
ಮುಂಬೈ (ಆ.28): ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳೊಂದಿಗೆ ಹೊಸ ಉಪಕಂಪನಿಯನ್ನು ಘೋಷಿಸಿದ್ದಾರೆ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ. 'ರಿಲಯನ್ಸ್ ಇಂಟೆಲಿಜೆನ್ಸ್' ಎಂಬುದು ರಿಲಯನ್ಸ್‌ನ ಹೊಸ ಉಪಕಂಪನಿಯ ಹೆಸರು.
ಭಾರತದ AI ಕನಸುಗಳಿಗೆ ವೇಗ ನೀಡುವುದು ರಿಲಯನ್ಸ್ ವಾರ್ಷಿಕ ಮಹಾಸಭೆಯಲ್ಲಿ ಮುಖೇಶ್ ಅಂಬಾನಿ ಘೋಷಣೆಯ ಉದ್ದೇಶ. ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ ಎಂದು ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ರಿಲಯನ್ಸ್ AGM 2025 ರಲ್ಲಿ ಮುಖೇಶ್ ಅಂಬಾನಿ ಬಣ್ಣಿಸಿದರು. ರಿಲಯನ್ಸ್ ಇಂಟೆಲಿಜೆನ್ಸ್, AI ಕ್ಷೇತ್ರದ ಪ್ರಮುಖರಾದ ಗೂಗಲ್ ಮತ್ತು ಮೆಟಾ ಜೊತೆಗೆ ಕಾರ್ಯತಂತ್ರದ ಪಾಲುದಾರಿಕೆ ಹೊಂದಲಿದೆ. AI ಕ್ಷೇತ್ರದಲ್ಲಿ ಹೊಸ ಉಪಕಂಪನಿಯ ನಾಲ್ಕು ಗುರಿಗಳನ್ನು ಮುಖೇಶ್ ಅಂಬಾನಿ ಸಭೆಯಲ್ಲಿ ಹಂಚಿಕೊಂಡರು.
1. ಮುಂದಿನ ಪೀಳಿಗೆಯ AI ಮೂಲಸೌಕರ್ಯ
ಭಾರತದ ಮುಂದಿನ ಪೀಳಿಗೆಯ AI ಮೂಲಸೌಕರ್ಯವನ್ನು ಸೃಷ್ಟಿಸುವುದು ಮೊದಲ ಗುರಿ. ಇದರ ಭಾಗವಾಗಿ ಡೇಟಾ ಕೇಂದ್ರಗಳನ್ನು ರಿಲಯನ್ಸ್ ಇಂಟೆಲಿಜೆನ್ಸ್ ಅಭಿವೃದ್ಧಿಪಡಿಸುತ್ತದೆ. ಈ ಕೆಲಸವನ್ನು ರಿಲಯನ್ಸ್ ಈಗಾಗಲೇ ಆರಂಭಿಸಿದೆ.
2. ಜಾಗತಿಕ ಸಹಯೋಗ
AI ಕ್ಷೇತ್ರದಲ್ಲಿ ಜಾಗತಿಕ ಸಹಯೋಗವು ರಿಲಯನ್ಸ್ ಇಂಟೆಲಿಜೆನ್ಸ್‌ನ ಎರಡನೇ ಗುರಿ. ಪ್ರಪಂಚದ ಪ್ರಮುಖ ತಂತ್ರಜ್ಞಾನ ಕಂಪನಿಗಳು ಮತ್ತು ಓಪನ್-ಸೋರ್ಸ್ ಉಪಕ್ರಮಗಳನ್ನು ರಿಲಯನ್ಸ್ ಒಂದ ಛತ್ರಿಯಡಿಯಲ್ಲಿ ತರುತ್ತದೆ. ಉತ್ತಮ ಕಾರ್ಯಕ್ಷಮತೆಯ AI ವ್ಯವಸ್ಥೆ ಮತ್ತು ಪೂರೈಕೆ ಸರಪಳಿಯನ್ನು ಭಾರತದಲ್ಲಿ ಖಚಿತಪಡಿಸುವುದು ರಿಲಯನ್ಸ್‌ನ ಗುರಿ.
