
ನವದೆಹಲಿ(ಮಾ.30): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 137 ದಿನಗಳ ಕಾಲ ಪರಿಷ್ಕರಣೆಯಾಗದಿರುವುದನ್ನು (Price Hike) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಇಂಧನ ಪೂರೈಕೆ ಸರಪಳಿಯಲ್ಲಿನ ಅಡಚಣೆ, ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಕಳೆದ ವಾರದಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ತೈಲ ಬೆಲೆಯಲ್ಲಿ ಏರಿಕೆ ಮತ್ತು ಅಡಚಣೆ ಒಂದೆರಡು ವಾರಗಳ ಹಿಂದಿನಿಂದ ನಡೆಯುತ್ತಿದೆ. ಅದಕ್ಕೆ ಪ್ರತಿಯಾಗಿ ಬೆಲೆ ಏರಿಕೆಯಾಗುತ್ತಿದೆ. ಆದರೆ ಚುನಾವಣೆಗಾಗಿ ಇಂಧನ ಬೆಲೆ ಪರಿಷ್ಕರಣೆ ನಿಲ್ಲಿಸಲಾಗಿತ್ತು ಎಂಬುದು ಸುಳ್ಳು ಎಂದು ಹೇಳಿದರು.
ರಷ್ಯಾ ಆಕ್ರಮಣಕ್ಕೂ ಮೊದಲೇ ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು. ಈ ಸಮಯದಲ್ಲಿ ಭಾರತ ಒಂದು ಬ್ಯಾರಲ್‌ಗೆ 100.71 ಡಾಲರ್ ನೀಡಿ ಖರೀದಿಸುತ್ತಿತ್ತು. ಆದರೆ ಕಳೆದ ನವೆಂಬರ್‌ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 82 ಡಾಲರ್ ಇತ್ತು. ಪಂಚರಾಜ್ಯ ಚುನಾವಣೆಗಳು ಘೊಷಣೆಯಾದ ನಂತರ ಇಂಧನ ಬೆಲೆ ಪರಿಷ್ಕರಣೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿಲ್ಲಿಸಿದ್ದವು.
ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 4.80 ರು.ಏರಿಕೆ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡು ಬರುತ್ತಿದ್ದು, ಮಂಗಳವಾರ ಮತ್ತೆ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 80 ಪೈಸೆ ಹಾಗೂ ಡೀಸೆಲ್ ಬೆಲೆ 70 ಪೈಸೆಯಷ್ಟುಏರಿಕೆಯಾಗಿದೆ. ಇದರಿಂದಾಗಿ ಕಳೆದ ಒಂದೇ ವಾರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ 4.80 ರು. ತುಟ್ಟಿಯಾದಂತಾಗಿದೆ. ಈ ಮೂಲಕ ದೆಹಲಿ ಹಾಗೂ ಹಲವಾರು ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 100ರ ಗಡಿಯನ್ನು ದಾಟಿದೆ.
ಮಾಚ್‌ರ್ 22 ರಿಂದ ಈವರೆಗೆ ಒಟ್ಟು 7 ಬಾರಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 100.21 ರು.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 91.47 ರು. ಆಗಿದೆ. ಅದೇ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 115.04 ರು. ಹಾಗೂ ಡೀಸೆಲ್ ಬೆಲೆ 99.25 ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.62 ರು ಹಾಗೂ 89.70ಕ್ಕೆ ಏರಿಕೆಯಾಗಿದೆ.
ಆಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾದರೂ ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಿಂದಲೂ ಇಂಧನದ ಬೆಲೆಯು ಸ್ಥಿರವಾಗಿತ್ತು. ಈಗ ಉತ್ಪಾದನಾ ಹಾಗೂ ಮಾರಾಟದ ವೆಚ್ಚವನ್ನು ಸರಿದೂಗಿಸಲು ಇಂಧನದ ಬೆಲೆ ಪರಿಷ್ಕರಿಸಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.