
ಬೆಂಗಳೂರು: ಅಮೆರಿಕದ ಸಾಲದ ಗುಣಮಟ್ಟದಲ್ಲಿ ಕಂಡುಬಂದ ಸುಧಾರಣೆ ಹಾಗೂ ಅಮೆರಿಕಾ–ಚೀನಾ ವ್ಯಾಪಾರ ಸಂಘರ್ಷದ ಕುರಿತು ಉಂಟಾಗಿದ್ದ ಆತಂಕಗಳು ಕಡಿಮೆಯಾಗುತ್ತಿದ್ದಂತೆಯೇ, ಹೂಡಿಕೆದಾರರು ಚಿನ್ನ ಹಾಗೂ ಬೆಳ್ಳಿಯಂತಹ ಸುರಕ್ಷಿತ ಹೂಡಿಕೆಗಳಿಂದ ಹಿಂದೆ ಸರಿಯುತ್ತಿರುವುದು ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ಒಪ್ಪಂದದ ಬಗ್ಗೆ ನೀಡಿದ ಸಕಾರಾತ್ಮಕ ಹೇಳಿಕೆಗಳು ಹಾಗೂ ಅಮೆರಿಕದ ಪ್ರಾದೇಶಿಕ ಬ್ಯಾಂಕ್‌ಗಳು ಪ್ರಕಟಿಸಿರುವ ಉತ್ತಮ ಹಣಕಾಸು ಫಲಿತಾಂಶಗಳು ಷೇರು ಮಾರುಕಟ್ಟೆಗೆ ಸ್ಥಿರತೆ ತಂದಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲೇ ಬಾಂಡ್‌ಗಳ ಮೇಲಿನ ಆದಾಯ (Bond Yield) ಏರಿಕೆಯಾಗಿ, ಬಡ್ಡಿ ನೀಡದ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳ ಮೇಲಿನ ಹೂಡಿಕೆದಾರರ ಆಕರ್ಷಣೆ ತೀವ್ರವಾಗಿ ಕುಸಿದಿದೆ.
ಇತ್ತೀಚೆಗೆ ಲಂಡನ್ ಬೆಳ್ಳಿ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಐತಿಹಾಸಿಕ ಪೂರೈಕೆ ಬಿಕ್ಕಟ್ಟು ಬಹುತೇಕ ನಿವಾರಣೆಯಾಗಿದೆ. ಈ ಬಿಕ್ಕಟ್ಟು ಕಾಲದಲ್ಲಿ ಬೆಳ್ಳಿಯ ಬೆಲೆ ಪ್ರತಿ ಔನ್ಸ್‌ಗೆ 54.50 ಡಾಲರ್ ಎಂಬ ದಾಖಲೆ ಮಟ್ಟ ತಲುಪಿತ್ತು. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಕೆಜಿಗೆ ₹1.95 ಲಕ್ಷದ ಮಟ್ಟ ದಾಖಲೆಯಾಗಿತ್ತು. ಆದರೆ, ಕಳೆದ ಕೆಲವು ದಿನಗಳಲ್ಲಿ ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ ಕಂಡುಬಂದಿದೆ.