3. ಭಾರತಕ್ಕಾಗಿ AI ಸೇವೆ
ಭಾರತದ ಗ್ರಾಹಕರು, ಸಣ್ಣ ಕಂಪನಿಗಳು ಮತ್ತು ಉದ್ಯಮಗಳಿಗೆ ರಿಲಯನ್ಸ್ ಇಂಟೆಲಿಜೆನ್ಸ್ ಕಡಿಮೆ ವೆಚ್ಚದ AI ಸೇವೆಗಳನ್ನು ಒದಗಿಸುತ್ತದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಇವು ಉಪಯುಕ್ತವಾಗುತ್ತವೆ ಎಂಬುದು ಕಂಪನಿಯ ನಿರೀಕ್ಷೆ.
4. ಪ್ರತಿಭಾ ಪೋಷಣೆ
ಪ್ರಪಂಚದಾದ್ಯಂತದ AI ಸಂಶೋಧಕರು, ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ತಯಾರಕರನ್ನು ಒಂದಡೆ ತರುವುದು ರಿಲಯನ್ಸ್ ಇಂಟೆಲಿಜೆನ್ಸ್‌ನ ಗುರಿ. ಭಾರತ ಮತ್ತು ಪ್ರಪಂಚಕ್ಕಾಗಿ ನವೀನ ಆಲೋಚನೆಗಳು ಮತ್ತು ಅನ್ವಯಿಕೆಗಳನ್ನು ರಿಲಯನ್ಸ್ ಇಂಟೆಲಿಜೆನ್ಸ್ ಸೃಷ್ಟಿಸುತ್ತದೆ ಎಂದು ಮುಖೇಶ್ ಅಂಬಾನಿ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
ಜಿಯೋ ಐಪಿಒ ಬಿಡುಗಡೆ:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ 2025 ರ ವಾರ್ಷಿಕ ಮಹಾಸಭೆಯಲ್ಲಿ (AGM) ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಕಂಪನಿಯ ಭವಿಷ್ಯದ ಯೋಜನೆಗಳು ಮತ್ತು ವಿವಿಧ ವ್ಯಾಪಾರ ಕ್ಷೇತ್ರಗಳಲ್ಲಿನ ಹೊಸ ಉಪಕ್ರಮಗಳ ಬಗ್ಗೆ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಬಹುನಿರೀಕ್ಷಿತ 'ಜಿಯೋ ಐಪಿಒ' ಕುರಿತು ಮಾಡಿದ ಪ್ರಕಟಣೆ. 2026ರ ಮೊದಲಾರ್ಧದಲ್ಲಿ ಜಿಯೋದ ಐಪಿಒ ಬಿಡುಗಡೆ ಮಾಡಲು ಕಂಪನಿ ಯೋಜಿಸುತ್ತಿದ್ದು, ಇದು ಹ್ಯುಂಡೈ ಇಂಡಿಯಾ ಐಪಿಒ ದಾಖಲೆಯನ್ನು ಮೀರಿಸಿ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗುವ ನಿರೀಕ್ಷೆಯಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ಹೊಸ ಇಂಧನ ಮತ್ತು ಭವಿಷ್ಯದ ದೃಷ್ಟಿಕೋನ: ಹೊಸ ಇಂಧನ ಕ್ಷೇತ್ರದಲ್ಲಿ ರಿಲಯನ್ಸ್ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಮುಂದಿನ 5-7 ವರ್ಷಗಳಲ್ಲಿ ಹೊಸ ಇಂಧನ ವ್ಯವಹಾರವು ಕಂಪನಿಯ ಆಯಿಲ್-ಟು-ಕೆಮಿಕಲ್ಸ್ ವ್ಯವಹಾರದಷ್ಟೇ ದೊಡ್ಡದಾಗಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. 2026ರ ಅಂತ್ಯದ ವೇಳೆಗೆ 'ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿ' ಕಾರ್ಯಾರಂಭ ಮಾಡಲಿದೆ ಎಂದು ಅವರು ಘೋಷಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.