
ನೀವು ಎಷ್ಟು ದುಡಿಮೆ ಮಾಡುತ್ತಿರಿ ಎಂಬುದಕ್ಕಿಂತ ನೀವು ಎಷ್ಟು ಹಣ ಉಳಿಸುತ್ತೀರಿ ಎಂಬುದರ ಮೇಲೆ ನಿಮ್ಮ ಶ್ರೀಮಂತಿಕೆ ನಿಂತಿರುತ್ತದೆ ಎಂಬುದು ಬಹುತೇಕ ಅನುಭವಸ್ಥರು ಹೇಳುವ ಮಾತು. ಹಳೇ ತಲೆಮಾರಿನ ಹಾಗೂ ಈಗಿನ ಅನೇಕ ಮಕ್ಕಳಿಗೆ ಉಳಿತಾಯ ಎಂದರೆ ಏನು ಎಂಬುದೇ ಗೊತ್ತಿಲ್ಲ, ದುಡಿದ ಹಣವನ್ನೆಲ್ಲಾ ಅದೇ ದಿನ ಮುಗಿಸಿದರೆ ಬಹುತೇಕರಿಗೆ ಸಮಾಧಾನ. ಲಕ್ಷ ಲಕ್ಷ ದುಡಿಮೆ ಮಾಡುತ್ತಿದ್ದರು ಕೆಲವರಿಗೆ ತಿಂಗಳಾಂತ್ಯ ಬಂತು ಎಂದರೆ ಜೋಬು ಖಾಲಿ ಖಾಲಿ. ಅದಕ್ಕಿಂತಲೂ ಶೋಚನೀಯ ತಿಂಗಳಾಂತ್ಯಕ್ಕೆ ಸಾಲ ಮಾಡಿ ಬದುಕುವವರ ಕತೆ. ಇನ್ನು ಕೆಲವ ಕಂಡಿದ್ದೆಲ್ಲಾ ಕೊಳ್ಳುವ ಕೊಳ್ಳು ಬಾಕ ಮನಸ್ಥಿತಿಯೂ ಇದಕ್ಕೆ ಕಾರಣ. ಆದರೆ ದುಡಿಮೆ ಎಷ್ಟೇ ಇರಲಿ ಸಣ್ಣದೊಂದು ಉಳಿತಾಯವೊಂದು ನಿಮಗೆ ಉತ್ತಮವಾದ ಆರ್ಥಿಕ ಭದ್ರತೆ ಹಾಗೂ ಭವಿಷ್ಯ ಎರಡನ್ನೂ ರೂಪಿಸಬಲ್ಲದು ಎಂಬ ವಿಚಾರ ನಿಮಗೆ ಗೊತ್ತಾ? ಹೀಗೆ ತಮಗೆ ಬಂದ ಸಂಬಳದಲ್ಲೇ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡಿ 45ರ ಹರೆಯದಲ್ಲಿ ಕೋಟ್ಯಾಧಿಪತಿಯಾದ ವ್ಯಕ್ತಿಯೊಬ್ಬರ ಕತೆ ಇಲ್ಲಿದೆ.
ಬಹುಶಃ ಉಳಿತಾಯ ಮಾಡಬೇಕು ಭವಿಷ್ಯ ಭಧ್ರಪಡಿಸಿಕೊಳ್ಳಬೇಕು ಎಂದು ಬಯಸುವ ಅನೇಕರಿಗೆ ಈ ವ್ಯಕ್ತಿ ಸ್ಪೂರ್ತಿಯಾಗಬಹುದು. ಸರಳವಾಗಿ ಜೀವನ ಮಾಡುವುದರ ಜೊತೆ ನಿರಂತರವಾಗಿ ಉಳಿತಾಯ ಮಾಡುವ ಮೂಲಕ ಸಣ್ಣ ಮೊತ್ತದ ವೇತನ ಇದ್ದ ಹಾಗೂ ಯಾವುದೇ ಸೈಡ್ ಬ್ಯುಸಿನೆಸ್ ಇಲ್ಲದ ಭಾರತೀಯ ವ್ಯಕ್ತಿಯೊಬ್ಬರು 45ರ ಹರೆಯದಲ್ಲಿ 4.7 ಕೋಟಿ ಮೊತ್ತದ ಉಳಿತಾಯ ನಿಧಿಯನ್ನು ಮಾಡಿದ್ದಾರೆ ಎಂಬ ವಿಚಾರವನ್ನು ವ್ಯಕ್ತಿಯೊಬ್ಬರು ರೆಡಿಟ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.
