
ಅಂತಾರಾಷ್ಟ್ರೀಯ ಕಚ್ಚಾ ತೈಲದ ಮಾರುಕಟ್ಟೆ ಆಧಾರದಲ್ಲಿಯೇ ತೈಲ ದರ ನಿರ್ಭರವಾಗುವುದಾದರೂ ಉಳಿದ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊಂಚ ಜಾಸ್ತಿಯೇ ಇದೆ. ಜಿಎಸ್ ಟಿ ವ್ಯಾಪ್ತಿಯಲ್ಲಿ ಇಲ್ಲವಾಗಿರುವುದರಿಂದ ರಾಜ್ಯದಿಂದ ರಾಜ್ಯಕ್ಕೆ ಭಿನ್ನವೂ ಆಗಿರುತ್ತದೆ. ಅಬಕಾರಿ ಸುಂಕದ ಪಾಲು ರಾಜ್ಯ-ಕೇಂದ್ರದ ನಡುವೆ ಹಂಚಿಕೆಯಾಗುತ್ತಿದೆ.
ಭಾರತೀಯ ತೈಲ ನಿಗಮದ [ಐಒಸಿ] ಹೇಳುವಂತೆ ಪ್ರತಿ ಲೀಟರ್ ಪೆಟ್ರೋಲ್ ತೆರಿಗೆ ಪೂರ್ವದಲ್ಲಿ ಸರಾಸರಿ 27 ರೂ. ಗೆ ಲಭ್ಯವಾಗುತ್ತದೆ. ಸಾಗಾಟ ಮತ್ತು ವಿತರಣಾ ವೆಚ್ಚ ಸೇರಿ 31 ರೂ. ಆಗುತ್ತದೆ. ಆದರೆ ನಾವು ನೀಡುವ 77-78 ರೂಪಾಯಿಗಳು ಎಲ್ಲ ತೆರಿಗೆಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಸರಕಾರದ ಅಬಕಾರಿ ಸುಂಕ ಮತ್ತು ಆಯಾ ರಾಜ್ಯದ ಹೊರೆ ಗ್ರಾಹಕನ ಮೇಲೆ ಬೀಳುತ್ತದೆ.
ಕೇಂದ್ರ ಸರ್ಕಾರದಿಂದ ನಾಳೆ 'ಜಿಎಸ್ಟಿ ದಿನ' ಆಚರಣೆ!
ವಾಸ್ತವಿಕ ವೆಚ್ಚ ಏನು?:
ಒಂದು ವೇಳೆ ಜಿಎಸ್ ಟಿ ವ್ಯಾಪ್ತಿಗೆ ತೈಲ ಬಂದರೆ ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯಗಳು ವಿಧಿಸುವ ತೆರಿಗೆ ರದ್ದಾಗಿ ಒಂದೇ ತೆರಿಗೆ ಉಳಿದುಕೊಳ್ಳುತ್ತದೆ. ವಾಸ್ತವಿಕ ವೆಚ್ಚ ಅಂದರೆ 31 ರೂ. ಮೇಲೆ ಯಾವ ಪ್ರಮಾಣದ ಶೇಕಡಾದರದಲ್ಲಿ ಜಿಎಸ್ಟಿ ವಿಧಿಸಿದ್ದಾರೆ ಅದನ್ನು ಸೇರಿಸಿ ಲೆಕ್ಕ ಹಾಕಬೇಕಾಗುತ್ತದೆ. ಹೇಗೆ ಮಾಡಿದರೂ ಈಗಿರುವಷ್ಟು ಹಣ ತೆರಬೇಕಾಗಿಲ್ಲ ಎನ್ನುವುದು ಸತ್ಯ.
ಸರಕಾರದ ಬೊಕ್ಕಸಕ್ಕೆ ನಷ್ಟ:
ಒಂದು ವೇಳೆ ಇದು ಸಾಧ್ಯವಾದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗುವುದು ಸತ್ಯ..2015-16ರಲ್ಲಿ ಕೇಂದ್ರ 1.42 ಲಕ್ಷ ಕೋಟಿ ರೂ. ಸಂಗ್ರಹಿಸಿದ್ದರೆ, 2016-17 ರಲ್ಲಿ 1.66 ಕೋಟಿ ರೂ ಸಂಗ್ರಹಿಸಿತ್ತು. ಕ್ರಮವಾಗಿ ರಾಜ್ಯ ಸರಕಾರಗಳು 1.78 ಲಕ್ಷ ಕೋಟಿ ಮತ್ತು 2.42 ಲಕ್ಷ ಕೋಟಿ ರೂ. ಸಂಗ್ರಹಣೆ ಮಾಡಿದ್ದವು ಎಂದು ಅಂಕಿ ಅಂಶಗಳು ಹೇಳುತ್ತವೆ.
ನಿಧಾನಕ್ಕೆ ಜಾರಿಯಾಗಬಹುದೆ?
ಈಗಿರುವ ಪರಿಸ್ಥಿತಿಯಲ್ಲಿ ಪ್ರತಿಯೊಂದು ಸರಕಾರಕ್ಕೂ ಆದಾಯ ಪ್ರಮುಖವಾಗಿದೆ. ಒಂದೇ ಹಂತದಲ್ಲಿ ಅಪಾರ ಪ್ರಮಾಣದ ತೆರಿಗೆ ಕಳೆದುಕೊಳ್ಳಲು ಯಾವ ಸರಕಾರವೂ ಸಿದ್ಧವಾಗುವುದಿಲ್ಲ. ಕೇಂದ್ರ ಒಂದು ಹೆಜ್ಜೆ ಮುಂದೆ ಇಟ್ಟರೂ ರಾಜ್ಯ ಸರಕಾರಗಳು ಇದಕ್ಕೆ ಒಪ್ಪಿಗೆ ನೀಡದೇ ಇರಬಹುದು. ಒಟ್ಟಿನಲ್ಲಿ ಜಿಎಸ್ಟಿ ವ್ಯಾಪ್ತಿಗೆ ತೈಲ ಬಂದರೆ ಗ್ರಾಹಕನಿಗೆ ಲಾಭವಾಗುವುದು ಎಷ್ಟು ಸತ್ಯವೋ ಅದೇ ರೀತಿ ಆಯಾ ಸರಕಾರಗಳು ತಮ್ಮ ಆದಾಯವನ್ನು ಬೇರೆ ಮೂಲದಿಂದ ಹೊಂದಾಣಿಕೆ ಮಾಡಿಕೊಳ್ಳಲೂ ಹೆಣಗಬೇಕಾಗುತ್ತದೆ ಎಂಬುದೂ ಅಷ್ಟೆ ಸತ್ಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.