ಅಮೃತ್ ಕಲಶ್ ವಿಶೇಷ ಎಫ್ ಡಿ ಯೋಜನೆಯನ್ನು ಎಸ್ ಬಿಐ ಮತ್ತೆ ಪ್ರಾರಂಭಿಸಿದೆ. ಕಡಿಮೆ ಅವಧಿಗೆ ಹೂಡಿಕೆ ಮಾಡಲು ಬಯಸೋರಿಗೆ ಈ ಯೋಜನೆ ಉತ್ತಮ ಆಯ್ಕೆ. ಹಾಗಾದ್ರೆ ಎಸ್ ಬಿಐ ಅಮೃತ್ ಕಲಶ್ ಯೋಜನೆಗೆ ಎಷ್ಟು ಬಡ್ಡಿ ನೀಡಲಾಗುತ್ತಿದೆ? ಹೂಡಿಕೆ ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಏ.17): ದೇಶದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 'ಎಸ್ ಬಿಐ ಅಮೃತ್ ಕಲಶ್' ಯೋಜನೆಯನ್ನು ಮರುಪರಿಚಯಿಸಿದೆ. ಇದು ನಿಗದಿತ ಅವಧಿಯ ಸ್ಥಿರ ಠೇವಣಿ ಯೋಜನೆಯಾಗಿದ್ದು, 400 ದಿನಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯನ್ನುಈ ಹಿಂದೆಯೇ ಬ್ಯಾಂಕ್ ಪರಿಚಯಿಸಿದ್ದು, ಅದರ ಅವಧಿ 2023ರ ಫೆಬ್ರವರಿ 15 ಹಾಗೂ 2023ರ ಮಾರ್ಚ್ 31ರ ನಡುವೆ ಇತ್ತು. ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ರಿಟರ್ನ್ ಸಿಗಲಿದೆ. ಬ್ಯಾಂಕಿನ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಹೆಚ್ಚುವರಿ ಶೇ.1ರಷ್ಟು ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಮೃತ್ ಕಲಶ್ ಯೋಜನೆಯನ್ನು ಎಸ್ ಬಿಐ ಏಪ್ರಿಲ್ 12ರಂದು ಮರುಪರಿಚಯಿಸಿದ್ದು, ಜೂನ್ 30, 2023ರ ತನಕ ಜಾರಿಯಲ್ಲಿರಲಿದೆ.
ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಅಮೃತ್ ಕಲಶ್ ( Amrit Kalash) ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅವಧಿಯಲ್ಲಿ ಪಾವತಿಸಲಾಗುತ್ತದೆ. ಅಮೃತ್ ಕಲಶ್ ಠೇವಣಿ ಯೋಜನೆ ಮೂಲಕ ಸಾಲಕ್ಕೆ (Loan) ಕೂಡ ಅರ್ಜಿ ಸಲ್ಲಿಸಬಹುದು. ಇನ್ನು ಅವಧಿಗೆ ಮುನ್ನ ವಿತ್ ಡ್ರಾ (Withdraw) ಮಾಡಲು ಕೂಡ ಗ್ರಾಹಕರಿಗೆ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಈ ಠೇವಣಿಗೆ ಟಿಡಿಎಸ್ ಕೂಡ ಅನ್ವಯಿಸುತ್ತದೆ. ಇನ್ನು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎನ್ ಆರ್ ಐ (NRI) ಟರ್ಮ್ ಡೆಪಾಸಿಟ್ ಗೆ ಕೂಡ ಈ ಯೋಜನೆ ಅನ್ವಯಿಸುತ್ತದೆ.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಹೊಸ ದರ ಪ್ರಕಟ; ಒಪಿಡಿ ರೂಮ್ ಶುಲ್ಕ ಪರಿಷ್ಕರಣೆ
ಎಷ್ಟು ಬಡ್ಡಿ ಗಳಿಕೆ ಮಾಡಬಹುದು?
ಅಮೃತ್ ಕಲಶ್ ಯೋಜನೆ ಅವಧಿ 400 ದಿನಗಳು. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 1ಲಕ್ಷ ರೂ. ಹೂಡಿಕೆ ಮಾಡಿದ್ರೆ ಸುಮಾರು 8600 ಬಡ್ಡಿ ಸಿಗುತ್ತದೆ. ಇತರರಿಗೆ 400 ದಿನಗಳ ಅವಧಿಗೆ 1ಲಕ್ಷ ರೂ. ಹೂಡಿಕೆ ಮೇಲೆ 8,017ರೂ. ಬಡ್ಡಿದರ ಸಿಗುತ್ತದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಎಸ್ ಬಿಐ ಸ್ಥಿರ ಠೇವಣಿ (FD) ಹಾಗೂ ರಿಕರಿಂಗ್ ಡೆಫಾಸಿಟ್ (RD) ಮೇಲಿನ ಬಡ್ಡಿದರದಲ್ಲಿ ಕೂಡ ಹೆಚ್ಚಳವಾಗಿದೆ. ಏಳು ದಿನಗಳಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಎಸ್ ಬಿಐ ಶೇ.3ರಿಂದ ಶೇ. 6.50 ಬಡ್ಡಿ ವಿಧಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಶೇ.3.50ರಿಂದ ಶೇ.7.25 ಬಡ್ಡಿ ವಿಧಿಸುತ್ತಿದೆ. ಇನ್ನು 12 ತಿಂಗಳಿಂದ ಹಿಡಿದು 10 ವರ್ಷಗಳ ಅವಧಿಯ ಆರ್ ಡಿ ಯೋಜನೆಗಳ ಮೇಲಿನ ಬಡ್ಡಿದರ ಶೇ.6.5ರಿಂದ ಶೇ.6.80ರಷ್ಟಿದೆ.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ
ಸುಮಾರು ಒಂದು ವರ್ಷ ಅವಧಿಗೆ ಹೂಡಿಕೆ (Invest) ಮಾಡಲು ಯೋಚಿಸುತ್ತಿರುವ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಎಸ್ ಬಿಐ ಅಮೃತ್ ಕಲಶ್ ಯೋಜನೆಗೆ ನೀಡುತ್ತಿರುವ ಬಡ್ಡಿದರ ಅಂಚೆ ಕಚೇರಿಯ ಒಂದು ವರ್ಷ ಅವಧಿಯ ಟೈಮ್ ಡೆಫಾಸಿಟ್ ಗಿಂತ ಹೆಚ್ಚಿದೆ. ಹೀಗಾಗಿ ಕಡಿಮೆ ಅವಧಿಗೆ ಹೂಡಿಕೆ ಮಾಡಲು ಬಯಸೋರು ಈ ಯೋಜನೆ ಆಯ್ಕೆ ಮಾಡಬಹುದು.