
ಮುಂಬೈ(ಫೆ.03): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಹಣಕಾಸು ಬಜೆಟ್ ಬಳಿಕ ಷೇರುಪೇಟೆಯಲ್ಲಿ ಭಾರಿ ಉತ್ಸಾಹ ಕಂಡುಬರುತ್ತಿದ್ದು, ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1200 ಅಂಕಗಳಷ್ಟುಏರಿಕೆ ದಾಖಲಿಸಿದೆ.
ಸೋಮವಾರ ಬಜೆಟ್‌ನ ಪರಿಣಾಮವಾಗಿ ಸೂಚ್ಯಂಕ 2315 ಅಂಕ ಜಿಗಿದಿತ್ತು. ಇದೀಗ ಸೋಮವಾರವೂ ಏರಿಕೆ ಪರ್ವ ಮುಂದುವರಿದಿದೆ. ಸೂಚ್ಯಂಕ 1197 ಅಂಕಗಳಷ್ಟುಏರಿಕೆ ದಾಖಲಿಸುವ ಮೂಲಕ 49,797ಕ್ಕೆ ತಲುಪಿದೆ. ಒಂದು ಹಂತದಲ್ಲಿ 1554 ಅಂಕಗಳವರೆಗೂ ಏರಿಕೆ ಕಂಡು 50 ಸಾವಿರದ ಮೇಲೆ ಹೊಯ್ದಾಡಿತ್ತು.
ಬಜೆಟ್‌ನ ಪರಿಣಾಮವಾಗಿ ಸೆನ್ಸೆಕ್ಸ್ ಎರಡೇ ದಿನದಲ್ಲಿ 3511 ಅಂಕಗಳಷ್ಟುಏರಿಕೆ ಕಂಡಿದೆ. ಪರಿಣಾಮ 2 ದಿನದಲ್ಲಿ ಹೂಡಿಕೆದಾರರ ಸಂಪತ್ತು 10.45 ಲಕ್ಷ ಕೋಟಿ ರು.ನಷ್ಟುಹೆಚ್ಚಾಗಿದೆ. ಈ ನಡುವೆ, ಸೋಮವಾರ 646 ಅಂಕ ಏರಿದ್ದ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಮಂಗಳವಾರ 366 ಅಂಕ ಏರಿಕೆ ದಾಖಲಿಸಿದೆ. ಎರಡು ದಿನದಲ್ಲಿ 1007.25 ಅಂಕಗಳಷ್ಟುಜಿಗಿತ ಕಾಣುವ ಮೂಲಕ 14647ಕ್ಕೆ ತಲುಪಿದೆ.
ಅಭಿವೃದ್ಧಿ ಪರ ದಿಟ್ಟಹೆಜ್ಜೆ ಇಟ್ಟಿರುವ ಬಜೆಟ್ ಅನ್ನು ನಿರ್ಮಲಾ ಮಂಡಿಸಿದ್ದು, ಸಂಪನ್ಮೂಲ ಸಂಗ್ರಹಕ್ಕೆ ಹೊಸ ತೆರಿಗೆಗಳನ್ನು ಸರ್ಕಾರ ವಿಧಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿಸಿದ್ದಾರೆ. ಬಂಡವಾಳ ಸಂಗ್ರಹಿಸಲು ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣದ ಜತೆಗೆ, ಸರ್ಕಾರಿ ಆಸ್ತಿಯನ್ನು ನಗದೀಕರಿಸುವುದಾಗಿ ಘೋಷಿಸಿದ್ದಾರೆ. ಇದು ಷೇರುಪೇಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.