
ನವದೆಹಲಿ(ಅ.12): ರಫೆಲ್ ಒಪ್ಪಂದದಲ್ಲಿ ರಿಲಯನ್ಸ್ ಕೇವಲ ಶೇ. 10 ರಷ್ಟು ಮಾತ್ರ ಬಾಧ್ಯತೆ ಹೊಂದಿದೆ ಎಂದು ಡಸಾಲ್ಟ್ ಕಂಪನಿ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಡಸಾಲ್ಟ್ ಕಂಪನಿ ಸಿಇಒ ಎರಿಕ್ ಟ್ರಾಪ್ಪಿಯರ್, ಶೇ.10 ರಷ್ಟು ಬಾಧ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ನಾವು ರಿಲಯನ್ಸ್ ಜೊತೆ ಸೇರಿ ನಾಗ್ಪುರದಲ್ಲಿ ಜಂಟಿ ಕಾರ್ಖಾನೆ ಸ್ಥಾಪಿಸುತ್ತಿದ್ದೇವೆ. ಇದೇ ರೀತಿ, ನಾವು ಭಾರತದ ಸುಮಾರು 100 ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಈ ಪೈಕಿ, ಈಗಾಗಲೇ 30 ಕಂಪನಿಗಳ ಜತೆ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.
'ಆಫ್‌ಸೆಟ್ಸ್ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದ ಕಾನೂನಿನಲ್ಲಿ ಇರುವ ಷರತ್ತು. ಆದರೆ, ಭಾರತದ ಕಾನೂನಿನ ಪ್ರಕಾರ ಪಾಲುದಾರರನ್ನು ಆಯ್ಕೆ ಮಾಡುವ ಅಧಿಕಾರ ನಮಗೇ ಇರುತ್ತದೆ' ಎಂದು ಎರಿಕ್ ತಿಳಿಸಿದ್ದಾರೆ. ಸದ್ಯ ರಫೆಲ್ ಡೀಲ್ ವಿಚಾರವಾಗಿ ರಾಜಕೀಯ ವಿವಾದ ನಡೆಯುತ್ತಿದ್ದರೂ, ಭವಿಷ್ಯದ ಬಗ್ಗೆ ನಾವು ಆಶಾಭಾವನೆ ಹೊಂದಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಕಂಪನಿಗೆ ಯುದ್ಧ ವಿಮಾನ ತಯಾರಿಕೆಯ ಹೊಣೆ ವಹಿಸಲಾಗಿತ್ತು.
ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗಾಗಿ ಭಾರತದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಪಾಲಿದಾರ ಕಂಪನಿಯನ್ನಾಗಿ ಡಸಾಲ್ಟ್ ಆರಿಸಿಕೊಂಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.