
ಬೆಂಗಳೂರು (ಆ.19): ನೀವು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಾಗಿದ್ದು, ತಿಂಗಳಿನಲ್ಲಿ ಹಲವು ಬಾರಿ ಎಟಿಎಂ (ATM) ಮೂಲಕ ಹಣ ಪಡೆಯುವ ಅಭ್ಯಾಸ ನಿಮಗಿದ್ದರೆ ಈ ಸುದ್ದಿ ನಿಮಗೆ ಇಂಪಾರ್ಟೆಂಟ್. ಎಟಿಎಂ ಹಾಗೂ ಬ್ಯಾಂಕ್ ಶಾಖೆಗಳಿಂದ ನಗದು ಹಿಂಪಡೆಯುವ (Cash Withdrawal) ನಿಯಮಗಳಲ್ಲಿ ಎಸ್‌ಬಿಐ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ತೆಗೆದರೆ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಎಸ್‌ಬಿಐ ತನ್ನ 'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್' (BSBD) ಖಾತೆದಾರರಿಗೆ ಈ ನಗದು ಹಿಂಪಡೆಯುವಿಕೆಯ ಹೊಸ ನಿಯಮಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ಎಸ್‌ಬಿಐನ ಹೊಸ ನಿಯಮಗಳ ಪ್ರಕಾರ, BSBD ಖಾತೆದಾರರು ಪ್ರತಿ ತಿಂಗಳು ಗರಿಷ್ಠ 4 ಬಾರಿ ಉಚಿತವಾಗಿ ನಗದು ಹಿಂಪಡೆಯಬಹುದು (ಬ್ಯಾಂಕ್ ಶಾಖೆ ಅಥವಾ ಎಟಿಎಂ ಎರಡೂ ಸೇರಿ). ಆದರೆ, ಒಂದು ತಿಂಗಳಲ್ಲಿ 4ಕ್ಕಿಂತ ಹೆಚ್ಚು ಬಾರಿ ನಗದು ಹಿಂಪಡೆದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ (Transaction) ಬ್ಯಾಂಕ್ 15 ರೂಪಾಯಿ ಸೇವಾ ಶುಲ್ಕವನ್ನು ವಿಧಿಸಲಿದೆ. ಇದರೊಂದಿಗೆ ಈ 15 ರೂಪಾಯಿ ಶುಲ್ಕದ ಮೇಲೆ ಅನ್ವಯವಾಗುವ ಜಿಎಸ್‌ಟಿ (GST) ಮೊತ್ತವನ್ನು ಸಹ ಗ್ರಾಹಕರೇ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಪದೇ ಪದೇ ಎಟಿಎಂ ಬಳಸುವ ಗ್ರಾಹಕರು ಹೆಚ್ಚುವರಿ ಹಣ ತೆರಬೇಕಾಗುತ್ತದೆ.
BSBD ಎಂದರೆ 'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್' (Basic Savings Bank Deposit Account). ಸಾಮಾನ್ಯ ಜನರು ಯಾವುದೇ ರೀತಿಯ ಹೆಚ್ಚುವರಿ ಹೊರೆಯಿಲ್ಲದೆ ಅಥವಾ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳುವ ಕಿರಿಕಿರಿಯಿಲ್ಲದೆ ಬ್ಯಾಂಕಿಂಗ್ ಸೇವೆ ಪಡೆಯಲು ಈ ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ.
ಉಚಿತ ರುಪೇ ಕಾರ್ಡ್: ಈ ಖಾತೆದಾರರಿಗೆ ಉಚಿತವಾಗಿ 'RuPay ATM-cum-Debit Card' ನೀಡಲಾಗುತ್ತದೆ.
ವಾರ್ಷಿಕ ನಿರ್ವಹಣಾ ಶುಲ್ಕವಿಲ್ಲ: ಈ ರುಪೇ ಡೆಬಿಟ್ ಕಾರ್ಡ್‌ಗೆ ಯಾವುದೇ ವಾರ್ಷಿಕ ನಿರ್ವಹಣಾ ಶುಲ್ಕ (Annual Maintenance Charge) ಇರುವುದಿಲ್ಲ.
ನಗದು ಹಿಂಪಡೆಯುವಿಕೆ: ಎಸ್‌ಬಿಐ ಶಾಖೆ ಅಥವಾ ಎಟಿಎಂಗಳ ಮೂಲಕ ನಗದು ಪಡೆಯಲು ಅವಕಾಶವಿದೆ.
ಚೆಕ್‌ಬುಕ್ ಸೌಲಭ್ಯವಿಲ್ಲ: ಈ ಖಾತೆಗೆ ಬ್ಯಾಂಕ್‌ನಿಂದ ಚೆಕ್‌ಬುಕ್ ಸೌಲಭ್ಯ ದೊರೆಯುವುದಿಲ್ಲ.
ಉಚಿತ ಇ-ಪಾವತಿ: NEFT ಮತ್ತು RTGS ನಂತಹ ಡಿಜಿಟಲ್/ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಖಾತೆಗೆ ಹಣ ಜಮೆ ಮಾಡಲು ಯಾವುದೇ ಶುಲ್ಕವಿರುವುದಿಲ್ಲ.
ಇನ್‌ಆಕ್ಟೀವ್ ಅಕೌಂಟ್: ಯಾವುದೇ ಕಾರಣಕ್ಕೆ ಖಾತೆ ನಿಷ್ಕ್ರಿಯಗೊಂಡರೆ (Inoperative), ಅದನ್ನು ಮತ್ತೆ ಸಕ್ರಿಯಗೊಳಿಸಲು (Re-activate) ಯಾವುದೇ ಶುಲ್ಕ ತೆರಬೇಕಾಗಿಲ್ಲ.
ಎಸ್‌ಬಿಐನಲ್ಲಿ BSBD ಖಾತೆ ತೆರೆಯಲು ಬಯಸುವ ಗ್ರಾಹಕರಿಗೆ ಒಂದು ಪ್ರಮುಖ ಷರತ್ತಿದೆ. ಗ್ರಾಹಕರ ಹೆಸರಿನಲ್ಲಿ ಎಸ್‌ಬಿಐನಲ್ಲಿ ಯಾವುದೇ ಇತರ ಉಳಿತಾಯ ಖಾತೆ (Savings Account) ಇರಬಾರದು. ಒಂದು ವೇಳೆ ಎಸ್‌ಬಿಐನಲ್ಲಿ ಈಗಾಗಲೇ ಸಾಮಾನ್ಯ ಉಳಿತಾಯ ಖಾತೆ ಹೊಂದಿದ್ದರೆ, ಹೊಸ BSBD ಖಾತೆ ತೆರೆದ 30 ದಿನಗಳ ಒಳಗಾಗಿ ಹಳೆಯ ಉಳಿತಾಯ ಖಾತೆಯನ್ನು ಕಡ್ಡಾಯವಾಗಿ ಬಂದ್ ಮಾಡಬೇಕಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.