ಕ್ರೆಡಿಟ್‌ ಕಾರ್ಡ್‌ನ ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ? ಈ ಗೊಡವೆಯಿಂದ ಹೊರಬರಲು ಇಲ್ಲಿದೆ 2 ಸುಲಭ ಮಾರ್ಗ!

By Santosh NaikFirst Published Aug 8, 2024, 4:56 PM IST
Highlights

Credit Card Debt: ಭಾರತದ ಮಧ್ಯಮ ವರ್ಗದವರ ಪಾಲಿಗೆ ವೈಯಕ್ತಿಕ ಸಾಲಕ್ಕಿಂತ ಹೊನ್ನಶೂಲವಾಗಿ ಕಾಣುವುದು ಕ್ರೆಡಿಟ್‌ ಕಾರ್ಡ್‌ ಸಾಲ. ಹಾಗೇನಾದರೂ ಒಂದು ಬಾರಿ ನೀವು ಹಣ ಕಟ್ಟದೆ ಕಟ್‌ಬಾಕಿ ಮಾಡಿಕೊಂಡರೆ ನಿಮ್ಮ ಕಥೆ ಮುಗಿದಂತೆಯೇ ಲೆಕ್ಕ.

ಬೆಂಗಳೂರು (ಆ.7): ಇಂದಿನ ಜಮಾನದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ನಿಮ್ಮೂರಿನ ಸಣ್ಣಪುಟ್ಟ ಕೆಲಸ ಮಾಡುವ ಹುಡುಗರೂ ಕೂಡ ಕೈಯಲ್ಲಿ ಕ್ರೆಡಿಟ್‌ ಕಾರ್ಡ್‌  ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಹಲವು ಕಂಪನಿಗಳು ಹಾಗೂ ಬ್ಯಾಂಕ್‌ಗಳು ಯಾವುದೇ ವೆಚ್ಚವಿಲ್ಲದೆ ಫ್ರೀಯಾಗಿ ಕ್ರೆಡಿಟ್‌ ಕಾರ್ಡ್‌ ನೀಡುತ್ತಿವೆ. ಅವರು ನೀಡಿರುವ ಲಿಮಿಟ್‌ಅನ್ನು ನೀವು ಮುಟ್ಟಿದ ಬಳಿಕ, ನಿಮ್ಮ ವಾರ್ಷಿಕ ಶುಲ್ಕ ಕೂಡ ರದ್ದು ಮಾಡುವಂಥ ಆಫರ್‌ಗಳನ್ನೂ ನೀಡುತ್ತಿದೆ. ರಿವಾರ್ಡ್‌ ಪಾಯಿಂಟ್‌ಗಳು ಹಾಗೂ ಆಫರ್‌ಗಳ ಆಕರ್ಷಣೆಯ ಬಲೆಗೆ ಬೀಳುವ ಜನ ಕ್ರಮೇಣ ತಮ್ಮ ಕ್ರೆಡಿಟ್‌ ಕಾರ್ಡ್‌ನ ಸಾಲವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಾರೆ. ಒಂದು ದಿನ ನೀವು ಬ್ಯಾಂಕ್‌ ಅಥವಾ ಕಂಪನಿಗಳ ಸಾಲದ ಬಲೆಗೆ ಬಿದ್ದ ಬಳಿಕ ಅವರು ಆಟವಾಡಲು ಆರಂಭ ಮಾಡುತ್ತಾರೆ.  ಹಾಗಾದರೆ ಈ ಪರಿಸ್ಥಿತಿಯಿಂದ ಪಾರಾಗುವುದು ಹೇಗೆ? ಮತ್ತು ಜನರು ಕ್ರೆಡಿಟ್ ಕಾರ್ಡ್ ಸಾಲದ ಬಲೆಗೆ ಏಕೆ ಬೀಳುತ್ತಾರೆ? ನೀವು ತಿಳಿದುಕೊಳ್ಳಬೇಕಾದ ವಿವರ ಇಲ್ಲಿದೆ.

