
ಮುಂಬೈ(ಜ.27): ಬಿಟ್‌ಕಾಯಿನ್ ರೀತಿಯ ಡಿಜಿಟಲ್ ಕರೆನ್ಸಿಗಳು ಭಾರಿ ಜನಪ್ರಿಯತೆ ಗಳಿಸಿರುವಾಗಲೇ, ರುಪಾಯಿಯ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯಾಸಾಧ್ಯತೆ ಕುರಿತು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಪರಿಶೀಲನೆ ಆರಂಭಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕರೆನ್ಸಿಗಳು ಜನಪ್ರಿಯವಾಗಿವೆ. ಆದರೆ ಭಾರತದಲ್ಲಿ ನಿಯಂತ್ರಕ ಸಂಸ್ಥೆಗಳು ಹಾಗೂ ಸರ್ಕಾರಗಳು ಈ ಕರೆನ್ಸಿ ಮತ್ತು ಅವುಗಳು ಹೊಂದಿರುವ ಅಪಾಯದ ಬಗ್ಗೆ ಕಳವಳಗಳನ್ನು ಹೊಂದಿವೆ. ಆದಾಗ್ಯೂ ದೇಶದಲ್ಲಿ ರುಪಾಯಿಯ ಡಿಜಿಟಲ್ ಆವೃತ್ತಿಯ ಅಗತ್ಯವಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯ ಇದೆ ಎಂದಾದರೆ ಅದನ್ನು ಯಾವ ರೀತಿ ಜಾರಿಗೆ ತರಬೇಕು ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಭಾರತದಲ್ಲಿನ ಪಾವತಿ ವ್ಯವಸ್ಥೆ ಕುರಿತ ಹೊತ್ತಿಗೆಯಲ್ಲಿ ರಿಸವ್‌ರ್ ಬ್ಯಾಂಕ್ ಪ್ರಸ್ತಾಪಿಸಿದೆ.
ಬಿಟ್‌ಕಾಯಿನ್ ಸೇರಿದಂತೆ ವಿವಿಧ ಡಿಜಿಟಲ್ ಕರೆನ್ಸಿಗಳು ವಿಶ್ವದಾದ್ಯಂತ ಚಾಲ್ತಿಯಲ್ಲಿವೆ. ಆದರೆ ಅವುಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಡಿಜಿಟಲ್ ಕರೆನ್ಸಿಗಳಿಗೆ ಇರುವ ಬೇಡಿಕೆ ಮನಗಂಡು ಹಲವು ದೇಶಗಳು ಆ ರೀತಿಯ ಹಣದ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಪರಿಶೀಲನೆ ನಡೆಸುತ್ತಿವೆ. ಇದೀಗ ಆ ಸಾಲಿಗೆ ಭಾರತ ಕೂಡ ಸೇರ್ಪಡೆಯಾದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರೀಯ ಬ್ಯಾಂಕುಗಳೇ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದರೆ ಅವುಗಳಿಗೆ ಮಾನ್ಯತೆ ಇರುತ್ತದೆ. ಈ ಡಿಜಿಟಲ್ ಕರೆನ್ಸಿ ವಿದ್ಯುನ್ಮಾನ ರೂಪದಲ್ಲಿ ಇರುತ್ತವೆ. ಅದನ್ನು ಯಾವಾಗ ಬೇಕೋ ಆಗ ನಗದೀಕರಣಗೊಳಿಸಿಕೊಳ್ಳಬಹುದು. ಅಥವಾ ನಗದಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಕಿರುಹೊತ್ತಿಗೆಯಲ್ಲಿ ಆರ್‌ಬಿಐ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.