ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ

By Suvarna News  |  First Published Apr 24, 2024, 6:10 PM IST

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈಗ ಮತ್ತೊಂದು ಬ್ಯಾಂಕ್ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಕೋಟಕ್ ಮಹೀಂದ್ರ ಬ್ಯಾಂಕಿಗೆ ಕೂಡ ಆರ್ ಬಿಐ ನಿರ್ಬಂಧ ವಿಧಿಸಿದ್ದು, ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಸೂಚಿಸಿದೆ. 
 


ನವದೆಹಲಿ (ಏ.24): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿರುವ ಆರ್ ಬಿಐ ಈಗ ಇನ್ನೊಂದು ಜನಪ್ರಿಯ ಬ್ಯಾಂಕ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಆನ್ ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಾನೆಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆ ಸ್ಥಗಿತಗೊಳಿಸುವಂತೆ ಆರ್ ಬಿಐ ಕೋಟಕ್ ಮಹೀಂದ್ರ ಬ್ಯಾಂಕಿಗೆ ಬುಧವಾರ (ಏ.24) ನಿರ್ದೇಶನ ನೀಡಿದೆ. ಅಲ್ಲದೆ, ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡದಂತೆಯೂ ನಿರ್ಬಂಧ ವಿಧಿಸಿದೆ. ಆದರೆ, ಈಗಾಗಲೇ ಇರುವ ಗ್ರಾಹಕರಿಗೆ ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಸೇವೆ ಮುಂದುವರಿಸುವಂತೆ ನಿರ್ದೇಶನ ನೀಡಿದೆ.

'ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 35A ಅಡಿಯಲ್ಲಿ ತನ್ನ ಅಧಿಕಾರ ಬಳಸಿಕೊಂಡು ಮೊಬೈಲ್ ಹಾಗೂ ಆನ್ ಲೈನ್ ಬ್ಯಾಂಕಿಂಗ್ ಚಾನೆಲ್ ಮುಖಾಂತರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆ ಮಾಡದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳುವಂತೆ ಕೋಟಕ್ ಮಹೀಂದ್ರ ಬ್ಯಾಂಕಿಗೆ ನಿರ್ದೇಶನ ನೀಡಿರೋದಾಗಿ' ಆರ್ ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

Tap to resize

Latest Videos

ಸೈಬರ್ ವಂಚನೆಗೆ ಬ್ರೇಕ್ ಹಾಕಲು ಎಸ್ ಬಿಐ ಕಾರ್ಡ್ ಜೊತೆಗೆ ಕೈಜೋಡಿಸಿದ ಗೃಹ ಸಚಿವಾಲಯ;OTP ರವಾನೆಯಲ್ಲಿ ಹೊಸ ವಿಧಾನ

ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡದಂತೆ ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿದೆ. ಆದರೂ ಈಗಿರುವ ಗ್ರಾಹಕರು ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಸೇವೆ ಮುಂದುವರಿಸುವಂತೆ ತಿಳಿಸಿದೆ. 

2022 ಹಾಗೂ 2023ರಲ್ಲಿ ಕೇಂದ್ರ ಬ್ಯಾಂಕ್ ನಡೆಸಿದ ಐಟಿ ಪರಿಶೀಲನೆ ಸಂದರ್ಭದಲ್ಲಿ ಬ್ಯಾಂಕ್ ವಿರುದ್ಧ ಒಂದಿಷ್ಟು ಕಳವಳಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. 

'ಐಟಿ ವಿವರಣ ಪಟ್ಟಿ ನಿರ್ವಹಣೆ, ಪ್ಯಾಚ್ ಹಾಗೂ ಚೇಂಜ್ ನಿರ್ವಹಣೆ, ಬಳಕೆದಾರರ ಸಂಪರ್ಕ ನಿರ್ವಹಣೆ, ವ್ಯಾಪಾರಿಗಳ ಅಪಾಯ ನಿರ್ವಹಣೆ, ಡೇಟಾ ಸುರಕ್ಷತೆ ಹಾಗೂ ಡೇಟಾ ಸೋರಿಕೆ ತಡೆ ಯೋಜನೆ, ಉದ್ಯಮ ಮುಂದುವರಿಕೆ ಹಾಗೂ ವಿಪತ್ತು ಚೇತರಿಕೆ ಇತ್ಯಾದಿ ವಲಯಗಳಲ್ಲಿ ಗಂಭೀರ ನ್ಯೂನತೆಗಳು ಹಾಗೂ ಅನುಸರಣೆ ಕೊರತೆ ಕಂಡುಬಂದಿದೆ. ಸತತ ಎರಡು ವರ್ಷಗಳ ತನಕ ಬ್ಯಾಂಕ್ ತನ್ನ ಐಟಿ ಅಪಾಯ ಹಾಗೂ ಮಾಹಿತಿ ಸುರಕ್ಷತೆ ನಿರ್ವಹಣೆಯಲ್ಲಿ ಕೊರತೆ ಕಂಡುಬಂದಿದೆ. ಇದು ನಿಯಂತ್ರಣ ನಿಯಮಗಳಡಿಯಲ್ಲಿನ ಅಗತ್ಯಕ್ಕೆ ವ್ಯತಿರಿಕ್ತವಾಗಿದೆ' ಎಂದು ಆರ್ ಬಿಐ ತಿಳಿಸಿದೆ. 

2022 ಹಾಗೂ 2023ನೇ ಸಾಲಿಗೆ ಆರ್ ಬಿಐನಿಂದ ತಿದ್ದುಪಡಿ ಕ್ರಮದ ಯೋಜನೆಗಳನ್ನು ಸ್ವೀಕರಿಸಿದ ಬಳಿಕವೂ ಕೋಟಕ್ ಮಹೀಂದ್ರ ಬ್ಯಾಂಕ್ ಅನುಸರಣೆ ಮಾಡಿಲ್ಲ ಎಂದು ಮೌಲ್ಯಮಾಪನ ತಿಳಿಸಿದೆ. ಇನ್ನು ನಿಯಮಗಳ ಪಾಲನೆಗೆ ಸಂಬಂಧಿಸಿ ಬ್ಯಾಂಕ್ ನೀಡಿರುವ ಕ್ರಮಗಳು ಅಸಮರ್ಪಕ ಅಥವಾ ಸುಸ್ಥಿರವಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ. 

ಬ್ಯಾಂಕ್ ಎಫ್ ಡಿ ಬಡ್ಡಿದರದಲ್ಲಿ ಬದಲಾವಣೆ;ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳಲ್ಲಿ ಎಷ್ಟಿದೆ?

ಕೆಲವು ದಿನಗಳ ಹಿಂದೆ ಆರ್ ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ನಿರ್ಬಂಧ ವಿಧಿಸಿತ್ತು. ಈ ಬ್ಯಾಂಕಿಗೆ ಕೂಡ ಯಾವುದೇ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಹಾಗೆಯೇ ಹೊಸ ಠೇವಣಿ ಸ್ವೀಕರಿಸದಂತೆ ಆರ್ ಬಿಐ ನಿರ್ಬಂಧ ವಿಧಿಸಿತ್ತು. 2024ರ ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಇನ್ಸ್‌ಟ್ರುಮೆಂಟ್‌ಗಳು,  ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ಎನ್‌ಸಿಎಂಸಿ ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದಾದ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿತ್ತು. 

click me!