ಕ್ರೆಡಿಟ್‌ ಕಾರ್ಡ್‌ ಸಾಲದಲ್ಲಿ ಜನ ಬೀಳುವುದು ಹೇಗೆ?: ಇಂದಿನ ಸಮಾಜದಲ್ಲಿ ಕ್ರೆಡಿಟ್ ಕಾರ್ಡ್ ಗಳು ಸ್ಟೇಟಸ್ ಸಿಂಬಲ್ ಆಗಿಬಿಟ್ಟಿವೆ. ಹಲವಾರು ಪ್ರಯೋಜನಗಳು ಇದರಿಂದ ಇದ್ದರೂ, ಸಾಕಷ್ಟು ನ್ಯೂನ್ಯತೆಗಳೂ ಇವೆ. ಅದರಲ್ಲಿ ಪ್ರಮುಖವಾಗಿ ಎಣಿಕೆಗೆ ನಿಲುಕದಷ್ಟು ಬಡ್ಡಿದರ. ಉದಾಹರಣೆಗೆ ಹೇಳೋದಾದರೆ, ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಶೇಕಡಾ 10-16 ರವರೆಗಿನ ಬಡ್ಡಿದರಗಳನ್ನು ಹೊಂದಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಕ್ರೆಡಿಟ್ ಕಾರ್ಡ್ ಬಡ್ಡಿದರಗಳು ಶೇ. 30 ರಿಂದ 42ರವರೆಗೆ ಇರುತ್ತದೆ. ಇದರರ್ಥ ನೀವು ಪಡೆದುಕೊಂಡ 1 ಲಕ್ಷ ರೂಪಾಯಿ ಕ್ರೆಡಿಟ್‌ ಕಾರ್ಡ್‌ ಸಾಲಕ್ಕೆ 30 ಸಾವಿರದಿಂದ 42 ಸಾವಿರದವರೆಗೆ ಬರೀ ಬಡ್ಡಿಯೇ ಇರುತ್ತದೆ.

ಕ್ರೆಡಿಟ್ ಕಾರ್ಡ್ ಸಾಲದಲ್ಲಿ ಯಾರು ಸಿಕ್ಕಿಬೀಳುತ್ತಾರೆ?: ಅತಿಯಾಗಿ ಖರ್ಚು ಮಾಡುವ ಜನರು ತಮ್ಮ ಬಿಲ್‌ಗಳನ್ನು ಪೂರ್ಣವಾಗಿ ಪಾವತಿ ಮಾಡಲು ವಿಫಲವಾದಾಗ ಮಾತ್ರವೇ ಕ್ರೆಡಿಟ್‌ ಕಾರ್ಡ್‌ನ ಹೊನ್ನ ಶೂಲ ಇರಿಯಲು ಆರಂಭಿಸುತ್ತದೆ. ಬಿಲ್‌ನ ಒಂದು ಭಾಗವನ್ನು ಪಾವತಿಸುವುದರಿಂದ ಉಳಿದ ಬಾಕಿಗೆ ಮಾತ್ರ ಬಡ್ಡಿ ಬರುತ್ತದೆ ಎಂದು ಕೆಲವರು ತಪ್ಪಾಗಿ ನಂಬುತ್ತಾರೆ. ಗಮನವಿರಲಿ, ನೀವು ಸಂಪೂರ್ಣ ಮೊತ್ತವನ್ನು ಪಾವತಿಸದಿದ್ದರೆ, ಸಂಪೂರ್ಣ ಬಾಕಿ ಉಳಿದಿರುವ ಮೊತ್ತಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಬಿಲ್ ರೂ. 50,000 ಆಗಿದ್ದರೆ ಮತ್ತು ನೀವು ಇದಕ್ಕೆ 40,000 ಪಾವತಿ ಮಾಡಿದರೆ, ಅಲ್ಲಿ ಉಳಿದ 10 ಸಾವಿರಕ್ಕೆ ಮಾತ್ರ ಬಡ್ಡಿ ಹಾಕೋದಿಲ್ಲ. ಬದಲಾಗಿ ಪೂರ್ಣ 50,000 ರೂಪಾಯಿಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅದರೂ ಬರೋಬ್ಬರಿ ಶೇ. 42ರ ಬಡ್ಡಿಯಲ್ಲಿ.  ಅದರೊಂದಿಗೆ ಲೇಟ್‌ ಫೀ ಸೇರಿದಂತೆ ಇತರ ಹೆಚ್ಚುವರಿ ವೆಚ್ಚಗಳು ಕ್ರಮೇಣ ಸೇರಿಕೊಳ್ಳುತ್ತದೆ. 

