ಪ್ರಧಾನಿ ಮೋದಿ ಕನಸಿನಂತೆ ಭಾರತ ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಹೊಸ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಆದರೆ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು, ಸಣ್ಣ ಉದ್ದಿಮೆಗಳು ನೆಲಕಚ್ಚಿದೆ. ವೇತನ ಕಡಿತ, ಸಾಲ ಇದೀಗ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಹೀಗೆ ಚಿಂತಾಕ್ರಾಂತದಲ್ಲಿರುವ ಉದ್ಯಮಿಗಳಿಗೆ ದಿಗ್ಗಜ, ರತನ್ ಟಾಟಾ ಪತ್ರವೊಂದನ್ನು ಬರೆದಿದ್ದಾರೆ. ಟಾಟಾ ಪತ್ರ ಇದೀಗ ಉದ್ದಿಮೆದಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಮುಂಬೈ(ಮೇ.11): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಸಣ್ಣ ಕಂಪನಿಗಳು ನಗದು ವ್ಯವಹಾರ ಇಲ್ಲದೆ ಸಂಪೂರ್ಣ ನಷ್ಟಕ್ಕೆ ತಳ್ಳಲ್ಪಟ್ಟಿದೆ. ಈಗಾಗಲೇ ಹಲವು ಕಂಪನಿಗಳು ವೇತನ ಕಡಿತ ಮಾಡಿತ್ತು. ಕೆಲ ಕಂಪನಿಗಳು ಉದ್ಯೋಗ ಕಡಿತ ಕೂಡ ಮಾಡಿದೆ. ಇದೀಗ ಹಲವು ಕಂಪನಿಗಳು ಲಾಕ್‌ಡೌನ್ ಓಪನ್ ಆದರೂ ಕಂಪನಿ ಓಪನ್ ಆಗುವುದೇ ಅನುಮಾನವಾಗಿದೆ.
ಟಾಟಾ ಸಮೂಹದಿಂದ 1500 ಕೋಟಿ ನೆರವು!
ಕಠಿಣ ಸಮಯದಲ್ಲಿ ಟಾಟಾ ಗ್ರೂಪ್ ಮುಖ್ಯಸ್ಥ, ಉದ್ಯಮ ಕ್ಷೇತ್ರದ ದಿಗ್ಗಜ, 82 ವರ್ಷದ ರತನ್ ಟಾಟ ಸಂಕಷ್ಟದಲ್ಲಿರುವ ಸ್ಟಾರ್ಟ್ ಅಪ್ ಕಂಪನಿ, ಸಣ್ಣ ಉದ್ದಿಮೆ ಸೇರಿದಂತೆ ಎಲ್ಲಾ ಉದ್ಯಮಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರ ಉದ್ಯಮಿಗಳ ಅಷ್ಟೇ ಮಹತ್ವದ್ದಾಗಿದೆ. ಉದ್ಯಮ್ಕೆ ದಿಕ್ಸೂಚಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಪತ್ರವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಎದುರಾದ ಸಂಕಷ್ಟದ ಸಮಯದಲ್ಲಿ ಉದ್ಯಮಿಗಳು ದೂರದೃಷ್ಟಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದ್ದಾರೆ, ಈ ಮೂಲಕ ಮಹಾ ಸಂಕಟದಿಂದ ಹೊರಬಂದಿದ್ದಾರೆ. ಇಂದು ನಾವು ಹೊಸತನ, ಸೃಜನಶೀಲತೆ ಮತ್ತು ತಂತ್ರಜ್ಞಾನ ಬಳಸುತ್ತಿದ್ದೇವೆ. ಸದ್ಯದ ಬಿಕ್ಕಟ್ಟಿನಲ್ಲಿ ಉದ್ದಿಮೆ, ಕಂಪನಿ ನಡೆಸಲು ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಈ ಪರಿಸ್ಥಿತಿ ನಮ್ಮನ್ನು ಹೊಸತನಕ್ಕೆ ಅನಿವಾರ್ಯವಾಗಿ ತೆರೆದುಕೊಳ್ಳಲು ದೂಡುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಪರಿಸ್ಥಿತಿಯಲ್ಲಿ ಸವಾಲುಗಳು, ಅಡೆತಡೆಗಳು ನಮ್ಮನ್ನು ಮತ್ತಷ್ಟು ವಿಚಲಿತರನ್ನಾಗಿ ಮಾಡುವ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕಠಿಣ ಸಂದರ್ಭದಲ್ಲಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಸೃಜನಶೀಲತೆ, ಹೊಸತನ ಹುಡುಕುವ ಉದ್ಯಮಿಗಳು ಈ ಸವಾಲನ್ನು ಮೆಟ್ಟಿ ನಿಂತು ಉದ್ಯಮವನ್ನು ಮತ್ತೆ ಆರಂಭಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಇಂದು ನೀವು ನವೀಕರಿಸು ವಿಧಾನ ಭವಿಷ್ಯದ ದಿಕ್ಸೂಚಿಯಾಗಲಿದೆ. ಖಾಲಿ ಹಾಳೆಯಿಂದ ಮತ್ತೆ ಆರಂಭಿಸಬೇಕಿದೆ. ಹಿಂದೆಂದೂ ಯೋಚಿಸಿರದ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಸದ್ಯದ ಪರಿಸ್ಥಿತಿಯನ್ನು ಸ್ವೀಕರಿಸುವ ಹಾಗೂ ಹೊಸತವನ್ನು ಹುಡುಕುವ ಅನಿವಾರ್ಯತೆಗೆ ಉದ್ಯಮಿಗಳನ್ನು ತಂದು ನಿಲ್ಲಿಸಿದೆ ಎಂದು ರತನ್ ಟಾಟಾ ಪತ್ರದ ಮೂಲಕ ಹೇಳಿದ್ದಾರೆ.
ಟಾಟಾ ಪತ್ರ ಉದ್ಯಮಿಗಳಿಗೆ ಹೊಸ ಉತ್ಸಾಹ ನೀಡಿದೆ. ಕಠಿಣ ಪರಿಸ್ಥಿತಿಯಲ್ಲಿ ಸ್ಪೂರ್ತಿದಾಯ ಮಾತು ಕೇಳಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ಟಾಟಾ ಗ್ರೂಪ್ ಹಲವು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಕ್ಯೂರ್ ಫಿಟ್, ಕ್ಲೈಮಾ ಸೆಲ್, ಕಾರ್ ದೇಖೋ, ಅರ್ಬಲಾಂಡರ್, ಲೆನ್ಸ್ ಕಾರ್ಟ್ ನೆಸ್ಟ್ ಅವೇ, ಡಾಗ್‌ಸ್ಪಾಟ್ ಸೇರಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ.