
ಬೆಂಗಳೂರು: 41 ಲಕ್ಷ ಠೇವಣಿ ಇಟ್ಟರೂ IRT ಸಲ್ಲಿಸದ ಬೆಂಗಳೂರು ವ್ಯಕ್ತಿಯೊಬ್ಬರ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದಾಯ ತೆರಿಗೆಯನ್ನು ತಪ್ಪಿಸಿಕೊಳ್ಳಲು ಹಲವು ಮೂಲಗಳನ್ನು ಹುಡುಕುವವರು ಇದ್ದಾರೆ. ಅವರ ನಡುವೆ, ಈ ವ್ಯಕ್ತಿ ಕೊಟ್ಟ ಕಾರಣ ಕೇಳಿ ಅಧಿಕಾರಿಗಳೇ ದಂಗು ಬಡೆದು ಹೋಗಿದ್ದಾರೆ. ಅಷ್ಟಕ್ಕೂ ಈತ ಹೇಳಿದ್ದೇನೆಂದರೆ, ನನ್ನ ಖರ್ಚುಗಳನ್ನು ತನ್ನ ಹೆಂಡತಿ ಮತ್ತು ತಂದೆ ಭರಿಸುತ್ತಿದ್ದಾರೆ. ಆದ್ದರಿಂದ ನಾನು ತೆರಿಗೆ ಕಟ್ಟಬೇಕಾಗಿಲ್ಲ ಎಂದಿದ್ದಾನೆ!
ಬೆಂಗಳೂರಿನ ಇಂದಿರಾನಗರದ ರೆಡ್ಡಿ ಎನ್ನುವವರ ಪ್ರಕರಣ ಇದಾಗಿದೆ. ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬಂದದ್ದು, ತೆರಿಗೆದಾರರು ವಿದೇಶಕ್ಕೆ ಪ್ರಯಾಣಿಸಲು ವೀಸಾಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ! ಇಲ್ಲದಿದ್ದರೆ, ಅದು ಹಾಗೆಯೇ ಉಳಿದು ಹೋಗುತ್ತಿತ್ತು. ತೆರಿಗೆ ಇಲಾಖೆ ಅಧಿಕಾರಿಗಳ ಎದುರು, ಅವರು ತಾವು ತೆರಿಗೆ ಕಟ್ಟಲು ಅರ್ಹರೇ ಅಲ್ಲ ಎಂದು ವಾದಿಸಿದರು. ತಾವು ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಕಡಿಮೆ ಸಂಪಾದಿಸುತ್ತಿರುವುದಾಗಿ ತಿಳಿಸಿದರು, ಅದು ಕೂಡ ಬಾಡಿಗೆ ಮನೆಯಿಂದ ಎಂದರು. ನನ್ನ ಪತ್ನಿ ಮತ್ತು ತಂದೆ ಎಲ್ಲಾ ಖರ್ಚುಗಳನ್ನು ಭರಿಸಿದ್ದರಿಂದ, ಐಟಿಆರ್ ಸಲ್ಲಿಸಲಿಲ್ಲ ಅಥವಾ ತೆರಿಗೆ ರಿಟರ್ನ್‌ಗಳಿಗಾಗಿ ತಮ್ಮ ಮೇಲ್‌ಗಳನ್ನು ಅಥವಾ ಇ-ಫೈಲಿಂಗ್ ಪೋರ್ಟಲ್ ಅನ್ನು ಪರಿಶೀಲಿಸಿಲ್ಲ ಎಂದು ವಾದಿಸಿದರು.
ಆದರೆ, ಆದಾಯ ತೆರಿಗೆ ಅಧಿಕಾರಿ ಅವರ ಮಾತನ್ನು ನಂಬಲಿಲ್ಲ ಮತ್ತು ಸೆಕ್ಷನ್ 69A ಅಡಿಯಲ್ಲಿ ವಿವರಿಸಲಾಗದ ನಗದು ಠೇವಣಿಯಾಗಿ 41.69 ಲಕ್ಷ ರೂ.ಗಳನ್ನು ಮತ್ತು ವಿವರಿಸಲಾಗದ ಕ್ರೆಡಿಟ್ ಆಗಿ 3.69 ಲಕ್ಷ ರೂ.ಗಳನ್ನು ಮತ್ತು ವ್ಯವಹಾರ ಅಥವಾ ವೃತ್ತಿಪರ ಆದಾಯವಾಗಿ 1.5 ಲಕ್ಷ ರೂ.ಗಳನ್ನು ಅವರ ಹೆಸರಿಗೆ ಸೇರಿಸಿ ಬಡ್ಡಿ ವಿಧಿಸಿ ದಂಡದ ಪ್ರಕ್ರಿಯೆಗಳನ್ನು ಸಹ ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ, ರೆಡ್ಡಿ ಅವರು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರು.
ತಮಗೆ ಈ ಬಗ್ಗೆ ಅರಿವೇ ಇರಲಿಲ್ಲ. ಇ-ಮೇಲ್ ನೋಡುತ್ತಿರಲಿಲ್ಲ. ಆದ್ದರಿಂದ ಆದಾಯ ತೆರಿಗೆಯಿಂದ ಬಂದ ನೋಟಿಸ್ ಕೂಡ ಗಮನಿಸಲಿಲ್ಲ ಎಂದು ರೆಡ್ಡಿ ವಾದಿಸಿದರು. ಆದರೆ ಕೋರ್ಟ್ ಅವರ ವಾದ ಒಪ್ಪಲಿಲ್ಲ. ಏಕೆಂದರೆ, ಹಿಂದಿನ ವರ್ಷ ಅವರು ರಿಟರ್ನ್ಸ್ ಸಲ್ಲಿಸಿದ್ದರು ಮತ್ತು ಆದ್ದರಿಂದ, ಆದಾಯ ತೆರಿಗೆ ಅನುಸರಣೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂಬ ಅವರ ವಾದವು ಮನವರಿಕೆಯಾಗುವುದಿಲ್ಲ ಎಂದು ಗಮನಿಸಿತು. ಕೇವಲ ಸಹಾನುಭೂತಿಯ ಆಧಾರದ ಮೇಲೆ ಕೇಸ್ ವಿಚಾರಣೆ ನಡೆಸಲಾಗದು ಎಂದು ಕೋರ್ಟ್ ಹೇಳಿತು. ಆದ್ದರಿಂದ ರೆಡ್ಡಿ ಅವರಿಗೆ ಈಗ ಭಾರಿ ಪ್ರಮಾಣದ ದಂಡ ಬೀಳುವ ನಿರೀಕ್ಷೆ ಇದೆ. ತೆರಿಗೆ, ಬಡ್ಡಿ ಮತ್ತು ದಂಡಗಳನ್ನು ರೆಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಎಲ್ಲವನ್ನೂ ಸೇರಿಸಿ ಮತ್ತಷ್ಟು ದಂಡ ಬೀಳುವ ಸಾಧ್ಯತೆ ಇದೆ. ಸದ್ಯ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೋಡಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.