
ಮುಂಬೈ(ಏ.19): ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾದಂತಹ ಜನಪ್ರಿಯ ಯೋಜನೆಗಳು ಹಾಗೂ ಉಚಿತ ಕೊಡುಗೆಗಳಿಗೆ ಕಡಿವಾಣ ಹಾಕುವ ಮೂಲಕ ಖರ್ಚು ಕಡಿಮೆ ಮಾಡುವ ಅಗತ್ಯವಿದೆ. ಜೂನ್‌ನಲ್ಲಿ ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ಪರಿಹಾರ ಕೂಡ ಸ್ಥಗಿತಗೊಳ್ಳುವುದರಿಂದ ರಾಜ್ಯ ಸರ್ಕಾರಗಳು ತಮ್ಮ ಆದಾಯಕ್ಕೆ ತಕ್ಕಂತೆ ಖರ್ಚುಗಳನ್ನು ಆದ್ಯತೆಯ ಮೇಲೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೆಲ ಆರ್ಥಿಕ ತಜ್ಞರು ‘ಉಚಿತ ಕೊಡುಗೆ ಹಾಗೂ ಸಬ್ಸಿಡಿಗಳಿಗೆ ಕಡಿವಾಣ ಹಾಕದಿದ್ದರೆ ಭಾರತಕ್ಕೂ ಶ್ರೀಲಂಕಾದ ಸ್ಥಿತಿ ಬರಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೇಳಿದ್ದರು. ಅದರ ಬೆನ್ನಲ್ಲೇ ಈಗ ರಾಜ್ಯಗಳಿಗೂ ಸಲಹೆ ಬಂದಿದೆ. ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರರ ಸಮಿತಿಯೊಂದು ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದೆ.
ರಾಜಸ್ಥಾನ, ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ, ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳು ಆರ್ಥಿಕವಾಗಿ ಸುಸ್ಥಿರವಲ್ಲದ ಅನೇಕ ಜನಪ್ರಿಯ ಯೋಜನೆಗಳಿಗೆ ಹಣ ಸುರಿಯುತ್ತಿವೆ. ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ತೆರಿಗೆಯ ಪಾಲು ರಾಜ್ಯಗಳ ಒಟ್ಟು ಆದಾಯದಲ್ಲಿ ಐದನೆಯ ಒಂದರಷ್ಟುಮಾತ್ರ ಆಗುತ್ತದೆ. ಜೂನ್‌ನಲ್ಲಿ ಜಿಎಸ್‌ಟಿ ಪರಿಹಾರ ನೀಡುವುದನ್ನು ಕೂಡ ಕೇಂದ್ರ ನಿಲ್ಲಿಸಲಿದೆ. ಹೀಗಾಗಿ ರಾಜ್ಯಗಳು ತಮ್ಮ ಆದಾಯಕ್ಕೆ ತಕ್ಕಂತೆ ವೆಚ್ಚ ಹೊಂದಿಸಿಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ತೆಲಂಗಾಣ ರಾಜ್ಯ ತನ್ನ ಒಟ್ಟು ಆದಾಯದ ಶೇ.35ರಷ್ಟನ್ನು ಜನಪ್ರಿಯ ಯೋಜನೆಗಳಿಗೆ, ರಾಜಸ್ಥಾನ, ಛತ್ತೀಸ್‌ಗಢ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಳು ಶೇ.5-ಶೇ.19ರಷ್ಟುಆದಾಯವನ್ನು ಇಂಥ ಜನಪ್ರಿಯ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ಸದ್ಯ ರಾಜ್ಯಗಳು ನಿಸ್ಸಂಶಯವಾಗಿ ತಮ್ಮ ಆದಾಯ ಮೀರಿ ಖರ್ಚು ಮಾಡುತ್ತಿವೆ. 18 ರಾಜ್ಯಗಳ ಬಜೆಟ್ ಅಧ್ಯಯನ ನಡೆಸಿದಾಗ ರಾಜ್ಯಗಳು ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸಿಕೊಂಡಿರುವುದು ಕಂಡುಬಂದಿದೆ. ಆರು ರಾಜ್ಯಗಳಲ್ಲಿ ಶೇ.4ಕ್ಕಿಂತ ಹೆಚ್ಚು ವಿತ್ತೀಯ ಕೊರತೆಯಿದೆ. ಬಿಹಾರದಲ್ಲಿ ಅತ್ಯಧಿಕ ಶೇ.8.3ರಷ್ಟುಕೊರತೆಯಿದೆ. ಇದು ಒಳ್ಳೆಯದಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.