ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ದೀಪಾವಳಿ ಅಂದ್ರೆ ಬಂಧುಗಳು, ಸ್ನೇಹಿತರಿಂದ ಉಡುಗೊರೆಗಳನ್ನು ಸ್ವೀಕರಿಸುವ, ಹಂಚುವ ಹಬ್ಬ. ಆದರೆ, ಈ ರೀತಿ ದೀಪಾವಳಿಗೆ ಸ್ನೇಹಿತರು ಹಾಗೂ ಬಂಧುಗಳಿಂದ ಸ್ವೀಕರಿಸುವ ಉಡುಗೊರೆಗಳ ಮೇಲೆ ಕೂಡ ತೆರಿಗೆ ವಿಧಿಸಲಾಗುತ್ತದೆ.
Business Desk: ನವರಾತ್ರಿ ಸಂಭ್ರಮ ಮುಗಿದಿದೆ ಅಷ್ಟೇ. ಆದರೆ, ಇಲ್ಲಿಗೆ ಹಬ್ಬದ ಸಡಗರ ಮುಗಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಹೀಗಾಗಿ ಕೆಲವರು ಈಗಿನಿಂದಲೇ ದೀಪಾವಳಿಗಾಗಿ ಭರ್ಜರಿ ಶಾಪಿಂಗ್ ಪ್ರಾರಂಭಿಸಿದ್ದಾರೆ. ದೀಪಾವಳಿ ಬರೀ ಬೆಳಕಿನ ಹಬ್ಬ ಮಾತ್ರವಲ್ಲ. ಇದು ಸಂಬಂಧಗಳನ್ನು ಬೆಸೆಯುವ ಅವಸರ ಕೂಡ ಹೌದು. ದೀಪಾವಳಿಗೆ ಸಂಬಂಧಿಕರು, ಸ್ನೇಹಿತರಿಗೆ ಸಿಹಿ ಹಾಗೂ ಉಡುಗೊರೆಗಳನ್ನು ಹಂಚುವ ಪರಿಪಾಠವಿದೆ. ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಗಳಿಗೆ, ಮಾರಾಟಗಾರರು ಗ್ರಾಹಕರಿಗೆ ಉಡುಗೊರೆಗಳನ್ನು ಈ ಸಂದರ್ಭದಲ್ಲಿ ನೀಡುತ್ತಾರೆ. ಸಂಬಂಧಿಗಳ ನಡುವೆ ಈ ರೀತಿ ಉಡುಗೊರೆ ಹಂಚಿಕೆಯಾಗುವಾಗ ಕೆಲವೊಮ್ಮೆ ದುಬಾರಿ ಬೆಲೆಯ ವಸ್ತುಗಳು ಕೂಡ ರವಾನೆಯಾಗುತ್ತವೆ. ಹಾಗಂತ ಈ ಉಡುಗೊರೆಗಳ ಮೇಲೆ ಯಾವುದೇ ತೆರಿಗೆ ಬೀಳೋದಿಲ್ಲ ಎಂದು ಭಾವಿಸಿದ್ದರೆ ತಪ್ಪು. ಇಂಥ ದುಬಾರಿ ಗಿಫ್ಟ್ ಗಳು ತೆರಿಗೆ ರೂಪದಲ್ಲಿ ನಿಮ್ಮ ಜೇಬಿನ ಹೊರೆಯನ್ನು ಹೆಚ್ಚಿಸಬಲ್ಲವು ಕೂಡ. ಉಡುಗೊರೆಗಳನ್ನು ನಿಮ್ಮ ನೇರ ಆದಾಯ ಎಂದು ಪರಿಗಣಿಸದಿದ್ದರೂ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2) ಅಡಿಯಲ್ಲಿ ಅವುಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಉಡುಗೊರೆಗಳ ಮೇಲೆ ಹೇಗೆ ತೆರಿಗೆ ವಿಧಿಸಲಾಗುತ್ತದೆ? ಅದಕ್ಕೆ ಸಂಬಂಧಿಸಿದ ನಿಯಮಗಳು ಏನು? ಇಲ್ಲಿದೆ ಮಾಹಿತಿ.
ಸಂಬಂಧಿಕರಿಂದ ಬಂದ ಉಡುಗೊರೆಗಳು
ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ 'ಸಂಬಂಧಿ' ಎಂಬ ವಿವರಣೆ ಅಡಿಯಲ್ಲಿರುವ ಸಂಬಂಧಿ ಉಡುಗೊರೆ ನೀಡಿದರೆ ಅದಕ್ಕೆ ತೆರಿಗೆಯಿಂದ ವಿನಾಯ್ತಿ ಸಿಗುತ್ತದೆ. ವ್ಯಕ್ತಿಯ ಸಂಗಾತಿ ಅಂದರೆ ಪತ್ನಿ ಅಥವಾ ಪತಿ, ಸಹೋದರ ಅಥವಾ ಸಹೋದರಿ, ಆ ವ್ಯಕ್ತಿಯ ಹೆತ್ತವರ ಸಹೋದರ ಅಥವಾ ಸಹೋದರಿ, ವ್ಯಕ್ತಿಯ ವಂಶಸ್ಥರು ಅಥವಾ ಆತ ಅಥವಾ ಆಕೆಯ ಸಂಗಾತಿಯ ವಂಶಸ್ಥರು ಉಡುಗೊರೆ ನೀಡಿದರೆ ಅದಕ್ಕೆ ಯಾವುದೇ ತೆರಿಗೆ ಇರೋದಿಲ್ಲ.