ಹೂಡಿಕೆದಾರರು ಅಲ್ಪಾವಧಿಯಲ್ಲಿ ಕಂಡುಬಂದ ತೀವ್ರ ಏರಿಕೆಯ ನಂತರ ಲಾಭ ವಸೂಲಿಗೆ (Profit Booking) ಮುಂದಾಗಿದ್ದು, ಇದು ಬೆಳ್ಳಿಯ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೇಡಿಕೆ ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ, ಲಂಡನ್ ಮಾರುಕಟ್ಟೆಗೆ ಬೆಳ್ಳಿಯನ್ನು ಸಾಗಿಸಿ ಪೂರೈಕೆ ಬಿಕ್ಕಟ್ಟನ್ನು ಹತ್ತಿಕ್ಕಲಾಯಿತು. ಇದೀಗ ಆ ಬಿಕ್ಕಟ್ಟು ಕಡಿಮೆಯಾಗಿರುವುದರಿಂದ ಲಂಡನ್ ಮತ್ತು ನ್ಯೂಯಾರ್ಕ್ ಮಾರುಕಟ್ಟೆಗಳ ನಡುವಿನ ಬೆಲೆ ಅಂತರವೂ ತಗ್ಗಿದೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಸ್ಪಾಟ್ ಬೆಳ್ಳಿ ದರವು 4.4%ರಷ್ಟು ಕುಸಿದು ಪ್ರತಿ ಔನ್ಸ್‌ಗೆ 51.88 ಡಾಲರ್ ತಲುಪಿದೆ. ಸ್ಪಾಟ್ ಚಿನ್ನದ ದರವು 1.9% ಇಳಿಕೆಯಾಗಿದೆ. ಪ್ಲಾಟಿನಂ ಮತ್ತು ಪಲ್ಲಾಡಿಯಂ ದರಗಳಲ್ಲೂ ಕುಸಿತ ದಾಖಲಾಗಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕೂಡಾ ಮೂರು ದಿನಗಳಲ್ಲಿ ₹15,000ರಷ್ಟು ಕುಸಿದಿದೆ. ಕೆಲ ದಿನಗಳ ಹಿಂದೆ ಕೆಜಿಗೆ ₹1.95 ಲಕ್ಷದ ಮಟ್ಟ ತಲುಪಿದ್ದ ಬೆಲೆ, ಗುರುವಾರ ₹1,000 ಇಳಿಕೆ, ಶುಕ್ರವಾರ ₹100 ಇಳಿಕೆ ಹಾಗೂ ಶನಿವಾರ ₹13,900 ಇಳಿಕೆಯಿಂದ ₹1.80 ಲಕ್ಷಕ್ಕೆ ತಲುಪಿದೆ.
MCX ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಗಳು ಇತ್ತೀಚೆಗೆ ಪ್ರತಿ 10 ಗ್ರಾಂಗೆ ₹1,32,294 ಎಂಬ ದಾಖಲೆ ಮಟ್ಟ ತಲುಪಿದ್ದವು. ಆದರೆ ಇದೀಗ ಸುಮಾರು ಶೇ.3ರಷ್ಟು ಇಳಿಕೆಗೊಂಡು ₹1,25,957 ಕ್ಕೆ ಇಳಿದಿವೆ. ಬೆಳ್ಳಿ ಬೆಲೆಯಲ್ಲಿ ಶೇ.8ಕ್ಕಿಂತಲೂ ಹೆಚ್ಚು ಇಳಿಕೆಯಾಗಿ, ಪ್ರತಿ ಕೆಜಿಗೆ ₹1,70,415ರಿಂದ ₹1,53,929 ಕ್ಕೆ ತಲುಪಿದೆ.
ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಅವರು ANI ಗೆ ನೀಡಿದ ಸಂದರ್ಶನದಲ್ಲಿ, ಶುಕ್ರವಾರದ ಬೆಲೆ ಕುಸಿತವು “ಐತಿಹಾಸಿಕ ರ್ಯಾಲಿಯ ನಂತರ ಉಂಟಾದ ಅಲ್ಪಾವಧಿಯ ಭಾವನೆಗಳ ಬದಲಾವಣೆ ಹಾಗೂ ನೈಸರ್ಗಿಕ ಲಾಭ ವಸೂಲಿಯಿಂದ ಉಂಟಾದ ಅಗತ್ಯ ಯುದ್ಧತಂತ್ರದ ಹಿಮ್ಮೆಟ್ಟುವಿಕೆ” ಎಂದು ಅಭಿಪ್ರಾಯಪಟ್ಟರು.
ಅವರ ಪ್ರಕಾರ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಚೀನಾದ ಮೇಲಿನ ಸುಂಕದ ಬೆದರಿಕೆಯನ್ನು ಸಡಿಲಿಸಿದ ಶಾಂತ ಸ್ವರವು ಮಾರುಕಟ್ಟೆ ಹಠಾತ್ ಹಿಂಜರಿತದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಉದ್ವಿಗ್ನತೆ ಕಡಿಮೆಯಾಗಿ, ಹೂಡಿಕೆದಾರರ ಮನೋಭಾವ ಬದಲಾಗಿದೆ.
