Mobile Recharge Scam: ಮೊಬೈಲ್​ ರೀಚಾರ್ಜ್​ ಮಾಡಿಸುವವರಿಗೆ ಶಾಕ್​ ಕೊಟ್ಟ ಟೆಲಿಕಾಂ ಪ್ರಾಧಿಕಾರ​! ಏನಿದು ಹೊಸ ಮೋಸ?

Published : Jul 03, 2025, 10:51 PM ISTUpdated : Jul 04, 2025, 10:25 AM IST
Mobile recharge scam

ಸಾರಾಂಶ

ಇಂದು ಮೊಬೈಲ್​ ರೀಚಾರ್ಜ್​ ಮಾಡದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಅಂಥವರಿಗೆ ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ವಾರ್ನಿಂಗ್​ ಕೊಟ್ಟಿದೆ. ಏನದು ನೋಡಿ... 

ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಮೋಸದ ಜಾಲವೂ ಅಷ್ಟೇ ಹೆಚ್ಚಾಗುತ್ತಿದೆ. ತಮ್ಮೆಲ್ಲಾ ಪ್ರತಿಭೆಗಳನ್ನು ಒಂದು ವರ್ಗ ತಂತ್ರಜ್ಞಾನದ ಉನ್ನತಿಗಾಗಿ ಧಾರೆಯೆರೆಯುತ್ತಿದ್ದರೆ, ಅದೇ ಇನ್ನೊಂದೆಡೆ, ಸೈಬರ್​ ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋಸ ಹೇಗೆ ಮಾಡಬಹುದು ಎನ್ನುವುದನ್ನು ಎಣಿಸುತ್ತಲೇ ಇರುತ್ತಾರೆ. ಪದೇ ಪದೇ ಪೊಲೀಸರು ಈ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರೂ ಜನರು ಮೋಸ ಹೋಗುವುದಂತೂ ತಪ್ಪುತ್ತಿಲ್ಲ. ಇದೀಗ ಆನ್​ಲೈನ್​ ಮೂಲಕ ಮೊಬೈಲ್​ ರೀಚಾರ್ಜ್​ ಮಾಡುವವರಿಗೂ ಶಾಕಿಂಗ್​ ವಿಷ್ಯ ಕೇಳಿಬಂದಿದೆ. ಅಷ್ಟಕ್ಕೂ, ದಿನನಿತ್ಯವೂ ಮೊಬೈಲ್​ ರೀಚಾರ್ಜ್​ ಮಾಡಿಸುವವರು ಕೋಟ್ಯಂತರ ಜನರಿದ್ದಾರೆ. ಅವರ ಪೈಕಿ ಅತ್ಯಧಿಕ ಮಂದಿ ಆನ್​ಲೈನ್​ನಲ್ಲಿಯೇ ಮೊಬೈಲ್​ ರೀಚಾರ್ಜ್​ ಮಾಡಿಸುತ್ತಾರೆ. ಜಿಯೋ, ಏರ್​ಟೆಲ್​, ಬಿಎಸ್​ಎನ್​ಎಲ್​ ಸೇರಿದಂತೆ ಯಾವುದೇ ಕಂಪೆನಿಯ ಮೊಬೈಲ್​ ರೀಚಾರ್ಜ್​ ಮಾಡುವುದಿದ್ದರೂ ಆನ್​ಲೈನ್​ ಮೊರೆ ಹೋಗುವುದು ಸಾಮಾನ್ಯ.

