
ನವದೆಹಲಿ(ಅ.31): ತನ್ನ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಹಿ ಸುದ್ದಿಯೊಂದನ್ನು ನೀಡಿದೆ. ಎಟಿಎಂಗಳಿಂದ ದಿನವೊಂದಕ್ಕೆ ಹಣ ಪಡೆಯುವ ಮಿತಿಯನ್ನು 40 ಸಾವಿರ ರೂ. ದಿಂದ 20 ಸಾವಿರ ರೂ. ಗೆ ಕಡಿತಗೊಳಿಸಲಾಗಿದೆ.
ಎಸ್‌ಬಿಐ ನ ಈ ನಿರ್ಧಾರದಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ಕಾರಣ ಮೊದಲಿನಂತೆ ಅಧಿಕ ಹಣವನ್ನು ಎಟಿಎಂನಿಂದ ಪಡೆಯಲು ಎಸ್‌ಬಿಐ ಗ್ರಾಹಕರಿಗೆ ಸಾಧ್ಯವಾಗುವುದಿಲ್ಲ. ಎಸ್‌ಬಿಐನ ಕ್ಲಾಸಿಕ್ ಮತ್ತು ಮಾಸ್ಟ್ರೋ ಕಾರ್ಡ್ ಬಳಕೆದಾರರಿಗೆ ಮಾತ್ರ ನಿಯಮ ಅನ್ವಯವಾಗಲಿದೆ.
ಹಬ್ಬಕ್ಕೂ ಮೊದಲೇ ಗ್ರಾಹಕರ ಮೇಲೆ ಬರೆ:
ದೀಪಾವಳಿ ಹಬ್ಬಕ್ಕೂ ಮೊದಲೇ ಎಸ್ ಬಿಐ ಈ ಕ್ರಮ ಜಾರಿಗೆ ತರುತ್ತಿದ್ದು, ಇದರಿಂದ 42 ಕೋಟಿ ಎಸ್‌ಬಿಐ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಇದೇ ವೇಳೆ 20 ಸಾವಿರ ರೂ.ಗಿಂತ ಅಧಿಕ ಮೊತ್ತವನ್ನು ಎಟಿಎಂನಿಂದ ಹಿಂಪಡೆಯಬೇಕಾದರೆ ಉನ್ನತ ಶ್ರೇಣಿಯ ಡೆಬಿಟ್ ಕಾರ್ಡ್‌ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಯಾಕಿಂತ ನಿರ್ಧಾರ?:
ತನ್ನ ನಿರ್ಧಾರಕ್ಕೆ ಕಾರಣವನ್ನೂ ನೀಡಿರುವ ಎಸ್‌ಬಿಐ, ನಕಲಿ ಎಟಿಎಂ ಕಾರ್ಡ್ ವಂಚಕರು 40 ಸಾವಿರ ಗರಿಷ್ಠ ಮಿತಿಯನ್ನು ಬಳಸಿ ವಂಚಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಂಚನೆ ತಡೆಗಟ್ಟಲು ಮತ್ತು ಡಿಜಿಟಲ್ ವಹಿವಾಟು ಉತ್ತೇಜಿಸಲು ಹಣ ಹಿಂಪಡೆಯುವ ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದೆ.
ವಂಚಕರು ಮಾಡುತ್ತಿದ್ದ ಮೋಸದಿಂದ ಪ್ರಾಮಾಣಿಕವಾಗಿ ಹಣ ವಿತ್ ಡ್ರಾ ಮಡುವವರಿಗೂ ತೊಂದರೆಯಾಗುತ್ತಿತ್ತು ಎಂಬುದು ಎಸ್‌ಬಿಐ ಸಮರ್ಥನೆಯಾಗಿದೆ. ಅಲ್ಲದೆ ಮಿತಿ ಕಡಿತದಿಂದ ನಕಲಿ ಎಟಿಎಂಗಳ ಹಾವಳಿ ತಪ್ಪಲಿದೆ ಎಂಬುದು ಎಸ್‌ಬಿಐ ಆಶಯವಾಗಿದೆ. ಅಲ್ಲದೇ ಗ್ರಾಹಕರು ಉನ್ನತ ಶ್ರೇಣಿಯ ಎಸ್‌ಬಿಐ ಕಾರ್ಡ್‌ಗಳನ್ನು ಹೊಂದಲು ಇದು ಸದಾವಕಾಶವನ್ನು ಒದಗಿಸಿದೆ ಎಂಬುದು ಬ್ಯಾಂಕ್ ನೀಡಿರುವ ಸಮರ್ಥನೆಗಳಲ್ಲಿ ಒಂದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.