ಚಿನ್ನ ಮತ್ತು ಬೆಳ್ಳಿಯ ಹೂಡಿಕೆಗಳ ಕಾರ್ಯತಂತ್ರ ಇನ್ನೂ ಬಲವಾಗಿಯೇ ಉಳಿದಿದೆ. ಜಾಗತಿಕ ಅಪನಗದೀಕರಣ, ಪೂರೈಕೆಯ ಕೊರತೆ, ಕೇಂದ್ರ ಬ್ಯಾಂಕ್‌ಗಳ ಸಂಗ್ರಹಣೆ, ಕಡಿಮೆ ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಅಪಾಯಗಳಂತಹ ರಚನಾತ್ಮಕ ಅಂಶಗಳು ಈ ಮಾರುಕಟ್ಟೆಗೆ ಬಲ ನೀಡುತ್ತವೆ ಎಂದು ಬಗ್ಗಾ ಹೇಳಿದರು.
ಅವರು ಬೆಳ್ಳಿಯು ಅಮೂಲ್ಯ ಲೋಹ ಹಾಗೂ ಕೈಗಾರಿಕಾ ಲೋಹ ಎಂಬ ದ್ವಿಗುಣ ಸ್ವಭಾವ ಹೊಂದಿರುವುದರಿಂದ ಅದರ ದೀರ್ಘಾವಧಿಯ ಮುನ್ಸೂಚನೆ ಚಿನ್ನಕ್ಕಿಂತಲೂ ಬಲವಾಗಿಯೇ ಇದೆ ಎಂದು ಅಭಿಪ್ರಾಯಪಟ್ಟರು.
ಕೆಡಿಯಾ ಕಮಾಡಿಟೀಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಅಜಯ್ ಕೆಡಿಯಾ ಅವರೂ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಕಳೆದ ಎರಡು ತಿಂಗಳಲ್ಲಿ ನಾವು ಪ್ಯಾರಾಬೋಲಿಕ್ ಏರಿಕೆಯನ್ನು ಕಂಡಿದ್ದೇವೆ. ಈ ಮಟ್ಟದ ಏರಿಕೆಯ ನಂತರ ತಿದ್ದುಪಡಿ ಅನಿವಾರ್ಯವಾಗಿತ್ತು. ಆಗಸ್ಟ್‌ನಿಂದ ಒಂಬತ್ತು ವಾರಗಳ ಕಾಲ ಏಕಪಕ್ಷೀಯ ಏರಿಕೆ ಕಂಡುಬಂದಿತ್ತು. ಈ ಹಂತದಲ್ಲಿ ಹಠಾತ್ ಕುಸಿತವೂ ನಿರೀಕ್ಷಿತವಾಗಿತ್ತು,” ಎಂದು ಅವರು ವಿವರಿಸಿದರು.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಕಾಣಿಸಿಕೊಂಡಿರುವ ಇತ್ತೀಚಿನ ಕುಸಿತ ಅಲ್ಪಾವಧಿಯ ಹೂಡಿಕೆದಾರರ ಲಾಭ ವಸೂಲಿ ಮತ್ತು ಜಾಗತಿಕ ವ್ಯಾಪಾರ ಆತಂಕಗಳ ಶಮನದಿಂದ ಪ್ರೇರಿತವಾದರೂ, ಮಾರುಕಟ್ಟೆಯ ದೀರ್ಘಾವಧಿ ದೃಷ್ಟಿಕೋನ ಬಲವಾಗಿಯೇ ಉಳಿದಿದೆ. ಕೈಗಾರಿಕಾ ಬೇಡಿಕೆ ಮತ್ತು ಜಾಗತಿಕ ಆರ್ಥಿಕ ನೀತಿಗಳು ಮುಂದಿನ ದಿನಗಳಲ್ಲಿ ಬೆಲೆ ಚಲನವಲನವನ್ನು ನಿರ್ಧರಿಸಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.