ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು. ಹೂಡಿಕೆದಾರರು ಬಯಸಿದ್ರೆ ಮತ್ತೆ ಮೂರು ವರ್ಷ ವಿಸ್ತರಿಸಲು ಅವಕಾಶವಿದೆ.
ಮಾ.31ಕ್ಕೆ ಕೊನೆಗೊಳ್ಳಲಿವೆ ಈ ನಾಲ್ಕು ಬ್ಯಾಂಕ್ ಗಳ ವಿಶೇಷ FD ಯೋಜನೆಗಳು
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS):ಕೇಂದ್ರ ಬಜೆಟ್ 2023ರಲ್ಲಿ ಮಾಡಿರುವ ಘೋಷಣೆ ಅನ್ವಯ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಒಂದೇ ಖಾತೆಗೆ ಹೂಡಿಕೆ ಮಿತಿಯನ್ನು 4ಲಕ್ಷ ರೂ.ನಿಂದ 9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆ ಹೂಡಿಕೆ ಮಿತಿಯನ್ನು 9ಲಕ್ಷ ರೂ.ನಿಂದ 15ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳ ಏ.1ರಿಂದ ಜಾರಿಗೆ ಬರಲಿದೆ. ಪಿಒಎಂಐಎಸ್ ಹೂಡಿಕೆದಾರರು ಪ್ರತಿ ತಿಂಗಳು ಬಡ್ಡಿ ಹಣವನ್ನು ಪಡೆಯುತ್ತಾರೆ. ಪ್ರಸ್ತುತ ಜನವರಿ-ಮಾರ್ಚ್ ಅವಧಿಗೆ ಬಡ್ಡಿದರ ಶೇ.7.1ರಷ್ಟಿದೆ. ಎಂಐಎಸ್ ಖಾತೆ ಐದು ವರ್ಷಗಳ ಅವಧಿಯದ್ದಾಗಿದೆ. ಒಂದು ವೇಳೆ ಈ ಖಾತೆಯನ್ನು ಪ್ರಾರಂಭಿಸಿದ ಮೂರು ವರ್ಷಗಳ ಬಳಿಕ ಕ್ಲೋಸ್ ಮಾಡಿದರೆ ಶೇ.1ರಷ್ಟು ಮೊತ್ತವನ್ನು ಕಡಿತ ಮಾಡಲಾಗುತ್ತದೆ.
ವಿವಾಹ ಸಮಯದಲ್ಲಿ ಸ್ವೀಕರಿಸುವ ಸ್ತ್ರೀಧನಕ್ಕೆ ತೆರಿಗೆ ಇದೆಯಾ? ಪ್ರತಿಯೊಬ್ಬ ಮಹಿಳೆಗೂ ಈ ವಿಷಯ ತಿಳಿದಿರಲೇಬೇಕು
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
2023ನೇ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಘೋಷಣೆ ಮಾಡಿದ್ದಾರೆ. ಇದು ಮಹಿಳಾ ಹೂಡಿಕೆದಾರರಿಗೆ ರೂಪಿಸಿರುವ ಯೋಜನೆಯಾಗಿದೆ. ಇದು 2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಬಾರಿಗೆ 2ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಈ ಬಡ್ಡಿ ದರ ಸ್ಥಿರವಾಗಿದ್ದು, ಬದಲಾವಣೆ ಆಗೋದಿಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಪರಿಚಯಿಸಲಾಗಿದೆ.