
ನವದೆಹಲಿ[ಜೂ.25]: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಕಡಿತಗೊಂಡರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ತಮ್ಮ ಜೇಬಿಗೆ ಇಳಿಸುತ್ತಿರುವ ವ್ಯಾಪಾರಿಗಳ ವಿರುದ್ಧ ಗದಾ ಪ್ರಹಾರ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂತಹ ಲಾಭಬುರುಕರನ್ನು ಪತ್ತೆ ಹಚ್ಚಲು ಅಧಿಕಾರಿಗಳನ್ನೇ ಮಳಿಗೆಗಳಿಗೆ ಕಳುಹಿಸಿ ವಸ್ತುಗಳನ್ನು ಖರೀದಿಸುವ ಅಣಕು ಕಾರ್ಯ ನಡೆಸಲಾಗುತ್ತದೆ. ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ.
ಜಿಎಸ್‌ಟಿ ದರಗಳು ಇಳಿಕೆಯಾದರೆ, ವ್ಯತ್ಯಾಸದ ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಆದರೆ ಕೆಲವು ಕಂಪನಿಗಳು, ವ್ಯಾಪಾರಿಗಳು ಆ ಲಾಭವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನವೆಂಬರ್‌ಗೆ ಮುಕ್ತಾಯವಾಗುತ್ತಿದ್ದ ರಾಷ್ಟ್ರೀಯ ಲಾಭ ನಿಗ್ರಹ ಪ್ರಾಧಿಕಾರದ ಅವಧಿಯನ್ನು ಇನ್ನೂ ಎರಡು ವರ್ಷ ಕಾಲ ವಿಸ್ತರಿಸಲಾಗಿದೆ. ಜತೆಗೆ ಲಾಭ ನಿಗ್ರಹದ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳಿಗೆ ಅನುಮತಿ ನೀಡಿದೆ.
ಅದರ ಪ್ರಕಾರ, ಉತ್ಪಾದಕರು, ವಿತರಕರು ಅಥವಾ ಸೇವಾದಾರರು ಸೇರಿದಂತೆ 20 ಪ್ರಮುಖ ಸರಬರಾಜುದಾರರನ್ನು ತೆರಿಗೆ ಅಧಿಕಾರಿಗಳು ಗುರುತಿಸಬೇಕು. ಬಿಲ್‌ಗಳನ್ನು ಪರಿಶೀಲಿಸಲು ಅಣಕು ಖರೀದಿ ನಡೆಸಬೇಕು. ಪರಿಷ್ಕೃತ ಎಂಆರ್‌ಪಿ ದರ ಗಮನಿಸಬೇಕು. ಲಾಭ ಮಾಡುತ್ತಿರುವುದು ಕಂಡುಬಂದರೆ ಸಂಬಂಧಿಸಿದಂತೆ ಸಂಸ್ಥೆಯಿಂದ ಅನುಮತಿ ಪಡೆದು ವ್ಯಾಪಾರಿಗಳ ಆವರಣ ಪರಿಶೀಲಿಸಬಹುದು ಎಂದು ಹೊಸ ನಿಯಮ ಹೇಳುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.