ಸಾಲ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ: ಐಆರ್ ಡಿಎಐ

By Suvarna News  |  First Published May 11, 2023, 12:46 PM IST

ವಿಮಾ ಪಾಲಿಸಿಗಳನ್ನು ಆಧರಿಸಿ ಪಡೆದಿರುವ ಸಾಲದ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಂತಿಲ್ಲ ಎಂದು  ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ತಿಳಿಸಿದೆ. ಗ್ರಾಹಕರ ಮೇಲಿನ ಸಾಲದ ಹೊರೆ ಇನ್ನಷ್ಟು ಹೆಚ್ಚದಂತೆ ತಡೆಯಲು ಐಆರ್ ಡಿಎಐ ಈ ಕ್ರಮಕ್ಕೆ ಮುಂದಾಗಿದೆ. 


ನವದೆಹಲಿ (ಮೇ 11): ವಿಮಾ ಪಾಲಿಸಿ ಮೇಲೆ ಸಾಲ ಪಡೆದವರಿಗೆ ಮುಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಸಾಲದ ಕಂತುಗಳನ್ನು ಪಾವತಿಸಲು ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಇತ್ತೀಚಿಗಿನ ಸುತ್ತೋಲೆಯಲ್ಲಿ ವಿಮಾ ಪಾಲಿಸಿಗಳನ್ನು ಆಧರಿಸಿ ನೀಡಿರುವ ಸಾಲದ ಕಂತುಗಳನ್ನು ಕಟ್ಟಲು ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸ್ಥಗಿತಗೊಳಿಸುವಂತೆ ಸಲಹೆ ನೀಡಿದೆ. ಈ ಸುತ್ತೋಲೆಯಲ್ಲಿ 'ಸಲಹೆ' ಎಂಬ ಪದ ಬಳಸಿದ್ದರೂ ಈ ಸೂಚನೆ ತಕ್ಷಣದಿಂದಲೇ ಅನ್ವಯಿಸುತ್ತದೆ ಎಂದು ಐಆರ್ ಡಿಎಐ ಎಲ್ಲ ವಿಮಾ ಕಂಪನಿಗಳಿಗೆ ತಿಳಿಸಿದೆ. ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಮರುಪಾವತಿಸಿದರೆ ಗ್ರಾಹಕರಿಗೆ ಒಂದು ತಿಂಗಳ ಕಾಲ ಬಡ್ಡಿರಹಿತ ಸಾಲ ಸಿಗುತ್ತದೆ. ಆದರೆ, ಕೆಲವು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಸಾಧ್ಯವಾಗೋದಿಲ್ಲ. ಇದರಿಂದ ಅವರ ಕ್ರೆಡಿಟ್ ಕಾರ್ಡ್ ಪಾವತಿಯ ಬಾಕಿ ಮೊತ್ತದ ಮೇಲೆ ಅಧಿಕ ಬಡ್ಡಿ ವಿಧಿಸಲಾಗುತ್ತದೆ. ಇದರಿಂದ ಅಂಥ ಗ್ರಾಹಕರ ಮೇಲುನ ಸಾಲದ ಹೊರೆ ಹೆಚ್ಚುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಹೆಚ್ಚು ಪ್ರೋತ್ಸಾಹಿಸದಿರಲು ಹಾಗೂ ಪಾಲಿಸಿದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಮುಂಜಾಗ್ರತೆ ವಹಿಸಲು ಈ ಕ್ರಮ ಕೈಗೊಳ್ಳುತ್ತಿರೋದಾಗಿ ಐಆರ್ ಡಿಎಐ ತಿಳಿಸಿದೆ.