ಆದರೆ ಇದನ್ನೇ ಈಗ ಬಂಡವಾಳವಾಗಿಸಿಕೊಂಡಿರುವ ಸೈಬರ್​ ಕ್ರಿಮಿನಲ್ಸ್​, ಹೊಸ ವಂಚನೆ ಶುರುವಿಟ್ಟುಕೊಂಡಿದ್ದಾರೆ. ಇದಾಗಲೇ ಡಿಜಿಟಲ್​ ಅರೆಸ್ಟ್​ ಬಗ್ಗೆ ಕೇಳಿರುತ್ತೀರಿ, ಯಾವುದೋ ಲಿಂಕ್​ ಕಳಿಸಿ, ಯಾವುದೋ ಗಿಫ್ಟ್​ ಆಮಿಷ ಒಡ್ಡಿ ಅದೆಷ್ಟೋ ಮಂದಿಯಿಂದ ಲಕ್ಷಗಟ್ಟಲೆ ಹಣವನ್ನು ಈ ಸೈಬರ್​ ಅಪರಾಧಿಗಳು ಗುಳುಂ ಮಾಡಿದ್ದಿದೆ. ಎಷ್ಟೋ ಮಂದಿಯ ಬ್ಯಾಂಕ್​ ಖಾತೆಯೂ ಖಾಲಿಯಾಗಿದ್ದಿದಿ. ಒಮ್ಮೆ ನಿಮ್ಮ ಹಣ ಹೋಯಿತು ಎಂದರೆ ಅದು ಅಷ್ಟು ಸುಲಭಕ್ಕೆ ಸಿಗುವುದಂತೂ ಸಾಧ್ಯವೇ ಇಲ್ಲ. ಏಕೆಂದರೆ ಸೈಬರ್​ ಕ್ರೈಂ ಎನ್ನುವುದು ಅಷ್ಟು ವ್ಯವಸ್ಥಿತವಾಗಿ ನಡೆಯುತ್ತಿರುವ ವಂಚನೆಯಾಗಿದೆ. ಇದೀಗ ಅದಕ್ಕೆ ಮೊಬೈಲ್​ ರೀಚಾರ್ಜ್​ ಕೂಡ ಸೇರ್ಪಡೆಯಾಗಿದೆ!

ಈ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದೇಶಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಹಲವಾರು ರೀತಿಯ ವಂಚನೆ ಮೊಬೈಲ್ ರೀಚಾರ್ಜ್​ನಿಂದ ನಡೆಯುತ್ತಿದೆ. ಅದರಲ್ಲಿ ಮುಖ್ಯವಾದದ್ದು, ನೀವು ಬಳಸುತ್ತಿರುವ ಸಿಮ್​ಕಾರ್ಡ್​ ಬಗ್ಗೆ ತಿಳಿದುಕೊಳ್ಳುತ್ತಿರುವ ಈ ವಂಚಕರು, ಅದರಲ್ಲಿ ಆಫರ್​ ನೀಡಲಾಗಿದೆ ಎಂದು ಒಂದು ಲಿಂಕ್​ ಕಳಿಸುತ್ತಾರೆ. ಇದು ನಿಮ್ಮ ಮೊಬೈಲ್​ಗೆ ಮಾತ್ರ ನೀಡಿರುವ ಆಫರ್​. ಈ ಲಿಂಕ್​ ಒತ್ತಿ ಆಫರ್​ ಪಡೆದುಕೊಳ್ಳಬಹುದು ಎನ್ನುತ್ತಾರೆ. ಆಗ ನೀವು ಜಾಗ್ರತರಾಗಬೇಕು. ಒಂದು ವೇಳೆ ನೀವು ಆಫರ್ ಆಸೆಗೆ ಬಲಿಯಾಗಿ ಲಿಂಕ್​ ಒತ್ತಿದರೆ ನಿಮ್ಮ ಬ್ಯಾಂಕ್​ ಖಾತೆ ಖಾಲಿಯಾದೀತು ಎಚ್ಚರ! ಹೆಚ್ಚಾಗಿ ಎಸ್​ಎಂಎಸ್​ಗಳಲ್ಲಿ ಈ ಸಂದೇಶ ಬರುತ್ತದೆ ಎಂದು ಟ್ರಾಯ್​ ಹೇಳಿದೆ.

