ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಬಡ್ಡಿ ಗಳಿಕೆ ಮೇಲೆ ತೆರಿಗೆ; ಸಿಬಿಡಿಟಿ ಅಧಿಸೂಚನೆಯಲ್ಲಿ ಮಾಹಿತಿ

By Suvarna NewsFirst Published May 17, 2023, 5:21 PM IST
Highlights

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿ ಗಳಿಕೆಗೂ ತೆರಿಗೆ ವಿಧಿಸಲಾಗುತ್ತದೆ. ಈ ಬಗ್ಗೆ ಸಿಬಿಡಿಟಿ ಇತ್ತೀಚಿನ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ. ಹಾಗಾದ್ರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಮೇಲೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

Business Desk: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಸಿದ್ದರು. ಆದರೆ,ಆ ಸಂದರ್ಭದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ, ಅದಕ್ಕೆ ಸಿಗುವ ಬಡ್ಡಿದರಕ್ಕೆ ತೆರಿಗೆ ವಿಧಿಸಲಾಗುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ.ಆದರೆ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮೇ 16ರ ಅಧಿಸೂಚನೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಮಹಿಳಾ ಸಮ್ಮಾನ್ ಪ್ರಮಾಣಪತ್ರದ ಮೇಲೆ ಗಳಿಸಿದ ಬಡ್ಡಿಗೆ ಟಿಡಿಎಸ್ ಇಲ್ಲ. ಆದರೆ, ಬಡ್ಡಿ ಆದಾಯಕ್ಕೆ ಹೂಡಿಕೆದಾರನ ಆದಾಯ ತೆರಿಗೆ ಸ್ಲ್ಯಾಬ್ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ.ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿಯಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಖಾತೆ ತೆರೆದು ಹೂಡಿಕೆ ಮಾಡಬಹುದು. ಇದು ಮಹಿಳೆಯರಿಗೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದಾದ ಯೋಜನೆಯಾಗಿದೆ. ಈ ಯೋಜನೆ 2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಭಾಗಶಃ ಹೂಡಿಕೆ ಹಿಂಪಡೆಯುವ ಸೌಲಭ್ಯವನ್ನು ಕೂಡ ಇದರಲ್ಲಿ ಕಲ್ಪಿಸಲಾಗಿದೆ.

'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಮೇಲಿನ ಹೂಡಿಕೆಗೆ ಗಳಿಸಿದ ಬಡ್ಡಿ ಆದಾಯ ಒಂದು ಆರ್ಥಿಕ ಸಾಲಿನಲ್ಲಿ 40,000ರೂ. ಮೀರದಿದ್ರೆ ಅಂಥ ಹೂಡಿಕೆ ಮೇಲೆ ಯಾವುದೇ ಟಿಡಿಎಸ್ ಇಲ್ಲ ಎಂದು ಸಿಬಿಡಿಟಿ ಅಧಿಸೂಚನೆಯಲ್ಲಿ ತಿಳಿಸಿದೆ ಎಂದು ನಂಗಿಯ ಆಂಡೆರ್ಸೆನ್ ಇಂಡಿಯಾದ ಪಾಲುದಾರ ನೀರಜ್ ಅಗರ್ ವಾಲಾ ತಿಳಿಸಿದ್ದಾರೆ.'ಇನ್ನು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಿದರೆ ಶೇ.7.5ರಷ್ಟು ಬಡ್ಡಿ ನೀಡಲಾಗುತ್ತದೆ. ಒಂದು ವರ್ಷದಲ್ಲಿ 15,000ರೂ. ಹಾಗೂ ಎರಡು ವರ್ಷದಲ್ಲಿ 32,000ರೂ. ರಿಟರ್ನ್ ಸಿಗುತ್ತದೆ' ಎಂದು ಅಗರ್ ವಾಲಾ ಮಾಹಿತಿ ನೀಡಿದ್ದಾರೆ.

LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!

ಏನಿದು ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ?
ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಬಾರಿಗೆ 2ಲಕ್ಷ ರೂ. ಹೂಡಿಕೆ ಮಾಡಬಹುದು. ಇದು ಎರಡು ವರ್ಷಗಳ ಅವಧಿಯ ಯೋಜನೆಯಾಗಿದೆ.

ಬಡ್ಡಿದರ ಎಷ್ಟು?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಮಾಡಿದ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಹಾಗೆಯೇ ಭಾಗಶಃ ವಿತ್ ಡ್ರಾ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸ್ಥಿರ ಠೇವಣಿಗಳಿಗೆ ಪರ್ಯಾಯವಾದ ಉಳಿತಾಯ ಯೋಜನೆಯಾಗಿದೆ. 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸಿಗುವ ರಿಟರ್ನ್ ಬ್ಯಾಂಕ್ ಎಫ್ ಡಿಗಿಂತ ಹೆಚ್ಚಿದೆ.

ಅರ್ಜಿ ಸಲ್ಲಿಕೆ ಹೇಗೆ?
ದೇಶಾದ್ಯಂತ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಪಿಂಚಣಿ ಉದ್ಯೋಗಿಯ ಹಕ್ಕು, ವೇತನ ಕಡಿತ ತಪ್ಪಾಯಿತೆಂದು ಅದನ್ನು ನಿರಾಕರಿಸುವಂತಿಲ್ಲ: ಸುಪ್ರೀಂ ತೀರ್ಪು

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ತೆರೆದ ಸ್ಮೃತಿ ಇರಾನಿ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಖಾತೆಯನ್ನು ತೆರೆದಿದ್ದಾರೆ. ನವದೆಹಲಿಯ ಸಂಸದ್ ಮಾರ್ಗದ  ಮುಖ್ಯ ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ಇತ್ತೀಚೆಗೆ ತೆರೆದಿದ್ದಾರೆ. ಸಾಮಾನ್ಯ ಅಂಚೆ ಕಚೇರಿ ಗ್ರಾಹಕರಂತೆ ಕೌಂಟರ್ ಗೆ ತೆರಳಿ ಖಾತೆ ತೆರೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಆಕೆಯ ಎಂಎಸ್ ಎಸ್ ಸಿ ಖಾತೆ ತೆರೆದು ಹಾಗೂ ಕಂಪ್ಯೂಟರ್ ಜನರೇಟೆಡ್ ಪಾಸ್ ಬುಕ್ ಅನ್ನು ಅವರಿಗೆ ಕೌಂಟರ್ ನಲ್ಲೇ ನೀಡಲಾಯಿತು. ಈ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಈ ಸಣ್ಣ ಉಳಿತಾಯ ಯೋಜನೆಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.

click me!