
ನವದೆಹಲಿ(ಅ.6): ಆರ್‌ಬಿಐ ತನ್ನ ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿರುವುದನ್ನು ಆರ್ಥಿಕ ತಜ್ಞರು ಸ್ವಾಗತಿಸಿದ್ದು, ಇದು ರಿಯಲ್ ಎಸ್ಟೇಟ್ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯವಿದ್ದ ಕ್ರಮ ಎಂದು ಬಣ್ಣಿಸಿದ್ದಾರೆ.
ಆರ್‌ಬಿಐ ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳನ್ನು ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿರುವುದನ್ನು ಘೋಷಿಸಿದೆ. ಆರ್‌ಬಿಐ ನ ಈ ಕ್ರಮದಿಂದಾಗಿ ಹೆಚ್ಚು ಲಾಭ ಪಡೆಯುವವರು ಗೃಹ ಖರೀದಿದಾರರು.
ಚೇತರಿಕೆಯತ್ತ ರಿಯಲ್ ಎಸ್ಟೇಟ್:
ಕಳೆದ ಆರು ತಿಂಗಳುಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರ ಚೇತರಿಕೆಯ ಲಕ್ಷಣಗಳನ್ನು ತೋರುತ್ತಿದ್ದು, ಈ ವೇಳೆ ಆರ್‌ಬಿಐ ತನ್ನ ವಿತ್ತೀಯ ನೀತಿ ಪ್ರಕಟಿಸಿ ರೆಪೋ ದರವನ್ನು ಯಥಾಸ್ಥಿತಿ ಮುಂದುವರೆಸುವುದಾಗಿ ಘೋಷಿಸಿರುವುದು, ಹೊಸದಾಗಿ ಗೃಹ ಖರೀದಿದಾರರಿಗೆ ಸಂತಸ ಮೂಡಿಸಿದ್ದು ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತಷ್ಟು ಚೇತರಿಕೆ ಕಾಣಲು ಸಹಕಾರಿಯಾಗಿದೆ.
ಬಡ್ಡಿದರ ಕೂಡ ಅಫೊರ್ಡೆಬಲ್:
ರೆಪೋ ದರ ಬದಲಾವಣೆಯಾಗದೇ ಇರುವುದು ಸ್ಥಳೀಯ ಬ್ಯಾಂಕ್ ಗಳಲ್ಲಿ ನೀಡುವ ಗೃಹ ಖರೀದಿ ಸಾಲದ ಮೇಲಿನ ಬಡ್ಡಿ ದರದ ಮೇಲೂ ಪರಿಣಾಮ ಬೀರಲಿದೆ. ದೇಶದಲ್ಲಿ ಈಗ ಗೃಹ, ನಿವೇಶನ ಬೆಲೆ ಗಣನೀಯವಾಗಿ ಕಡಿಮೆ ಇದ್ದು, ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಏರಿಕೆ ಮಾಡದೇ ಇರುವುದು ಮಾರುಕಟ್ಟೆಯಲ್ಲಿ ಜನರ ಕೊಳ್ಳುವ ಭಾವನೆಗಳ ಮೇಲೆಯೂ ಪರಿಣಾಮ ಬೀರಲಿದೆ.
ರೂಪಾಯಿ ಮೌಲ್ಯ ಕುಸಿತದ ಲಾಭ:
ಈ ನಡುವೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಭಾರತದಲ್ಲಿ ಗೃಹ, ನಿವೇಷನ ಕೊಳ್ಳುವುದಕ್ಕೆ ಎನ್‌ಆರ್‌ಐಗಳನ್ನು ಆಕರ್ಷಿಸುವ ಸಾಧ್ಯತೆ ಇದೆ ಎಂದ್ಲು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ರೆಪೋ ದರ ಏರಿಕೆಯಾಗಿದ್ದಲ್ಲಿ ಬ್ಯಾಂಕ್ ಗಳಲ್ಲಿ ನೀಡುವ ಸಾಲದ ಮೇಲಿನ ಬಡ್ಡಿ ದರಗಳೂ ಏರಿಕೆಯಾಗುತ್ತಿದ್ದವು. ಆಗ ಗೃಹ ಖರೀದಿದಾರರ ಭಾವನೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದ್ದವು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.