ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆ; ಕೇವಲ ಎರಡೇ ವರ್ಷಗಳಲ್ಲಿ ಇವರ ಸಂಪತ್ತು ಮೂರು ಪಟ್ಟು ಹೆಚ್ಚಳ

By Suvarna NewsFirst Published Jul 19, 2022, 5:55 PM IST
Highlights

*ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಗೆ 91ನೇ ಸ್ಥಾನ
*ಕೇವಲ ಎರಡು ವರ್ಷಗಳಲ್ಲಿ ಸಾವಿತ್ರಿ ಜಿಂದಾಲ್ ನಿವ್ವಳ ಸಂಪತ್ತಿನಲ್ಲಿ ಸುಮಾರು 12 ಶತಕೋಟಿ  ಡಾಲರ್ ಏರಿಕೆ
*2005ರಲ್ಲಿ ಪತಿ ನಿಧನದ ಬಳಿಕ ಸಂಸ್ಥೆ ಮುನ್ನಡೆಸುವ ಜವಾಬ್ದಾರಿ ಹೊತ್ತ ಸಾವಿತ್ರಿ ಜಿಂದಾಲ್
 

ನವದೆಹಲಿ (ಜು.19): 2005ರಲ್ಲಿ ಪತಿಯ ಅಕಾಲಿಕ ನಿಧನದ ಬಳಿಕ ಜಿಂದಾಲ್ ಸ್ಟೀಲ್ ಹಾಗೂ ಇಂಧನ ಕ್ಷೇತ್ರದ ಚುಕ್ಕಾಣಿ ಹಿಡಿದ ಸಾವಿತ್ರಿ ಜಿಂದಾಲ್, ಇಂದು  ಫೋರ್ಬ್ಸ್ ನಿಯತಕಾಲಿಕದ 'ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ' 91ನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲ, ಕಳೆದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅವರ ನಿವ್ವಳ ಸಂಪತ್ತಿನಲ್ಲಿ ಸುಮಾರು 12 ಶತಕೋಟಿ  ಡಾಲರ್ ಏರಿಕೆಯಾಗಿದೆ. ಒಟ್ಟು 18 ಶತಕೋಟಿ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅಲ್ಲದೆ,  ಫೋರ್ಬ್ಸ್ 2021ರ ಶ್ರೀಮಂತ ಭಾರತೀಯರ ಟಾಪ್  10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಕೂಡ ಹೌದು. 72 ನೇ ವಯಸ್ಸಿನ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ ಕೇವಲ ಎರಡು ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿರೋದು ಕೊರೋನಾ ಪೆಂಡಾಮಿಕ್ ಮಧ್ಯಭಾಗದಲ್ಲೇ ಬಿಡುಗಡೆಯಾದ ಫೋರ್ಬ್ಸ್ ವಿಶ್ವದ ಶ್ರೀಮಂತರ  ಪಟ್ಟಿಯಲ್ಲಿ ಬಹಿರಂಗವಾಗಿತ್ತು. ಜಿಂದಾಲ್ ಗ್ರೂಪ್ ನ ತಾಯಿ ಸ್ಥಾನದಲ್ಲಿರುವ ಸಾವಿತ್ರಿ ಜಿಂದಾಲ್ ಪತಿ ಒ.ಪಿ.ಜಿಂದಾಲ್ 2005ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಬಳಿಕ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು . ಆಗ ಅವರಿಗೆ 55 ವರ್ಷ ವಯಸ್ಸು. ಇಂದು ಸಾವಿತ್ರಿ ಜಿಂದಾಲ್ ಒ.ಪಿ. ಜಿಂದಾಲ್ ಗ್ರೂಪ್ ಮುಖ್ಯಸ್ಥೆ.ಇವರ ನಾಯಕತ್ವದಲ್ಲಿ ಸಂಸ್ಥೆ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ.   

