
ನವದೆಹಲಿ(ಅ.9): ಚಾಲ್ತಿಯಲ್ಲಿರುವ ಗೃಹಸಾಲ, ವಾಹನ ಸಾಲ, ಮತ್ತು ಗ್ರಾಹಕ ವಸ್ತುಗಳ ಖರೀದಿ ಸಾಲಗಳ ಮೇಲಿನ ಬದಲಾಗುವ ಬಡ್ಡಿದರದಂತೆ, ಬಡ್ಡಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಏಕೆ ಎಂದು ಸುಪ್ರೀಂ ಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪ್ರಶ್ನೆ ಮಾಡಿದೆ.
ಕಳೆದ 10 ತಿಂಗಳಿನಿಂದ ರೆಪೋ ದರಗಳಲ್ಲಿ ಇಳಿಕೆಯಾಗಿದ್ದರೂ, ಬ್ಯಾಂಕ್ ಗಳು ಬಡ್ಡಿದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಈ ಬಗ್ಗೆ ಆರ್‌ಬಿಐ ಕೂಡ ಮೌನವಾಗಿರುವುದು ಏಕೆ ಎಂದು ಕೋರ್ಟ್ ಪ್ರಶ್ನಿಸಿದೆ.
ಬಡ್ಡಿದರಗಳು ಇಳಿಕೆಯಾದ ಕೂಡಲೇ ಹೊಸ ಸಾಲಗಾರರಿಗೆ ಕಡಿಮೆ ಬಡ್ಡಿದರದ ಸಾಲಗಳನ್ನು ಬ್ಯಾಂಕುಗಳು ವಿತರಿಸುತ್ತವೆ. ಆದರೆ ಹಾಲಿ ಸಾಲಗಾರರಿಗೆ ಬಡ್ಡಿದರ ಕಡಿತದ ಲಾಭಗಳನ್ನು ವರ್ಗಾಯಿಸುತ್ತಿಲ್ಲ. ಅರ್ಜಿದಾರರಾದ 'ಮನಿಲೈಫ್ ಫೌಂಡೇಶನ್' ಕಳೆದ ಅಕ್ಟೋಬರ್‌ನಲ್ಲೇ ಆರ್‌ಬಿಐಗೆ ದೂರು ಸಲ್ಲಿಸಿತ್ತು.
ಹಳೆಯ ಸಾಲಗಾರರಿಗೆ ಶೇ. 1ರಷ್ಟು ಬಡ್ಡಿದರ ಕಡಿತದ ಲಾಭವನ್ನು ನಿರಾಕರಿಸುವ ಮೂಲಕ ಬ್ಯಾಂಕ್ ಗಳು ಸಾಲಗಾರರಿಗೆ ಒಟ್ಟಾರೆ 10,000 ಕೋಟಿ ರೂ. ಹೊರೆಯನ್ನು ಹೊರಿಸುತ್ತಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಆದರೆ ವಿಷಯ ತನ್ನ ಪರಿಗಣನೆಯಲ್ಲಿದೆ ಎಂದಷ್ಟೇ ತಿಳಿಸಿರುವ ಆರ್‌ಬಿಐ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಇನ್ನು ಆರು ವಾರಗಳೊಳಗೆ ಆರ್‌ಬಿಐ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಅರ್ಜಿದಾರರು ಪುನಃ ಈ ಕೋರ್ಟ್‌ಗೆ ಬರಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.