ವಿಮಾ ಪಾಲಿಸಿಯನ್ನು ಆಧಾರವಾಗಿರಿಸಿ ಸಾಲ ಪಡೆಯೋದು ಸುಲಭದ ಕೆಲಸ.ಬಹುತೇಕರ ಬಳಿ ವಿಮಾ ಪಾಲಿಸಿ ಇರುವ ಕಾರಣ ಇದರ ಆಧಾರದಲ್ಲೇ ಸಾಲ ಪಡೆಯಬಹುದು. ಯಾವುದೇ ಆಸ್ತಿ ಅಥವಾ ವಸ್ತುವನ್ನು ಅಡಮಾನವಾಗಿ ಇರಿಸಬೇಕಾದ ಅಗತ್ಯವೂ ಇಲ್ಲ. ಇನ್ನು ವೈಯಕ್ತಿಕ ಸಾಲಗಳಿಗಿಂತ ವಿಮಾ ಪಾಲಿಸಿ ಆಧರಿಸಿದ ಸಾಲಗಳ ಬಡ್ಡಿದರ ಕಡಿಮೆಯಿರುತ್ತದೆ.ಹಣಕಾಸು ತಜ್ಞರ ಪ್ರಕಾರ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಮರುಪಾವತಿಯನ್ನು ನಿಷೇಧಿಸಲು ಐಆರ್ ಡಿಎಐ ಮುಂದಾಗಿರೋದು ಉತ್ತಮ ನಿರ್ಧಾರವೇ ಆಗಿದೆ. ಇದರಿಂದ ಈಗಾಗಲೇ ಸಾಲ ಪಡೆದವರು ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕುವುದು ತಪ್ಪುತ್ತದೆ. 

Tap to resize

Latest Videos

ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ

ಇನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಕೂಡ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಟೈರ್ -II ಖಾತೆ ಚಂದಾದಾರಿಕೆ ಅಥವಾ ಕೊಡುಗೆಗೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಪಾವತಿಯನ್ನು ಸ್ವೀಕರಿಸದಿರುವ ನಿರ್ಧಾರ ಕೈಗೊಂಡಿತ್ತು. ಅಲ್ಲದೆ, ತಕ್ಷಣದಿಂದಲೇ ಎನ್ ಪಿಎಸ್ ಟೈರ್ -II ಖಾತೆಗಳ ಪಾವತಿಗೆ ಕ್ರೆಡಿಟ್ ಕಾರ್ಡ್ ಪಾವತಿ ಸ್ವೀಕರಿಸೋದನ್ನು ನಿಲ್ಲಿಸುವಂತೆ  ಎಲ್ಲ ಶಾಖೆಗಳಿಗೆ (ಪಿಒಪಿಎಸ್) ಸೂಚನೆ ನೀಡಿದೆ. ಆಗಸ್ಟ್ 3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಪಿಎಫ್ ಆರ್ ಡಿಎ, 'ಎನ್ ಪಿಎಸ್ ಟೈರ್ -II ಖಾತೆ ಚಂದಾದಾರಿಕೆಗಳು ಅಥವಾ ಕೊಡುಗೆಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುವ ವಿಧಾನ ನಿಲ್ಲಿಸಲು ಪ್ರಾಧಿಕಾರ ನಿರ್ಧರಿಸಿತ್ತು. ಅದಕ್ಕೆ ಅನುಗುಣವಾಗಿ ಎನ್ ಪಿಎಸ್ ಟೈರ್ -II ಖಾತೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಪಾವತಿ ಸ್ವೀಕಾರ ನಿಲ್ಲಿಸುವಂತೆ ಎಲ್ಲ ಪಿಒಪಿಎಸ್ ಗಳಿಗೆ ಸಲಹೆ ನೀಡಲಾಗಿದೆ' ಎಂದು ತಿಳಿಸಿದೆ. 

Most Expensive Stock of India: ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ಮುಟ್ಟಿದ ಎಂಆರ್‌ಎಫ್‌!

ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2013 ಸೆಕ್ಷನ್ 14 ಅಡಿಯಲ್ಲಿನ ಅಧಿಕಾರಗಳನ್ನು ಬಳಸಿ ಎನ್ ಪಿಎಸ್ ಟೈರ್ -II ಖಾತೆಗಳಿಗೆ (NPS Tier II accounts) ಕ್ರೆಡಿಟ್ ಕಾರ್ಡ್ ಬಳಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಎಫ್ಆರ್ ಡಿಎ (PFRDA) ತಿಳಿಸಿದೆ. ಈ ಕಾಯ್ದೆಯು ಚಂದಾದಾರರ ಹಿತಾಸಕ್ತಿ ರಕ್ಷಣೆ ಮಾಡುವ ಜೊತೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಹಾಗೂ ಪಿಂಚಣಿ ಯೋಜನೆಗಳ ನಿರಂತರ ಬೆಳವಣಿಗೆಗೆ ನಿಯಂತ್ರಣ, ಉತ್ತೇಜನ ಹಾಗೂ ಭರವಸೆಯನ್ನು ಒದಗಿಸುತ್ತದೆ ಎಂದು ಪಿಎಫ್ ಆರ್ ಡಿಎ ಹೇಳಿದೆ.
 

click me!