
ಮುಂಬೈ(ಅ.31): ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆರ್ ಬಿಐ ಕರ್ತವ್ಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡುತ್ತಿದೆ ಎಂಬ ಉನ್ನತ ಅಧಿಕಾರಿಗಳ ಆರೋಪ ಮತ್ತು ಆರ್‌ಬಿಐ ನೀತಿ ನಿರೂಪಣೆ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಅಸಮಾಧಾನ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ.
ಇದೇ ವೇಳೆ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ಕೂಡ ಸರ್ಕಾರದ ಒತ್ತಡದಿಂದ ರೋಸಿ ಹೋಗಿದ್ದು, ಇಂದು ತಮ್ಮ ಸ್ಥಾನಕ್ಕೆ ರಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿನ್ನೆಯಷ್ಟೇ ಆರ್‌ಬಿಐ ಹೆಚ್ಚುವರಿ ಸಾಲ ನೀಡಿಕೆಯ ನೀತಿಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದರು. ಇದಕ್ಕೂ ಮೊದಲು ಆರ್‌ಬಿಐ ಉಪ ಗರ್ವನರ್ ವಿರಾಲ್ ಆಚಾರ್ಯ ಸಂಸ್ಥೆಯ ಕಾರ್ಯ ಚಟುವಟಿಕೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಈ ಎಲ್ಲ ಬೆಳವಣಿಗೆಗಳಿಂದ ರೋಸಿ ಹೋಗಿರುವ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ ಎಂಬ ಗುಲ್ಲು ಎದ್ದಿದೆ. ಆದರೆ ಕೇಂದ್ರ ಹಣಕಾಸು ಇಲಾಖೆ ಮತ್ತು ಆರ್‌ಬಿಐ ಮೂಲಗಳು ಇದನ್ನು ತಳ್ಳಿ ಹಾಕಿವೆ.
ಈ ಮಧ್ಯೆ ಊರ್ಜಿತ್ ಪಟೇಲ್ ರಾಜೀನಾಮೆ ವದಂತಿ ಹಬ್ಬುತ್ತಿದ್ದಂತೇ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಈ ಮೊದಲು ಡಾಲರ್ ಎದುರು 73.66 ರೂ. ಇದ್ದ ರೂಪಾಯಿ ಮೌಲ್ಯ, ರಾಜೀನಾಮೆ ವದಂತಿಯಿಂದಾಗಿ 73.99 ರೂ.ಗೆ ಏರಿಕೆಯಾಯಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.