ಈ ಬಾರಿ ದೀಪಾವಳಿ ಮುಹೂರ್ತ ಟ್ರೇಡಿಂಗ್ ಯಾವಾಗ? ಈ ವಿಶೇಷ ವಹಿವಾಟಿನ ದಿನಾಂಕ, ಸಮಯ ಮತ್ತು ಮಹತ್ವ ಹೀಗಿದೆ..
ಸ್ನೇಹಿತರಿಂದ ಬಂದ ಉಡುಗೊರೆಗಳು
ಸ್ನೇಹಿತರಿಂದ ಪಡೆದ ಉಡುಗೊರೆಗಳು 'ಇತರ ಮೂಲಗಳಿಂದ ಬಂದ ಆದಾಯ' ವರ್ಗದಡಿ ಬರುತ್ತವೆ. ಇವುಗಳನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ ಹಾಗೂ ತೆರಿಗೆ ವಿಧಿಸಲಾಗುತ್ತದೆ. ಇನ್ಉ ಉಡುಗೊರೆಗಳ ಮೌಲ್ಯ ಒಂದು ವರ್ಷದಲ್ಲಿ 50,000ರೂ. ಮೀರಿದರೆ ಆಗ ತೆರಿಗೆ ವಿಧಿಸಲಾಗುತ್ತದೆ. ಇನ್ನು ವಾರ್ಷಿಕ 50,000ರೂ.ಗಿಂತ ಕಡಿಮೆ ಮೊತ್ತದ ಉಡುಗೊರೆಗಳ ಮೇಲೆ ಯಾವುದೇ ತೆರಿಗೆ ವಿಧಿಸೋದಿಲ್ಲ. ಮುಖ್ಯವಾಗಿ ಮದುವೆ ಸಂದರ್ಭದಲ್ಲಿ ಸ್ವೀಕರಿಸಿದ ಉಡುಗೊರೆಗಳಿಗೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ.
ಉದ್ಯೋಗದಾತ ಸಂಸ್ಥೆಯಿಂದ ಪಡೆದ ಉಡುಗೊರೆಗಳು
ಉದ್ಯೋಗದಾತ ಸಂಸ್ಥೆಗಳಿಂದ ಪಡೆದ ಉಡುಗೊರೆಗಳ ಮೌಲ್ಯ ವಾರ್ಷಿಕ 5,000ರೂ. ಮೀರಿದರೆ ಆಗ ತೆರಿಗೆ ವಿಧಿಸಲಾಗುತ್ತದೆ. ಇನ್ನು ವಾರ್ಷಿಕ 5,000 ರೂ.ಗಿಂತ ಕಡಿಮೆ ಮೌಲ್ಯದ ಉಡುಗೊರೆಗಳ ಮೇಲೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ. ಇನ್ನು 5,000ರೂ. ಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳ ಮೇಲೆ ಅಗತ್ಯತೆಗಳಿಗೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.
ಆರ್ ಬಿಐ ಇ-ರುಪಿ ಬಳಸೋ ಗ್ರಾಹಕರಿಗೆ ಬ್ಯಾಂಕುಗಳಿಂದ ಬಹುಮಾನ!
ಸ್ಥಿರ ಹಾಗೂ ಚರ ಆಸ್ತಿ ಉಡುಗೊರೆಗಳು
ಸ್ಥಿರ ಹಾಗೂ ಚರ ಆಸ್ತಿಗಳನ್ನು ಉಡುಗೊರೆಯಾಗಿ ನೀಡಿದರೆ, ಸ್ಟ್ಯಾಂಪ್ ಡ್ಯೂಟಿ ಮೌಲ್ಯವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. 50,000ರೂ. ತನಕ ಮೌಲ್ಯದ ಸ್ಥಿರ ಹಾಗೂ ಚರ ಆಸ್ತಿಗಳ ಮೇಲೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ. ಆದರೆ, ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ಒಬ್ಬ ವ್ಯಕ್ತಿ ಅಥವಾ ಎಚ್ ಯುಎಫ್ ಖರೀದಿಸುವ ಸ್ಥಿರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ದೀಪಾವಳಿಗೆ ಯಾರಾದರೂ ನಿಮಗೆ ಉಡುಗೊರೆಗಳನ್ನು ನೀಡಲು ಮುಂದೆ ಬಂದರೆ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ಉಡುಗೊರೆಗಳನ್ನು ಖುಷಿಯಿಂದ ಸ್ವೀಕರಿಸುವ ಸಮಯದಲ್ಲಿ ಇವು ನಿಮ್ಮ ಜೇಬಿನ ಹೊರೆಯನ್ನು ಕೂಡ ಹೆಚ್ಚಿಸುತ್ತವೆ ಎಂಬ ಅಂಶ ನಿಮಗೆ ತಿಳಿದಿರಲಿ.