ಆನ್‌ಲೈನ್ ಬ್ಯಾಂಕಿಂಗ್: ನಿಮ್ಮ ಬಳಿಯಿರಲಿ ಸುರಕ್ಷತೆಯ ಕೀಲಿ ಕೈ!

By Web DeskFirst Published Jul 20, 2019, 3:28 PM IST
Highlights

ಪೆಪ್ಪರ್ ಮೆಂಟ್‌ನಷ್ಟು ಸಿಹಿಯಾಗುತ್ತಿದೆ ಆನ್‌ಲೈನ್ ಬ್ಯಾಂಕಿಂಗ್| ಕುಳಿತಲ್ಲೇ ಪಡೆಯಬಹುದು ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ| ದಿನದ 24 ತಾಸುಗಳೂ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಲಭ್ಯ| ಆದರೆ ನಿಮ್ಮ ಖಾತೆಗೆ ಆನ್‌ಲೈನ್ ಖದೀಮರ ಕಾಟ| ಹ್ಯಾಕಿಂಗ್ ಮೂಲಕ ಖಾತೆಯ ಹಣ ಎಗರಿಸುವ ಖದೀಮರು| ಆನ್‌ಲೈನ್ ಬ್ಯಾಂಕಿಂಗ್ ಸೇಫ್ಟಿಗಾಗಿ ನೀವು ಕೈಗೊಳ್ಳಬೇಕಾದ ಕ್ರಮಗಳು| ನಿಯಮಿತವಾಗಿ ಪಾಸ್‌ವರ್ಡ್ ಬದಲಾವಣೆ ನಿಮ್ಮ ಖಾತೆ ಸುರಕ್ಷಿತವಾಗಿಡಬಲ್ಲದೇ?|

ಬೆಂಗಳೂರು(ಜು.20): ಡಿಜಿಟಲ್ ಮತ್ತು ಕ್ಯಾಶ್‌ಲೆಸ್ ಮಾರ್ಪಾಡಿನಿಂದಾಗಿ ಕಬ್ಬಿಣದ ಕಡಲೆಯಂತಿದ್ದ ಬ್ಯಾಂಕಿಂಗ್ ವ್ಯವಸ್ಥೆ ಪೆಪ್ಪರ್ ಮೆಂಟ್‌ನಷ್ಟು ಸಿಹಿಯಾಗುತ್ತಿದೆ. ಬ್ಯಾಂಕ್ ಬಾಗಿಲು ಹಾಕುವಷ್ಟರಲ್ಲಿ ಹಣ ಪಾವತಿಸಬೇಕೆಂದು ದೌಡಾಯಿಸುವಂತಿಲ್ಲ, ಯಾವ್ಯಾವ ಹೊಸ ಸ್ಕೀಮ್‌ಗಳು ಜಾರಿಗೊಂಡಿವೆ ಎಂಬ ಮಾಹಿತಿ ಪಡೆಯಲು ಬ್ಯಾಂಕ್ ಸಿಬ್ಬಂದಿಯನ್ನೇ ಹುಡುಕಿ ಹೋಗುವಂತಿಲ್ಲ.

ನಮ್ಮ ಖಾತೆಯಲ್ಲಿ ಎಷ್ಟು ಹಣವಿದೆ? ಯಾವಾಗ ಎಷ್ಟು ಡ್ರಾ ಮಾಡಿದೆ? ಎಲ್ಲಾ ಮಾಹಿತಿಯನ್ನು ಕುಳಿತಲ್ಲೇ ಪಡೆಯಬಹುದು, ಹಣ ವರ್ಗಾವಣೆ, ಬಿಲ್ ಪಾವತಿ ಸೇರಿದಂತೆ ಎಲ್ಲಾ ಹಣಕಾಸು ವ್ಯವಹಾರವನ್ನು ನೀರು ಕುಡಿದಷ್ಟು ಸುಲಭವಾಗಿ ಪೂರ್ಣಗೊಳಿಸಲು ನೆರವಾಗುತ್ತಿರುವುದೇ ‘ಆನ್‌ಲೈನ್ ಬ್ಯಾಂಕಿಂಗ್’. ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಮೊಬೈಲ್ ಬ್ಯಾಂಕಿಂಗ್, ಯುಪಿಐ ಪೇಮೆಂಟ್, ಎಸ್‌ಎಂಎಸ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಎಲ್ಲವೂ ಸೇರ್ಪಡೆಯಾಗಿವೆ.

ದಿನದ 24 ತಾಸುಗಳೂ ಸೇವೆ ಲಭ್ಯವಿರುವುದರಿಂದ ಯಾವಾಗ ಬೇಕಾದರೂ ಹಣಕಾಸು ವ್ಯವಹಾರ ನಡೆಸಬಹುದು. ಬ್ಯಾಂಕಿನಲ್ಲಿ ಹಣ ಪಡೆಯಲು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಿರುತ್ತದೆ. ಆದರೆ ಆನ್‌ಲೈನ್‌ನಲ್ಲಿ ನಿಮಿಷಗಳು ಸಾಕು.

