ಸೆನ್ಸೆಕ್ಸ್‌ಗೆ ಬಜೆಟ್‌ ಶಾಕ್‌: 2 ದಿನದಲ್ಲಿ 5 ಲಕ್ಷ ಕೋಟಿ ರು. ಸಂಪತ್ತು ಮಾಯ!

By Web DeskFirst Published Jul 9, 2019, 9:23 AM IST
Highlights

ಸೆನ್ಸೆಕ್ಸ್‌ಗೆ ಬಜೆಟ್‌ ಶಾಕ್‌: ಭರ್ಜರಿ 793 ಅಂಕ ಕುಸಿತ| 2 ದಿನದಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರು. ಸಂಪತ್ತು ಮಾಯ

ಮುಂಬೈ[ಜು.09]: ಕಳೆದ ಶುಕ್ರವಾರ ಮಂಡನೆಯಾದ ಬಜೆಟ್‌ನಲ್ಲಿನ ಕೆಲ ನಕಾರಾತ್ಮಕ ಅಂಶಗಳು ಷೇರುಪೇಟೆ ಮೇಲಿನ ಹೊಡೆತವನ್ನು ಮುಂದುವರೆಸಿದ್ದು, ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ ಭರ್ಜರಿ 793 ಅಂಕಗಳ ಕುರಿತ ಕಂಡಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್‌ 907 ಅಂಕಗಳವರೆಗೆ ಕುಸಿತ ಕಂಡಿತ್ತಾದರೂ, ಕಡೆಯ ಹಂತದಲ್ಲಿ ಅಲ್ಪ ಚೇತರಿಕೆ ಕಂಡು 793 ಅಂಕಗಳ ಕುಸಿತದೊಂದಿಗೆ 38720 ಅಂಕಗಳಲ್ಲಿ ಮುಕ್ತಾಯಗೊಂಡಿದೆ. ಇದು 2019ರಲ್ಲಿ ಒಂದೇ ದಿನದಲ್ಲಿ ಸೆನ್ಸೆಕ್ಸ್‌ನ ಅತಿ ಗರಿಷ್ಠ ಕುಸಿತವಾಗಿದೆ.

ಇದೇ ವೇಳೆ ನಿಫ್ಟಿಕೂಡಾ 252 ಅಂಕಗಳ ಕುಸಿತ ಕಂಡು 11558 ಅಂಕಗಳಲ್ಲಿ ಮುಕ್ತಾಯವಾಗಿದೆ.

ನೊಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಹೂಡಿಕೆ ಪ್ರಮಾಣ ಹೆಚ್ಚಿಸುವ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಹೆಚ್ಚಿನ ತೆರಿಗೆ, ಭಾರೀ ಶ್ರೀಮಂತರಿಗೆ ಹೆಚ್ಚಿನ ಮೇಲ್ತೆರಿಗೆ ವಿಧಿಸುವ ಪ್ರಸ್ತಾಪಗಳು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದೇ ಈ ಕುಸಿತ ಕಾರಣ ಎನ್ನಲಾಗಿದೆ. ಇದರ ಜೊತೆಗೆ ವಿಶ್ವದ ಇತರೆ ಷೇರುಪೇಟೆಗಳ ಕುಸಿತ ಕೂಡಾ ಸೆನ್ಸೆಕ್ಸ್‌ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ.

ಕಳೆದ ಶುಕ್ರವಾರ ಬಜೆಟ್‌ ಮಂಡನೆಯಾದ ಬಳಿಕವೂ ಸೆನ್ಸೆಕ್ಸ್‌ 394 ಅಂಕಗಳ ಕುಸಿತ ಕಂಡಿತ್ತು. ಇದರೊಂದಿಗೆ ಎರಡು ದಿನಗಳಲ್ಲಿ ಸೆನ್ಸೆಕ್ಸ್‌ 1187 ಅಂಕ ಕುಸಿತ ಕಂಡಂತೆ ಆಗಿದೆ. ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರು. ಸಂಪತ್ತು ಕರಗಿ ಹೋಗಿದೆ.

click me!