ಆಸ್ಕರ್ ಪ್ರಶಸ್ತಿ ಜಯಿಸಿದ ತಂಡಗಳಿಗೆ ಡ್ಯುರೆಕ್ಸ್ ಅಭಿನಂದನೆ; ಹೀಗೂ ಮಾರ್ಕೆಟಿಂಗ್ ಮಾಡ್ಬಹುದಾ ಎಂದ ನೆಟ್ಟಿಗರು!

Published : Mar 17, 2023, 05:44 PM IST
ಆಸ್ಕರ್ ಪ್ರಶಸ್ತಿ ಜಯಿಸಿದ ತಂಡಗಳಿಗೆ ಡ್ಯುರೆಕ್ಸ್ ಅಭಿನಂದನೆ; ಹೀಗೂ ಮಾರ್ಕೆಟಿಂಗ್ ಮಾಡ್ಬಹುದಾ ಎಂದ ನೆಟ್ಟಿಗರು!

ಸಾರಾಂಶ

ಭಾರತಕ್ಕೆ ಇದೇ ಮೊದಲ ಬಾರಿಗೆ ಎರಡು ಆಸ್ಕರ್ ಪ್ರಶಸ್ತಿಗಳು ದೊರಕಿವೆ. ಸೋಷಿಯಲ್  ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಕಾಂಡೋಮ್ ಕಂಪನಿ ಡ್ಯುರೆಕ್ಸ್ ಹಾಕಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟ್ ನೋಡಿ, ಇವರು ಯಾವುದನ್ನು ಬೇಕಿದ್ರೂ ಸೆಕ್ಸ್ ಜೊತೆಗೆ ಲಿಂಕ್ ಮಾಡಬಲ್ಲರು ಎಂದಿರುವ ನೆಟ್ಟಿಗರು, ಹೀಗೂ ಮಾರ್ಕೆಟಿಂಗ್ ಮಾಡ್ಬಹುದಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.    

ನವದೆಹಲಿ (ಮಾ.17):ಭಾರತೀಯ ಚಿತ್ರರಂಗದ ಅದೆಷ್ಟೋ ವರ್ಷಗಳ ಆಸ್ಕರ್ ಕನಸು ಈ ವರ್ಷ ನನಸಾಗಿದೆ. 2023ನೇ ಸಾಲಿನಲ್ಲಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಿಕ್ಕಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಆರ್ ಆರ್ ಆರ್ ಸಿನಿಮಾದ 'ನಾಟು ನಾಡು' ಹಾಡು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಗಳಿಸಿದ್ದರೆ, ನೆಟ್ ಫ್ಲಿಕ್ಸ್ ಮೂಲ ಡಾಕ್ಯುಮೆಂಟರಿ 'ದಿ ಎಲಿಫೆಂಟ್ ವಿಸ್ಪರ್' ಬೆಸ್ಟ್ ಡಾಕ್ಯುಮೆಂಟರಿ ಕಿರುಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಆಸ್ಕರ್ ಪ್ರಶಸ್ತಿ ಗಳಿಸಿದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದ ತುಂಬಾ ಆಸ್ಕರ್ ಪ್ರಶಸ್ತಿ ಸ್ವೀಕಾರ ಸಮಾರಂಭದ ವಿಡಿಯೋಗಳು ಹಾಗೂ ಫೋಟೋಗಳು ತುಂಬಿ ಹೋಗಿವೆ. ನೆಟ್ಟಿಗರು ಕೂಡ ಈ ಸಂಭ್ರಮವನ್ನು ಇಂಟರ್ ನೆಟ್ ಜಗತ್ತಿನಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಕೆಲವು ಬ್ರ್ಯಾಂಡ್ ಗಳು ಆಸ್ಕರ್ ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ತಮ್ಮ ಬ್ರ್ಯಾಂಡ್ ಪ್ರಚಾರ ಕೂಡ ಮಾಡುತ್ತಿವೆ. ಅದರಲ್ಲೂ ಕಾಂಡೋಮ್ ಕಂಪನಿ ಡುರೆಕ್ಸ್ ಇಂಡಿಯಾ ಆಸ್ಕರ್ ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬಂದಿವೆ. ಡ್ಯುರೆಕ್ಸ್ ಕಂಪನಿಯ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡಗಳ ಸೃಜನಶೀಲತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. 