ಕ್ರೆಡಿಟ್ ಕಾರ್ಡ್ ಬಲೆಯಿಂದ ಹೊರಬರುವುದು ಹೇಗೆ?
1. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮಿತಿಗೊಳಿಸಿ ಮತ್ತು ವೈಯಕ್ತಿಕ ಸಾಲವನ್ನು ಪರಿಗಣಿಸಿ:
ನೀವು ಕ್ರೆಡಿಟ್ ಕಾರ್ಡ್ ಸಾಲದೊಂದಿಗೆ ಹೋರಾಡುತ್ತಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಕಡಿಮೆ ಮಾಡುವುದೇ ಮೊದಲ ಹಂತ. ಪರ್ಸನಲ್ ಲೋನ್ ತೆಗೆದುಕೊಂಡರೂ ಸಹ ನಿಮ್ಮ ಬಾಕಿ ಉಳಿದಿರುವ ಬಾಕಿಯನ್ನು ಆದಷ್ಟು ಬೇಗ ಪಾವತಿಸಿ. ಕ್ರೆಡಿಟ್ ಕಾರ್ಡ್ ಸಾಲಕ್ಕೆ (30-42 ಪ್ರತಿಶತ) ಹೋಲಿಸಿದರೆ ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿದರಗಳನ್ನು (ಸುಮಾರು 12-14 ಪ್ರತಿಶತ) ಹೊಂದಿರುತ್ತವೆ. ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಮೂಲಕ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಪಾವತಿಸುವ ಮೂಲಕ, ನೀವು ಹಣವನ್ನು ಉಳಿಸಬಹುದು ಮತ್ತು ನಿಮ್ಮ ಸಾಲವನ್ನು ನಿರ್ವಹಿಸಬಹುದಾದ ಕಂತುಗಳಲ್ಲಿ ಪಾವತಿಸಬಹುದು.

Latest Videos

ಕ್ರೆಡಿಟ್‌ ಕಾರ್ಡ್‌ ಕೊಡಿಸುತ್ತೇವೆಂದು ನಂಬಿಸಿ ವೃದ್ಧನಿಂದ ₹4.77 ಲಕ್ಷ ಸುಲಿದ ಖದೀಮರು!

2. ನಿಮ್ಮ ಸಾಲವನ್ನು EMI ಗಳಿಗೆ ಪರಿವರ್ತಿಸಿ: ನೀವು ಬಾಕಿ ಉಳಿದಿರುವ ಮೊತ್ತವನ್ನು ಸಮಾನ ಮಾಸಿಕ ಕಂತುಗಳಾಗಿ (EMI ಗಳು) ಪರಿವರ್ತಿಸುವ ಕುರಿತು ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯೊಂದಿಗೆ ಮಾತನಾಡಿ. ಉದಾಹರಣೆಗೆ, ನೀವು ರೂ. 100,000 ಬಾಕಿಯಿದ್ದರೆ ಮತ್ತು ಅದನ್ನು ಪೂರ್ಣವಾಗಿ ಪಾವತಿಸಲು ಸಾಧ್ಯವಾಗದಿದ್ದರೆ, ನೀವು EMI ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ರೀತಿಯಾಗಿ, ನೀವು ಹೆಚ್ಚಿನ ಶೇಕಡಾ 42 ಬಡ್ಡಿ ದರವನ್ನು ಪಾವತಿಸಬೇಕಾಗಿಲ್ಲ. ಅದಲ್ಲದೆ, ನಿಮ್ಮ ಪೇಮೆಂಟ್‌ಗಳ ಮೇಲೂ ಹೆಚ್ಚಿನ ನಿಗಾ ಇರುತ್ತದೆ.

ಕ್ರೆಡಿಟ್ ಕಾರ್ಡ್‌ನಿಂದ ಸುಲಭವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡೋದು ಹೇಗೆ ನೋಡಿ

ಕ್ರೆಡಿಟ್ ಕಾರ್ಡ್‌ಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಒಂದು ಸಣ್ಣ ತಪ್ಪು ಗಮನಾರ್ಹ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಖರ್ಚಿನ ಬಗ್ಗೆ ಗಮನಹರಿಸುವುದು ಅತ್ಯಗತ್ಯ ಮತ್ತು ನೀವು ಪಾವತಿಸಲು ಸಾಧ್ಯವಿರುವಷ್ಟು ಮಾತ್ರವೇ ಹಣ ಪಡೆಯಿರಿ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯೊಂದಿಗೆ ಸ್ಮಾರ್ಟ್ ಮತ್ತು ಕಾರ್ಯತಂತ್ರದ ಮೂಲಕ, ನೀವು ಸಾಲಕ್ಕೆ ಬೀಳುವುದನ್ನು ತಪ್ಪಿಸಬಹುದು.

click me!