
ಮುಂಬೈ(ಆ.09): ಬ್ಯಾಂಕ್‌ಗಳಲ್ಲಿ ಚೆಕ್ ಕ್ಲಿಯರೆನ್ಸ್ ಅವಧಿಯನ್ನು ಹಾಲಿ ಇರುವ 2-3 ದಿನಗಳಿಂದ, ಕೆಲವೇ ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿದೆ. ಈ ನೀತಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ.
ಗುರುವಾರ ಇಲ್ಲಿ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ‘ಹೊಸ ವ್ಯವಸ್ಥೆಯಡಿ ಕ್ಲಿಯರಿಂಗ್‌ಗೆ ಅಗತ್ಯವಿರುವ ಸಮಯವನ್ನು ಪ್ರಸ್ತುತ 2-3 ದಿನಗಳ ಅವಧಿಯಿಂದ ಕೆಲವೇ ಗಂಟೆಗಳವರೆಗೆ ಕಡಿತಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಬದಲಾದ ಜನರ ಹಣಕಾಸಿನ ನಡೆ, ಸಂಕಷ್ಟದಲ್ಲಿ ಸಿಲುಕಲಿವೆಯಾ ಬ್ಯಾಂಕ್‌ಗಳು? RBI ಗವರ್ನರ್ ಆತಂಕ
ಪ್ರಸಕ್ತ ಬ್ಯಾಂಕ್‌ಗಳಲ್ಲಿ ಗ್ರಾಹಕರು ಸಲ್ಲಿಸಿದ ಚೆಕ್ ಕ್ಲಿಯರೆನ್ಸ್‌ಗೆ ಸಿಟಿಎಸ್ (ಚೆಕ್ ಟ್ರಂಕೇಷನ್ ಸಿಸ್ಟಮ್) ಬಳಸಲಾಗುತ್ತಿದೆ. ಇದರಿಂದ ಚೆಕ್‌ನಲ್ಲಿದ್ದ ನಮೂದಿಸಿದ ಹಣ ಗ್ರಾಹಕರ ಖಾತೆ ಸೇರಲು 2- 3 ದಿನ ಬೇಕಾಗುತ್ತಿದೆ. ಆದರೆ ಹೊಸ ವ್ಯವಸ್ಥೆಯಡಿ ಚೆಕ್‌ನಲ್ಲಿ ಎಲ್ಲಾ ಮಾಹಿತಿಯನ್ನು ಕಚೇರಿಯ ಅವಧಿಯಲ್ಲೇ ಸ್ಕ್ಯಾನ್ ಮಾಡಿ, ಪಾವತಿ ಮಾಡಬೇಕಿರುವ ಬ್ಯಾಂಕ್‌ಗೆ ಆನ್‌ಲೈನ್ ಮೂಲಕ ರವಾನಿಸಲಾಗುತ್ತದೆ. ಅತ್ತ ಕಡೆಯಿಂದ ಮಾಹಿತಿ ಖಚಿತವಾಗುತ್ತಲೇ ಗ್ರಾಹಕನ ಬ್ಯಾಂಕ್ ಖಾತೆಗೆ ತಕ್ಷಣವೇ ಹಣ ಜಮೆ ಆಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಕೆಲವೇ ಗಂಟೆಗಳ ಒಳಗೆ ಸಾಧ್ಯವಾಗುತ್ತದೆ.
ಸತತ 9ನೇ ಬಾರಿ ಬಡ್ಡಿ ದರ ಬದಲಿಲ್ಲ
ಮುಂಬೈ: ಸತತ 9ನೇ ಸಲ ರೆಪೋ ದರವನ್ನು ಶೇ.6.5ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆಹಾರ ಹಣದುಬ್ಬರ ಹೆಚ್ಚಿರುವ ಕಾರಣ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬಡ್ಡಿದರದಲ್ಲಿ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.