
ಮುಂಬೈ (ಆ.19): ಬಂದೂಕುಮತ್ತು ರಕ್ತಪಾತದ ಭೀತಿಯಿಂದಲೇ ಗುರುತಿಸಲ್ಪಡುತ್ತಿದ್ದ ಮಹಾರಾಷ್ಟ್ರದ ಗಡ್ಚಿರೋಲಿಯ ಹಿಂಸಾತ್ಮಕ ಭೂಮಿ ಇಂದು ಸಂಪೂರ್ಣ ಬದಲಾಗಿದೆ. ಒಂದು ಕಾಲದಲ್ಲಿ ಕ್ರಾಂತಿ ಮತ್ತು ಹಿಂಸೆಯ ಹಾದಿಯಲ್ಲಿದ್ದ 25,000ಕ್ಕೂ ಹೆಚ್ಚು ಮಾವೋವಾದಿಗಳು ಹಾಗೂ ಸ್ಥಳೀಯ ಬುಡಕಟ್ಟು ಜನರು ಇಂದು ದೇಶದ ಪ್ರಮುಖ ಉದ್ಯಮ ಸಂಸ್ಥೆಯೊಂದರ ಶೇರುದಾರರಾಗುವ (Shareholders) ಮೂಲಕ ಮುಖ್ಯವಾಹಿನಿಗೆ ಮರಳಿದ್ದಾರೆ.
ಖಾಸಗಿ ರಂಗದ ಪ್ರಮುಖ ಗಣಿ ಹಾಗೂ ಇಂಧನ ಕಂಪನಿ 'ಲಾಯ್ಡ್ಸ್ ಮೆಟಲ್ಸ್ ಅಂಡ್ ಎನರ್ಜಿ ಲಿಮಿಟೆಡ್' (Lloyds Metals and Energy Ltd) ಕೈಗೊಂಡ ಈ ಕ್ರಾಂತಿಕಾರಿ ಪುನರ್ವಸತಿ ಯೋಜನೆಯ ವಿವರಗಳನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (MD) ಬಾಲಸುಬ್ರಮಣ್ಯಂ ಪ್ರಭಾಕರನ್ ಬಹಿರಂಗಪಡಿಸಿದ್ದಾರೆ. ನಾಗಪುರದ 'ವಿಎನ್‌ಐಟಿ'ಯಲ್ಲಿ (VNIT) ನಡೆದ ನವೋದ್ಯಮ (Startup) ಸಮಾವೇಶದಲ್ಲಿ ಮಾತನಾಡಿದ ಅವರು, ಈ ಅಪರೂಪದ ಸಾಮಾಜಿಕ-ಆರ್ಥಿಕ ಮಾದರಿಯ ಕುರಿತು ವಿವರ ನೀಡಿದ್ದಾರೆ.
ನಕ್ಸಲಿಸಂ ಈಗ ಗಡ್ಚಿರೋಲಿಯಲ್ಲಿ ಇತಿಹಾಸವಾಗಿದೆ ಎಂದಿರುವ ಪ್ರಭಾಕರನ್, ಸುಮಾರು 25,000ಕ್ಕೂ ಹೆಚ್ಚು ಮಾಜಿ ಮಾವೋವಾದಿಗಳು ಪ್ರಸ್ತುತ ನಮ್ಮ ಕಂಪನಿಯ ಶೇರುದಾರರಾಗಿದ್ದಾರೆ. ನಾವು ಅವರನ್ನು ಕೇವಲ ಮಾಸಿಕ ವೇತನ ಪಡೆಯುವ ನೌಕರರನ್ನಾಗಿ ನೋಡದೆ, ಪ್ರತಿಯೊಂದು ಆರ್ಥಿಕ ವಹಿವಾಟಿನ ಪಾಲುದಾರರನ್ನಾಗಿ ಮಾಡಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಈ ಮಾಜಿ ನಕ್ಸಲೀಯರಿಗೆ ಉತ್ಪಾದನೆ, ತಯಾರಿಕೆ (Manufacturing), ಸಾರಿಗೆ, ಮಾರುಕಟ್ಟೆ ಹಾಗೂ ಪೂರೈಕೆ ಸರಪಳಿ ನಿರ್ವಹಣೆ ಸೇರಿದಂತೆ ಕಂಪನಿಯ ಪ್ರಮುಖ ವಿಭಾಗಗಳಲ್ಲಿ ಸೂಕ್ತ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ.