2020ರಲ್ಲಿ 4.8 ಶತಕೋಟಿ ಡಾಲರ್ ಇದ್ದ ಸಾವಿತ್ರಿ ಜಿಂದಾಲ್ ಅವರ ಸಂಪತ್ತು, 2022ರಲ್ಲಿ 17.7 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. ಸಾವಿತ್ರಿ ಜಿಂದಾಲ್ ಅವರ ಅದೃಷ್ಟ ಎರಡು ವರ್ಷಗಳಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಗತಿಯಾಗಿದೆ. ಆದರೂ 2019 ಹಾಗೂ 2020ರ ನಡುವೆ ಅವರ ನಿವ್ವಳ ಸಂಪತ್ತು 5.9 ಶತಕೋಟಿ ಡಾಲರ್ ನಿಂದ 4.8 ಶತಕೋಟಿ ಡಾಲರ್ ಗೆ ಇಳಿಕೆಯಾಗಿತ್ತು. ಸಾವಿತ್ರಿ ಜಿಂದಾಲ್ ಉದ್ಯಮಿಯಾಗಿ ಬೆಳೆದ ಕಥೆಯೇ ರೋಚಕ. ಸಾಮಾನ್ಯವಾಗಿ ಉದ್ಯಮ ರಂಗದಲ್ಲಿ ಸಾಧನೆ ಮಾಡಿದ ಇತ್ತೀಚಿನ ಮಹಿಳೆಯರನ್ನು ಗಮನಿಸಿದ್ರೆ, ಬಹುತೇಕ ಎಲ್ಲರೂ ಉನ್ನತ ಶಿಕ್ಷಣ ಪಡೆದವರೇ ಆಗಿದ್ದಾರೆ. ಆದರೆ, ಸಾವಿತ್ರಿ ಜಿಂದಾಲ್ ಕಾಲೇಜು ಮೆಟ್ಟಿಲು ಹತ್ತಿಯೇ ಇಲ್ಲವಂತೆ. ಆದರೂ ಕೂಡ ವಿಶ್ವದ ಶ್ರೀಮಂತ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. 

ಅಕ್ಕಿ, ಬೇಳೆ, ಹಾಲು, ಮೊಸರು ಸೇರಿ 14 ಅಗತ್ಯ ವಸ್ತುಗಳ ತೆರಿಗೆ ಹಿಂಪಡೆದ ಕೇಂದ್ರ, ಷರತ್ತು ಅನ್ವಯ!

ಮಂತ್ರಿಯೂ ಆಗಿದ್ದರು
ಅಸ್ಸಾಂನ ( Assam) ಟಿನ್ ಸುಕಿಯಾದಲ್ಲಿ(Tinsukia) 1950ರ ಮಾರ್ಚ್  20ರಂದು ಜನಿಸಿದ ಸಾವಿತ್ರಿ, 1970ರಲ್ಲಿ ಒಪಿ ಜಿಂದಾಲ್ (OP Jindal) ಅವರನ್ನು ವಿವಾಹವಾದರು.  ಪತಿಯ ಸಾವಿಗೂ ಮುನ್ನ ಅವರು ಮನೆ, ಮಕ್ಕಳ ಜವಾಬ್ದಾರಿಯಷ್ಟೇ ವಹಿಸಿಕೊಂಡು ಅಪ್ಪಟ್ಟ ಗೃಹಿಣಿಯಾಗಿದ್ದರು. ಆದರೆ, ನಂತರದಲ್ಲಿ ಅವರ ಹಾದಿಯೇ ಬದಲಾಯಿತು. ಸಾವಿತ್ರಿ ಜಿಂದಾಲ್ ಹೆಸರು ಬರೀ ಉದ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಈ ಹಿಂದೆ ಇವರು ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಈ ಹಿಂದೆ ಹರಿಯಾಣದಲ್ಲಿ (Haryana) ಭೂಪಿಂದರ್ ಸಿಂಗ್ ಸರ್ಕಾರದಲ್ಲಿ ಸಾವಿತ್ರಿ ಜಿಂದಾಲ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 

ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್

ಜಿಂದಾಲ್ ಗ್ರೂಪ್ ದೇಶದ ಅತೀದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. ಇವರ ಒಬ್ಬ ಪುತ್ರ ಸಜ್ಜನ್ ಜಿಂದಾಲ್ ಜೆಎಸ್ ಡಬ್ಲ್ಯು ಸ್ಟೀಲ್ (JSW Steel) ಮುನ್ನಡೆಸಿದರೆ, ಇನ್ನೊಬ್ಬ ಪುತ್ರ ನವೀನ್ ಜಿಂದಾಲ್, ಜಿಂದಾಲ್ ಸ್ಟೀಲ್  ಹಾಗೂ ಇಂಧನ ಕ್ಷೇತ್ರದ (Jindal Steel & Power) ನಿರ್ವಹಣೆ ಮಾಡುತ್ತಿದ್ದಾರೆ. ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್, ಫಾರ್ಮಾ ಕ್ಷೇತ್ರದ ಪ್ರಮುಖ ಸಂಸ್ಥೆ ಯುಎಸ್ ವಿ ಲಿಮಿಟೆಡ್ ನ ಲೀನಾ ತಿವಾರಿ ಹಾಗೂ ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ  ಕಿರಣ್ ಮಜುಂದರ್ ಷಾ ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಭಾರತೀಯ ಮಹಿಳೆಯರು.  

click me!