ಇನ್ನು ಟೆಲಿಕಾಂ ನಿಯಂತ್ರಣದ ಹೆಸರು ಹೇಳಿಕೊಂಡು ಉಚಿತ ಕೊಡುಗೆ ನೀಡುವುದಾಗಿ ನೇರವಾಗಿ ಫೋನ್​ ಕರೆಗಳು ಇಲ್ಲವೇ ಮೆಸೇಜ್​ ಬರುತ್ತಿವೆ. ನೀವು ಇದನ್ನು ನಿಜ ಎಂದು ನಂಬಿ ಲಿಂಕ್​ ಒತ್ತಿದರೆ ಅಥವಾ ಅವರು 1 ಒತ್ತಿ, 2 ಒತ್ತಿ ಎಂದು ಹೇಳಿದಂತೆ ಕೇಳುತ್ತಾ ಹೋದರೆ ಅವರು ನಿಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಒತ್ತಿ ಖಾಲಿ ಮಾಡಿರುತ್ತಾರಷ್ಟೇ! ಇದು ಲಿಂಕ್​ಗಳ ಮಾತಾದರೆ, ಇನ್ನು ಆನ್​ಲೈನ್​ನಲ್ಲಿ ಮೊಬೈಲ್​ ರೀಚಾರ್ಜ್​ ಮಾಡಿಸುವಾಗಲೇ ಮೈಯೆಲ್ಲಾ ಕಣ್ಣಾಗಿರಬೇಕು. ಏಕೆಂದರೆ, ಫೇಕ್​ ವೆಬ್​ಸೈಟ್​ಗಳ ಭರ್ಜರಿ ಆಫರ್​ ಕೊಟ್ಟು ಮೊಬೈಲ್​ ರೀಚಾರ್ಜ್​ ಮಾಡಲು ಉತ್ತೇಜಿಸುತ್ತವೆ. ನೀವು ಮೊಬೈಲ್​ ರೀಚಾರ್ಜ್​ ಎಂದು ಟೈಪ್​ ಮಾಡಿದ ತಕ್ಷಣ ಬರುವುದೇ ಈ ಫೇಕ್​ ವೆಬ್​ಸೈಟ್​ಗಳು. ಅಲ್ಲಿ ನೀಡುವ ಆಫರ್​ ನೋಡಿ ನೀವು ಆಕರ್ಷಿತರಾದರೆ ಅಷ್ಟೇ ಕಥೆ.

ಆದ್ದರಿಂದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು, ನೀವು ಯಾವುದೇ ಸಿಮ್​ಗೆ ರೀಚಾರ್ಜ್​ ಮಾಡಿಸುವುದಿದ್ದರೂ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಎಂದು ಎಚ್ಚರಿಕೆ ನೀಡಿದೆ. ಇಲ್ಲದಿದ್ದರೆ ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಬ್ಯಾಂಕಿಂಗ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ನೀವು ಖದೀಮರ ಕೈಗೆ ನೀಡುತ್ತಿದ್ದೀರಿ ಎಂದು ಅದು ಎಚ್ಚರಿಕೆ ನೀಡಿದೆ. ಆ ಕ್ಷಣದಲ್ಲಿ ನಿಮಗೆ ಆಫರ್​ ನೀಡಿ ರೀಚಾರ್ಜ್​ ಮಾಡಿದಂತೆ ಕಂಡರೂ, ನಿಮ್ಮ ಎಲ್ಲಾ ಮಾಹಿತಿಗಳು ಅವರ ಕೈಯಲ್ಲಿ ಇರುವ ಕಾರಣ, ನಿಮ್ಮ ಅರಿವಿಗೆ ಬಾರದೇ ಬ್ಯಾಂಕ್​ ಖಾತೆ ಖಾಲಿ ಮಾಡಲಾಗುತ್ತದೆ ಎನ್ನುವುದು ಟ್ರಾಯ್​ ಎಚ್ಚರಿಕೆ. ಒಂದು ವೇಳೆ ನಿಮಗೆ ವಂಚನೆ ಆಗಿದ್ದರೆ, ಇಲ್ಲವೇ ಈ ರೀತಿಯ ಸಂದೇಶಗಳು ಬಂದಿದ್ದರೆ, ನಿಮಗೆ ಯಾವುದಾದರೂ ರೀತಿಯ ಅನುಮಾನ ಮೂಡಿದ್ದರೆ, ಕೂಡಲೇ ನೀವು ಈ ಮೋಸದ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಲು ಸೈಬರ್‌ಕ್ರೈಮ್ ವೆಬ್‌ಸೈಟ್ https://Cybercrime.gov.in ಮತ್ತು ಸಂಚಾರ್ ಸಾಥಿ ಪೋರ್ಟಲ್ https://sancharsaathi.gov.in ಸೇರಿದಂತೆ ವರದಿ ಮಾಡಬೇಕು. ಇದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಟ್ರಾಯ್​ಗೆ ಕೂಡ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Aadhaar Card Misuse Check: ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ?: ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ
ರಾತ್ರೋರಾತ್ರಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ 4 ರೂಪಾಯಿ ಇಳಿಸಿದ ಪಾಕಿಸ್ತಾನ, ಭಾರತದಲ್ಲಿ ಇಳಿಕೆಯಾಗುತ್ತಾ?