
ಇದು ಬ್ರೆಜಿಲ್‌ನ ಡೈರಿ ಉದ್ಯಮವನ್ನೇ ಬದಲಿಸಿದ ಭಾರತದ ದೇಶಿ ಎತ್ತೊಂದರ ಕತೆ ಇದು. ಅದು 1940ರ ಸಮಯ 10 ವರ್ಷದ ಕೃಷ್ಣ ಗುಜರಾತ್‌ನ ಭಾವನಗರದಿಂದ ಬ್ರೆಜಿಲ್‌ಗೆ ಪ್ರಯಾಣ ಬೆಳೆಸಿದ್ದ, ಹಾಗೂ ಅಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಇಲ್ಲಿ ನಾವು ಯಾವುದೋ ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ, ನಾವು ಭಾರತದ ದೇಸಿ ತಳಿ ಗಿರ್ ಬುಲ್ ಬಗ್ಗೆ ಮಾತನಾಡುತ್ತಿದ್ದೇವೆ. ಗುಜರಾತ್‌ನ ಭಾವನಗರದ ಮಹಾರಾಜ 10 ವರ್ಷದ ಎಳೆಯ ಪ್ರಾಯದ ಈ ಕೃಷ್ಣನನ್ನು ಬ್ರೆಜಿಲ್‌ನ ಹಸುಗಳ ಉದ್ಯಮಿ ಸೆಲ್ಸೋ ಗ್ರಾಸಿಯಾ ಸಿದ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಬ್ರೆಜಿಲ್‌ಗೆ ಕೃಷ್ಣನ ಆಗಮನ ಅಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಆತನ ವಂಶಸ್ಥರು ಅಲ್ಲಿನ ಹೈನೋದ್ಯಮದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಈ ಮೂಲಕ ಬ್ರೆಜಿಲ್‌ನಲ್ಲಿ ದೊಡ್ಡ ಕ್ಷೀರಕ್ರಾಂತಿಗೆ ಕಾರಣವಾದರು. ಬ್ರೆಜಿಲ್‌ನ ಶೇಕಡಾ 80ರಷ್ಟು ಹಾಲಿನ ಉತ್ಪಾದನೆ ಗಿರ್ ತಳಿಯ ಹಸುಗಳಿಂದ ಬರುತ್ತದೆ. ಈ ಹಸುಗಳೆಲ್ಲವೂ ಕೃಷ್ಣನ ವಂಶಾವಳಿಗಳಾಗಿವೆ ಎಂದು ಹೇಳುತ್ತಾರೆ. ಅಂದು ಕೃಷ್ಣನನ್ನು ಭಾರತದಿಂದ ತೆಗೆದುಕೊಂಡು ಹೋದ ಬ್ರೆಜಿಲ್ ಉದ್ಯಮಿ ಸೆಲ್ಸೋ ಗ್ರಾಸಿಯಾ ಸಿದ್ ಅವರ ಮೊಮ್ಮಗನಾದ ಗುಲಿಹೆರ್ಮೆ ಸಚೆಟಿಮ್.
ಈ ಹಸುಗಳು ಗುಜರಾತ್ ಮೂಲದವಾಗಿರುವುದರಿಂದ ಅವರು ತಮ್ಮ ಪ್ರೀತಿಯ ಹಸುಗಳನ್ನು ಗುಜರಾತಿ ಭಾಷೆಯಲ್ಲಿಯೇ ಮಾತನಾಡಿಸುತ್ತಾರಂತೆ. ಕೇಮ್ ಚೋ ಮಜಾ ಮಾ,( ಅಂದರೆ ಹೇಗಿದ್ದೀರಾ, ಎಲ್ಲರೂ ಕ್ಷೇಮವೇ) ಎಂದು ಅವರು ಗುಜರಾತಿ ಭಾಷೆಯಲ್ಲಿಯೇ ಮಾತನಾಡಿಸುತ್ತಾರಂತೆ. ಗುಜರಾತ್‌ನ ದೇಸಿ ಹಸುವನ್ನು ತನಗೆ ಉಡುಗೊರೆ ನೀಡಿ ತನ್ನ ದೇಶದಲ್ಲಿ ಕ್ಷೀರ ಕ್ರಾಂತಿಗೆ ಕಾರಣವಾದ ಭಾವಾನಗರ್‌ನ ಅಂದಿನ ಮಹಾರಾಜನ ಸ್ಮರಣಾರ್ಥ ಪ್ರತಿಮೆಯೊಂದನ್ನು ಅಲ್ಲಿನ ಸಂಸತ್‌ನ ಸಮೀಪ ನಿರ್ಮಾಣ ಮಾಡಲಾಗಿದೆ.
ಇದರ ಜೊತೆಗೆ ಅಲ್ಲಿನ ದೇಶದ ಆರ್ಥಿಕತೆಯಲ್ಲಿ ಗಿರ್ ಹಸುಗಳ ಕ್ಷೀರಕ್ರಾಂತಿಯಿಂದ ಆದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಅಲ್ಲಿ ಅಂಚೆ ಚೀಟಿ ಹಾಗೂ ನಾಣ್ಯಗಳನ್ನು ಕೂಡ ಹೊರತರಲಾಗಿದೆ. ಮತ್ತೊಂದು ಆಸಕ್ತಿಕರ ವಿಚಾರ ಎಂದರೆ, ಬ್ರೆಜಿಲ್‌ನ ಪೆಡಿಗ್ರೀಡ್ ಗಿರ್ ಹಸುಗಳು, ಶುದ್ಧ ಭಾರತೀಯ ಮೂಲ (pure origin India) ಎಂಬ ಟ್ಯಾಗನ್ನು ಕೂಡ ಹೊಂದಿವೆ. ಹಾಗೆಯೇ ಗಿರ್ ಹಸುಗಳ ಮೂಲ ಗುಜರಾತ್ ಆದರೂ ಕೂಡ ಈಗ ಬ್ರೆಜಿಲ್‌ನಲ್ಲಿ ಗುಜರಾತ್‌ಗಿಂತಲೂ ಹೆಚ್ಚು ಗಿರ್ ಹಸುಗಳಿವೆ.
ದಿ ಬೆಟರ್ ಇಂಡಿಯಾದ ಇನ್ಸ್ಟಾ ಪೇಜ್‌ನಲ್ಲಿ ಈ ಬ್ರೆಜಿಲ್‌ನಲ್ಲಿ ಕ್ಷೀರಕ್ರಾಂತಿ ಮಾಡಿದ ಭಾರತೀಯ ಗಿರ್ ಹಸುಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ವಿಚಾರದ ಬಗ್ಗೆ ಸ್ವತಃ ಅನೇಕ ಭಾರತೀಯರಿಗೂ ಗೊತ್ತಿಲ್ಲ, ಹೀಗಾಗಿ ಈ ಪೋಸ್ಟ್ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.