ಶೀಘ್ರ ಆರ್‌ಬಿಐನ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಆರ್‌ಬಿಐ ಮಾಹಿತಿ ನೀಡಿದೆ. ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗುತ್ತಿದ್ದು, ನಿರ್ದಿಷ್ಟ ಉದ್ದೇಶದ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಮುಂಬೈ: ಡಿಜಿಟಲ್ ಕರೆನ್ಸಿ (Digital Currency) ಬಗ್ಗೆ ಭಾರಿ ಚರ್ಚೆಯ ನಡುವೆಯೇ ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (e - Rupee) (ಡಿಜಿಟಲ್ ಕರೆನ್ಸಿ) ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಘೋಷಣೆ ಮಾಡಿದೆ. ಕಳೆದ ಬಜೆಟ್‌ನಲ್ಲಿ (Budget) ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ (Ministry of Finance) ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು.
‘ಮೊದಲು ಪ್ರಾಯೋಗಿಕವಾಗಿ ಇ-ರುಪಿ ಜಾರಿಗೆ ಬರಲಿದೆ. ಇದರ ನಿರ್ದಿಷ್ಟಸ್ವರೂಪ ಹಾಗೂ ಲಾಭಗಳನ್ನು ಕಾಲಕಾಲಕ್ಕೆ ತಿಳಿಸಿ ಮಾಹಿತಿ ನೀಡಲಾಗುವುದು. ಈಗ ಇರುವ ಕರೆನ್ಸಿಗಳಿಗೆ ಹೆಚ್ಚುವರಿಯಾಗಿ ಇ-ರುಪಿ ಸೇರಿಕೊಳ್ಳಲಿದೆ. ಬ್ಯಾಂಕ್ ನೋಟುಗಳಿಗೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಡಿಜಿಟಲ್ ಮಾದರಿ ಆಗಿರುವ ಕಾರಣ ವ್ಯವಹಾರ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ನಡೆಯಲಿದೆ. ಅಗ್ಗವೂ ಆಗಿರಲಿದೆ. ಇತರ ಡಿಜಿಟಲ್ ಕರೆನ್ಸಿಗಳಂತೆ ವ್ಯಾವಹಾರಿಕ ಲಾಭವನ್ನೂ ತಂದುಕೊಡುತ್ತದೆ’ ಎಂದು ಆರ್‌ಬಿಐನ ಕೇಂದ್ರೀಯ ಡಿಜಿಟಲ್ ಕರೆನ್ಸಿ ಬ್ಯಾಂಕ್ (Central Bank Digital Currency) (ಸಿಬಿಡಿಸಿ) ತನ್ನ ಪರಿಕಲ್ಪನಾ ಟಿಪ್ಪಣಿಯಲ್ಲಿ ತಿಳಿಸಿದೆ.
ಇದನ್ನು ಓದಿ: Digital Currency: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್ ಕರೆನ್ಸಿ
ಎರಡು ರೀತಿ ಇ-ರುಪಿ
ಆರ್‌ಬಿಐ ಮಾಹಿತಿ ಅನ್ವಯ ಎರಡು ರೀತಿಯ ಇ-ರುಪಿ ಬಿಡುಗಡೆಯಾಗಲಿದೆ. ಒಂದು ರೀಟೇಲ್ ಮತ್ತೊಂದು ಹೋಲ್‌ಸೇಲ್. ರೀಟೇಲ್ ಇ-ರುಪಿ ಎಲ್ಲಾ ಜನಸಾಮಾನ್ಯರ ಬಳಕೆಗೆ ಇರಲಿದ್ದರೆ, ಹೋಲ್‌ಸೇಲ್ ಇ-ರುಪಿ ಆಯ್ದ ಹಣಕಾಸು ಸಂಸ್ಥೆಗಳಿಗೆ ಮಾತ್ರ ಲಭ್ಯವಿರಲಿದೆ.
ಪರಿಣಾಮಗಳ ಅಧ್ಯಯನ
ಪ್ರಾಯೋಗಿಕವಾಗಿ ಇ-ರುಪಿ ಜಾರಿಗೆ ತಂದಾಗ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ, ಆರ್ಥಿಕತೆ ಮೇಲೆ, ವಿತ್ತ ನೀತಿ ಮೇಲೆ, ಆರ್ಥಿಕ ಖಾಸಗಿತನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಅಧ್ಯಯನ ನಡೆಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: Union Budget 2022: ಡಿಜಿಟಲ್ ರುಪಿಯನ್ನು ನಗದಿಗೆ ಬದಲಾಯಿಸಿಕೊಳ್ಳಬಹುದು
ಏನಿದು ಇ-ರುಪಿ?
ಸದ್ಯ ಚಲಾವಣೆಯಲ್ಲಿರುವ ಭೌತಿಕ ನೋಟುಗಳ ಡಿಜಿಟಲ್ ಆವೃತ್ತಿಯಂತೆ ಡಿಜಿಟಲ್ ರುಪಿ (ಇ-ರುಪಿ) ಇರಲಿದೆ. ಇದನ್ನು ಕೇಂದ್ರೀಯ ಡಿಜಿಟಲ್ ಕರೆನ್ಸಿ ಬ್ಯಾಂಕ್ (ಸಿಬಿಡಿಸಿ) ನಿಯಂತ್ರಿಸಲಿದೆ. ಡಿಜಿಟಲ್ ಕರೆನ್ಸಿಯನ್ನು ನಗದು ಕೊಟ್ಟು ವಿನಿಯಮ ಮಾಡಿಕೊಳ್ಳಬಹುದು. ಇದು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯೇ ಆಗಿದ್ದರೂ, ಜಾಗತಿಕವಾಗಿ ಜನಪ್ರಿಯವಾಗಿರುವ ಖಾಸಗಿ ವರ್ಚುವಲ್ ಅಥವಾ ಕ್ರಿಪ್ಟೋಕರೆನ್ಸಿಗಳ ಜತೆ ಹೋಲಿಸಲು ಆಗದು. ಏಕೆಂದರೆ ಖಾಸಗಿ ಡಿಜಿಟಲ್ ಕರೆನ್ಸಿ ಹಣ ಎನಿಸಿಕೊಳ್ಳುವುದಿಲ್ಲ.