ಹಣ ವರ್ಗಾವಣೆ, ನಾನಾ ಬಗೆಯ ಬಿಲ್ ಪಾವತಿ, ರೈಲು ಟಿಕೆಟ್, ಸಿನಿಮಾ ಟಿಕೆಟ್ ಬುಕ್ಕಿಂಗ್, ಮೊಬೈಲ್ ರಿಚಾರ್ಜ್ ಸೇರಿದಂತೆ ಅನೇಕ ಉಪಯೋಗಗಳು ಆನ್‌ಲೈನ್ ಬ್ಯಾಂಕಿಂಗ್‌ನಿಂದ ಲಭ್ಯ. ಆದರೆ, ಯಾವುದೇ ಯೋಜನೆ ಎಷ್ಟು ಉಪಯೋಗವಿರುತ್ತದೆಯೋ ಅಷ್ಟೇ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿರುತ್ತದೆ

ಒಂದು ಖಾಲಿ ಎಸ್‌ಎಂಎಸ್, ಇ-ಮೇಲ್ ಕಳುಹಿಸಿಯೇ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನ್ನು ಹ್ಯಾಕ್ ಮಾಡಿ, ಖಾತೆಯಲ್ಲಿರುವ ಹಣವನ್ನೆಲ್ಲಾ ದೋಚುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಜಗಜ್ಜಾಹೀರು. ಹಾಗಾಗಿ ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗ ತುಸು ಎಚ್ಚರವಾಗಿರಬೇಕು. ಇ-ಬ್ಯಾಂಕಿಂಗ್ ಮಾಡುವಾಗ ಪಬ್ಲಿಕ್ ವೈಫೈಯನ್ನು ಬಳಸದಂತೆ ಎಚ್ಚರ ವಹಿಸಬೇಕು.

ಇಲ್ಲದಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ವಶವಾಗಿಬಿಡುತ್ತವೆ. ಇ-ಬ್ಯಾಂಕಿಂಗ್ ಅಥವಾ ಯುಪಿಐ ಪಾಸ್‌ವರ್ಡ್, ಪಿನ್ ನಂಬರ್ ಕ್ಲಿಷ್ಟವಾಗಿದ್ದರೆ ಒಳಿತು. ಜೊತೆಗೆ ಆಗಾಗ್ಗೆ ಪಾಸ್ ವರ್ಡ್ ಬದಲಿಸಿ, ಅದು ಕೂಡ ನಿಮ್ಮ ಹೆಸರು, ಮೊಬೈಲ್ ಇಡದೆ, ಅಕ್ಷರ, ಚಿಹ್ನೆ, ನಿಮಗೆ ಸಂಬಂಧಿಸಿದಲ್ಲದ ತುಂಬಾ ಕಷ್ಟವಾಗಿರುವ ಪಾಸ್‌ವರ್ಡ್ ರಚಿಸಿ ನಿಮ್ಮ ಖಾತೆಗೆ ಸುಲಭವಾಗಿ ಯಾರೂ ಕೈ ಹಾಕದಂತೆ ಎಚ್ಚರ ವಹಿಸಿ.

ಇ-ಮೇಲ್‌ಗಳಲ್ಲಿ ಶೇ.80ಕ್ಕೂ ಹೆಚ್ಚು ಸ್ಪ್ಯಾಮ್ ಆಗಿರುವುದರಿಂದ ನಿಮ್ಮ ಇ-ಮೇಲ್ ಮೂಲಕ ನೆಟ್ ಬ್ಯಾಂಕಿಂಗ್ ಸೈನ್‌ಇನ್ ಆಗುವುದನ್ನು ತಡೆಗಟ್ಟಿ. ನೀವಿರದ ಸಮಯದಲ್ಲಿ ನಿಮ್ಮ ಮನೆಯ ಸುರಕ್ಷತೆಗಾಗಿ ಬೀಗ ಜಡಿಯುವಂತೆ ಇ-ಬ್ಯಾಂಕಿಂಗ್ ವ್ಯವಹಾರ ಮುಗಿದ ಕೂಡಲೇ ಮರೆಯದೇ ಲಾಗ್‌ಔಟ್ ಮಾಡಿ. ಜೊತೆಗೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್‌ನ ಅಧಿಕೃತ ಆ್ಯಪ್ ಬಳಸಿದರೆ ಹೆಚ್ಚು ಸುರಕ್ಷಿತ.

ಇದರಿಂದ ಮಾಹಿತಿ ಹೆಚ್ಚು ಸೋರಿಕೆ ಆಗದು. ಪ್ಯಾಡ್‌ಲಾಕ್ ಲಾಕ್ ಆಗಿರುವ ಸುರಕ್ಷಿತ ವೆಬ್‌ಸೈಟ್‌ನ್ನು ಬಳಸಿ. ಅಪರಿಚಿತರಿಗೆ ಹಣ ವರ್ಗಾವಣೆ ಮಾಡುವಾಗ ತುಸು ಎಚ್ಚರದಿಂದಿರಿ. ನಿಮ್ಮ ಖಾತೆಯ ವಿವರಗಳನ್ನು ಯಾರ ನಂಬರಿಗೂ ಶೇರ್ ಮಾಡದಿರಿ. ಆನ್‌ಲೈನ್ ಬ್ಯಾಂಕಿಂಗ್‌ನಿಂದ ಹೆಚ್ಚು ಪ್ರಯೋಜನಗಳಿವೆ. ತ್ವರಿತವಾಗಿ ಕೆಲಸ ಮುಗಿಯುತ್ತದೆ. ಸಮಯವೂ ಉಳಿತಾಯವಾಗಲಿದೆ.

ಆದರೆ ಯಾವುದರಿಂದ ಹೆಚ್ಚು ಉಪಯೋಗವಿರುತ್ತದೆಯೋ? ಯಾವುದನ್ನು ಹೆಚ್ಚು ಜನರು ಬಳಸುತ್ತಾರೆಯೋ ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುವುದು. ಎಚ್ಚರ ತಪ್ಪಿ ಮೋಸ ಹೋಗುವ ಮುನ್ನ ಸುರಕ್ಷತಾ ಕ್ರಮಗಳನ್ನು ಬಳಸಿ ನಿಮ್ಮ ಆನ್‌ಲೈನ್ ಬ್ಯಾಂಕಿಂಗ್‌ನ್ನು ಸುರಕ್ಷಿತವಾಗಿ ನಡೆಸುವುದು ಒಳಿತು.

click me!