'ದಿ ಎಲಿಫೆಂಟ್ ವಿಸ್ಪರ್' ಹಾಗೂ 'ಆರ್ ಆರ್ ಆರ್' ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಡುರೆಕ್ಸ್ ಇಂಡಿಯಾ ಇನ್ ಸ್ಟಾಗ್ರಾಮ್ ನಲ್ಲಿ ಚಿತ್ರವೊಂದನ್ನು ಶೇರ್ ಮಾಡಿದೆ. ಈ ಚಿತ್ರಕ್ಕೆ ಈ ರೀತಿ ಶೀರ್ಷಿಕೆ ನೀಡಲಾಗಿದೆ-'ಮಂಡೇ ಬ್ಲೂಸ್......ಯಾರದು?' ಎಂದು ಪ್ರಶ್ನಿಸಲಾಗಿದ್ದು, ಅದಕ್ಕೆ ನೀಡಿರುವ ಉತ್ತರ ಹೀಗಿದೆ: 'WHISPERing… to winning screams! Indeed a gRRReat night'. ಇನ್ ಸ್ಟಾಗ್ರಾಮ್ ನಲ್ಲಿ ಡ್ಯುರೆಕ್ಸ್ ಇಂಡಿಯಾದ  ಈ ಪೋಸ್ಟ್ ಗೆ ಅನೇಕ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಕ್ರಿಯಾಶೀಲ ಸಂದೇಶವನ್ನು ಸೃಷ್ಟಿಸಿದ ಕಂಪನಿಯ ಮಾರ್ಕೆಟಿಂಗ್ ತಂಡವನ್ನು ಕೆಲವರು ಅಭಿನಂದಿಸಿದ್ದಾರೆ ಕೂಡ. 'ಉತ್ತಮ ಪಿಆರ್ ಗಾಗಿ ಡುರೆಕ್ಸ್ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು 'ಈಗ ಡ್ಯುರೆಕ್ಸ್ ಮಾರ್ಕೇಟಿಂಗ್ ತಂಡ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ' ಎಂದು ಬರೆದಿದ್ದಾರೆ.ಮತ್ತೊಬ್ಬರು 'ಇವರು ಸೆಕ್ಸ್ ಜೊತೆಗೆ ಯಾವುದನ್ನು ಬೇಕಿದ್ರೂ ಲಿಂಕ್ ಮಾಡಬಲ್ಲರು' ಎಂದು ಕಾಮೆಂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಕೂಡ ಡ್ಯುರೆಕ್ಸ್ ಈ ಪೋಸ್ಟ್ ಹಾಕಿದೆ. 

ಡುರೆಕ್ಸ್ ಕಾಂಡೋಮ್ ಕಂಪನಿ ಇಂಥ ಹಾಸ್ಯಭರಿತ ಕ್ರಿಯಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೆಲವು ಸಂದರ್ಭಗಳಲ್ಲಿ ಕೂಡ ಡುರೆಕ್ಸ್ ಇದೇ ಮಾದರಿಯ ಹಾಸ್ಯಭರಿತ ಸಂದೇಶಗಳ ಮೂಲಕ ತನ್ನ ಬ್ರ್ಯಾಂಡ್ ಪ್ರಚಾರ ಮಾಡಿತ್ತು. ಬಾಲಿವುಡ್ ನಟಿ ಆಲಿಯಾ ಭಟ್ ಮದುವೆಯಾದ ಎರಡು ತಿಂಗಳಿಗೆ ಗರ್ಭಿಣಿಯಾದ ಸಮಯದಲ್ಲಿ ಕೂಡ ಅವರಿಗೆ ಶುಭಾಶಯ ಕೋರಿ ಡುರೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಭಾರಿ ವೈರಲ್ ಆಗಿತ್ತು.ರಣಬೀರ್ ನಟನೆಯ ಏ ದಿಲ್ ಹೇ ಮುಷ್ಕಿಲ್ ಚಿತ್ರದ ಚನ್ನ ಮೆರೆಯಾ ಹಾಡಿನ ಸಾಲನ್ನು ಬಳಿಸಿಕೊಂಡ ಡ್ಯುರೆಕ್ಸ್ ಕಾಂಡೋಮ ಕಂಪನಿ 'ಮೆಹಫಿಲ್ ಮೇ ತೇರಿ, ಹಮ್ ತೋ ಕ್ಲೀಯರ್ಲಿ ನಹಿ ಥೆ' ಎಂದು ಪೋಸ್ಟ್ ಹಾಕಿತ್ತು. ಅಂದರೆ 'ನಿಮ್ಮ ಖುಷಿಯ ಕ್ಷಣದಲ್ಲಿ ಖಂಡಿತ ನಾವು ಇರಲಿಲ್ಲ' ಎಂದು. ಈ ಪೋಸ್ಟ್ ನೋಡಿ ಕೂಡ ನೆಟ್ಟಿಗರು  ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಒಟ್ಟಾರೆ ನಾನಾ ಸಂದರ್ಭ ಹಾಗೂ ಸನ್ನಿವೇಶವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲರ ಗಮನ ಸೆಳೆಯುವಂತಹ ಕ್ರಿಯಾತ್ಮಕ ಪೋಸ್ಟ್ ಗಳನ್ನು ಸೃಷ್ಟಿಸುವ ಡ್ಯುರೆಕ್ಸ್ ಇಂಡಿಯಾದ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡದ ಸೃಜನಶೀಲತೆಗೆ ಮೆಚ್ಚುಗೆ ಸೂಚಿಸಲೇಬೇಕು. 

ಬೆಂಗಳೂರು ನನಗಿಷ್ಟ,ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿ ಇಲ್ಲಿಲ್ಲ: ನಿಖಿಲ್ ಕಾಮತ್

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