ಈ ಪೋಸ್ಟ್ ಅನ್ನು @u/CAGRGuy ಎಂಬ ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ತಮ್ಮ ಚಿಕ್ಕಪ್ಪ ಒಬ್ಬರು ಸರಳವಾಗಿ ಜೀವಿಸುವ ಮೂಲಕ 45 ನೇ ವಯಸ್ಸಿನಲ್ಲಿ ₹4.7 ಕೋಟಿ ಉಳಿತಾಯ ಮಾಡಿದ್ದಾರೆ. ಅವರು 30 ವರ್ಷಗಳ ಕಾಲ ತಮ್ಮ ಎರಡು ಬೆಡ್‌ರೂಮ್‌ನ ಮನೆಯಲ್ಲೇ ವಾಸಿಸುತ್ತಿದ್ದರು ಹಾಗೂ ತಮ್ಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು ಕಾರಿಗೆ ಬದಲಾಗಿರಲಿಲ್ಲ. ಹಾಲಿಡೇ ಅಂತ ಅವರು ಜಾಲಿ ಮಾಡಿದ್ದೇ ಇಲ್ಲ. ಹಾಗಂತ ಬೇರೆ ವ್ಯವಹಾರಗಳನ್ನು ಆರಂಭಿಸಿರಲಿಲ್ಲ, ಅಥವಾ ಹಣದಿಂದ ಏನೋ ಅದ್ಭುತವಾದುದನ್ನು ಮಾಡಲು ಹೋಗಲಿಲ್ಲ, ಷೇರು ವ್ಯವಹಾರವನ್ನು ಮಾಡಲಿಲ್ಲ, ಅವರ ಆದಾಯದ ಮೂಲವೆಂದರೆ ಸ್ಥಿರವಾಗಿದ್ದ ಕೆಲಸ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಅವರಿಗೆ ಹಣ ಉಳಿಸುವ ಅಭ್ಯಾಸವಿತ್ತು. 1998ರಿಂದಲೇ ಅವರು 10,000 ಸಾವಿರ ರೂಪಾಯಿಯನ್ನು ಮ್ಯುಚುವಲ್ ಫಂಡ್‌ನಲ್ಲಿ ಉಳಿಸುವುದಕ್ಕೆ ಮುಂದಾದರು. ಪ್ರತಿ ಬಾರಿ ಅವರ ಸ್ಯಾಲರಿ ಹೆಚ್ಚಾದಾಗಲೆಲ್ಲಾ ಅವರು ಈ ಮೊತ್ತವನ್ನು ಹೆಚ್ಚಿಸುತ್ತಿದ್ದರು. ಮೊದಲಿಗೆ ಒಂದು ಸಾವಿರ ನಂತರ 2 ಸಾವಿರ ಹಾಗೂ ನಂತರ 5 ಸಾವಿರ ಹೀಗೆ ಅವರು ತಮ್ಮ ಉಳಿತಾಯವನ್ನು ಹೆಚ್ಚಿಸುತ್ತಾ ಹೋದರು.
45ರಲ್ಲಿ ಅವರು ನಿವೃತ್ತರಾದಾಗ ಇದು ಹೇಗೆ ಸಾಧ್ಯ ಎಂದು ನಾನು ಅವರನ್ನು ಕೇಳಿದಾಗ, ಅವರು 45 ನೇ ವಯಸ್ಸಿನಲ್ಲಿ ನಿವೃತ್ತರಾದಾಗ, ಅದನ್ನು ಹೇಗೆ ಮಾಡಿದರು ಎಂದು ನಾನು ಅವರನ್ನು ಕೇಳಿದೆ. ಅವರು ತಮ್ಮ ಪಾಸ್‌ಬುಕ್ ಮತ್ತು ಅಕೌಂಟ್ ಸ್ಟೇಟ್‌ಮೆಂಟ್ ಮುದ್ರಣವನ್ನು ನನಗೆ ನೀಡಿದರು. ಅಲ್ಲದೇ ತಾನು ಸಂಗ್ರಹಿಸಿದ ಒಟ್ಟು ಮೊತ್ತ: 4.7 ಕೋಟಿ ಎಂದು ಅವರು ಹೇಳಿದರು ಎಂದು ರೆಡಿಟ್ ಬಳಕೆದಾರರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ಅವರ ಆರ್ಥಿಕ ಶಿಸ್ತು ಹಾಗೂ ದೀರ್ಘಾಕಾಲಿನ ಹಣ ಉಳಿಕೆಯ ಮನಸ್ಥಿತಿಯನ್ನು ಹೊಗಳಿದರು. ಹೇಗೆ ಸಣ್ಣದೊಂದು ಉಳಿತಾಯ ಹೇಗೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಅವರು ಒಂದು ಉತ್ತಮ ಉದಾಹರಣೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ಅವರು ಹಣ ಉಳಿಸಿರಬಹುದು ಆದರೆ ಜೀವನವನ್ನು ಎಂಜಾಯ್ ಮಾಡಿರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ನಾನು ಉಳಿತಾಯಕ್ಕೆ ಸಿದ್ಧನಿದ್ದೇನೆ, ಆದರೆ ಮೂಲಭೂತ ಸೌಕರ್ಯ ಮತ್ತು ಸಂತೋಷವನ್ನು ತ್ಯಾಗ ಮಾಡುವ ಮೂಲಕ ಅಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಈ 45ರ ಹರೆಯದಲ್ಲಿ ವ್ಯಕ್ತಿ 4 ಕೋಟಿಯ ನೆಟ್‌ವರ್ತ್ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.