
ನವದೆಹಲಿ: ಕೇವಲ ಇಬ್ಬರು ಪೂರ್ಣಕಾಲಿಕ ನೌಕರರನ್ನು ಹೊಂದಿರುವ, ಹಣಕಾಸು ವರದಿಯಲ್ಲಿ ನಷ್ಟ ತೋರಿಸುತ್ತಿರುವ ಹೊರತಾಗಿಯೂ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಈಗಷ್ಟೇ ಕಾಲಿಡುತ್ತಿರುವ ಕಂಪನಿಯೊಂದರ ಷೇರು ಬೆಲೆ ಕೇವಲ 20 ತಿಂಗಳಲ್ಲಿ ಶೇ.55,000ರಷ್ಟು ಜಿಗಿತ ಕಂಡು ಅಚ್ಚರಿ ಮೂಡಿಸಿದೆ.
ವಿಶ್ವಾದ್ಯಂತ ಸೆಮಿಕಂಡಕ್ಟರ್ ಕಂಪನಿಗಳ ಷೇರುಗಳು ಜಿಗಿತ ಕಾಣುತ್ತಿರುವ ನಡುವೆಯೇ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಆಗಿರುವ ‘ಆರ್‌ಆರ್‌ಪಿ ಸೆಮಿಕಂಡಕ್ಟರ್ ಕಂಪನಿ’ಯ ಷೇರುಗಳು ಕೇವಲ 2 ವರ್ಷಗಳಲ್ಲಿ ಭಾರೀ ಪ್ರಮಾಣದ ಏರಿಕೆ ದಾಖಲಿಸಿದೆ. 1 ಬಿಲಿಯನ್ ಡಾಲರ್ ಅಂದರೆ 9000 ಕೋಟಿ ರು.ಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಯೊಂದು ಈ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ವಿಶ್ವದಲ್ಲಿ ಇದೇ ಮೊದಲು. ಈ ಮೂಲಕ ಭಾರತೀಯ ಹೂಡಿಕೆದಾರರಿಗೆ ಅತೀ ಹೆಚ್ಚು ಲಾಭ ತಂದಕೊಟ್ಟು ಕಂಪನಿಯಾಗಿ ಈ ಆರ್‌ಆರ್‌ಪಿ ಸೆಮಿಕಂಡಕ್ಟರ್ ಹೊರಹೊಮ್ಮಿದೆ.
ಈ ವರ್ಷದ ಆರಂಭದಲ್ಲಿ ಕಂಪನಿಯ ಷೇರು ದರ 15 ರು. ಇತ್ತು. ನ.13ರಲ್ಲಿ ಈವರೆಗಿನ ಅತಿ ಹೆಚ್ಚು ದರವಾದ 11,784 ರು.ಗೆ ತಲುಪಿತ್ತು. ಸದ್ಯ ಇದು 11,094 ರು.ನಲ್ಲಿ ಟ್ರೇಡ್ ಆಗುತ್ತಿದೆ.
ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಪ್ರಕಾರ ಕಂಪನಿ ಕೇವಲ ಇಬ್ಬರು ಪೂರ್ಣಕಾಲಿಕ ನೌಕರರನ್ನಷ್ಟೇ ಹೊಂದಿದೆ. ಈ ಕಂಪನಿಯ ಮೂಲ ಹೆಸರು ಜಿ.ಡಿ.ಟ್ರೇಡಿಂಗ್ ಆ್ಯಂಡ್ ಏಜೆನ್ಸೀಸ್ ಲಿ. 2024ರ ಆರಂಭದಲ್ಲಿ ಈ ಕಂಪನಿ ರಿಯಲ್ ಎಸ್ಟೇಟ್ ವ್ಯವಹಾರದಿಂದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ ಡಿವೈಸ್ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿ ಆಆರ್‌ಬಿ ಸೆಮಿಕಂಡಕ್ಟರ್ ಆಗಿ ಬದಲಾಯಿತು. ಬಳಿಕ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸತತ 149 ದಿನಗಳಲ್ಲಿ ಈ ಷೇರಿನ ದರ ಏರಿಕೆಯಾಗಿದೆ.
ವಿಶೇಷವೆಂದರೆ ಕಂಪನಿ ಈ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ 7.2 ಕೋಟಿ ರು.ನಷ್ಟ ಘೋಷಿಸಿದೆ. ಇಷ್ಟಾದರೂ ಹೂಡಿಕೆದಾರರು ಮಾತ್ರ ಈ ಕಂಪನಿಯನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.