ಈ ಹಿಂದೆ ಎಡಪಂಥೀಯ ತೀವ್ರವಾದದ ಭಾಗವಾಗಿದ್ದ ಸ್ಥಳೀಯ ಬುಡಕಟ್ಟು ಮಹಿಳೆಯರಿಗೆ ಭಾರಿ ವಾಹನ/ಟ್ರಕ್ ಚಾಲನೆ ತರಬೇತಿ ನೀಡಲಾಗಿದೆ. ಇವರು ಪ್ರಸ್ತುತ ಚಾಲಕರಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಬರೋಬ್ಬರಿ 50,000 ರಿಂದ 60,000 ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಮುಂದೆ ಅವರು ಸ್ವಂತ ಉದ್ಯಮ ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಸ್ಥಳೀಯ ಆದಿವಾಸಿ ಮಕ್ಕಳ ಶಿಕ್ಷಣಕ್ಕೂ ಕಂಪನಿ ಒತ್ತು ನೀಡಿದ್ದು, ಕೃತಕ ಬುದ್ಧಿಮತ್ತೆ (Artificial Intelligence) ಉನ್ನತ ವ್ಯಾಸಂಗಕ್ಕಾಗಿ ಕೆಲವು ಬುಡಕಟ್ಟು ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಡಲಾಗಿದೆ.
ನವೋದ್ಯಮಿಗಳು ಕೇವಲ ಪ್ರಮುಖ ನಗರಗಳಿಗೆ ಸೀಮಿತವಾಗದೆ, ಗಡ್ಚಿರೋಲಿಯಂತಹ ಆರ್ಥಿಕವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಹೂಡಿಕೆ ಮಾಡುವಂತೆ ಪ್ರಭಾಕರನ್ ಮನವಿ ಮಾಡಿದ್ದಾರೆ. ಗಡ್ಚಿರೋಲಿ ಜಿಲ್ಲೆಯಲ್ಲಿ ಗಣಿಗಾರಿಕೆ, ತಯಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಭಾರಿ ಅವಕಾಶಗಳಿದ್ದು, ಈಗಾಗಲೇ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾಪಗಳು ಬಂದಿವೆ.
ವಿದರ್ಭ ಭಾಗದ ಅಪಾರ ಕಚ್ಚಾ ಕಬ್ಬಿಣದ (Iron Ore) ಸಂಪನ್ಮೂಲವನ್ನು ಬಳಸಿಕೊಂಡು 'ಡಿಫೆನ್ಸ್-ಗ್ರೇಡ್ ಸ್ಟೀಲ್' ಉತ್ಪಾದಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ಜರ್ಮನಿ ಹಾಗೂ ದಕ್ಷಿಣ ಕೊರಿಯಾದ ಜಾಗತಿಕ ಹೂಡಿಕೆದಾರರು ಗಡ್ಚಿರೋಲಿಯಲ್ಲಿ ಹೂಡಿಕೆ ಮಾಡಲು ಭಾರಿ ಆಸಕ್ತಿ ತೋರಿದ್ದಾರೆ. ನವೋದ್ಯಮಿಗಳು ಸಾಮಾಜಿಕ ಸವಾಲುಗಳನ್ನು ಉದ್ಯಮಾವಕಾಶಗಳನ್ನಾಗಿ ಪರಿವರ್ತಿಸಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.