ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

Published : Aug 14, 2022, 01:52 PM ISTUpdated : Aug 16, 2022, 09:39 PM IST
ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

ಸಾರಾಂಶ

ನನಗೆ ಸಕ್ಕರೆ ಕಾಯಿಲೆ ಇದೆ. ಎಷ್ಟು ವರ್ಷ ಬದುಕುತ್ತೇನೆ ಅನ್ನೋದು ಗೊತ್ತಿಲ್ಲ. ಆದರೆ, ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಿರಬೇಕು ಅನ್ನೋ ಆಸೆ ಇದೆ. ಅದಕ್ಕಾಗಿ ಮೀನಿನ ರೀತಿಯಲ್ಲಿ ನೀರು ಕುಡಿಯುತ್ತೇನೆ ಎಂದು ಹಿಂದೊಮ್ಮೆ ರಾಕೇಶ್‌ ಜುಂಜುನ್‌ವಾಲಾ ಹೇಳಿದ್ದರು. ಅಪಾರ ಶ್ರೀಮಂತಿಕೆಯಿದ್ದರೂ, ಷೇರು ಮಾರುಕಟ್ಟೆ ಬಿಟ್ಟು ಮತ್ತೇನನ್ನೂ ತಿಳಿಯದ ರಾಕೇಶ್‌ ಜುಂಜುನ್‌ವಾಲಾ ಜೀವನದ ಐದು ಆಸಸ್ತಿಕರ ಸಂಗತಿಗಳು ಇಲ್ಲಿವೆ.  

ಬೆಂಗಳೂರು (ಆ. 14): 'ಹೌದು ನನಗೆ ಬಹಳ ವರ್ಷಗಳಿಂದ ಸಕ್ಕರೆ ಕಾಯಿಲೆ ಇದೆ. ನಾನು ಅತ್ಯಂತ ಶಿಸ್ತುಬದ್ಧ ಜೀವನವನ್ನು ಸಾಗಿಸಬೇಕು ಎನ್ನುವುದೂ ಗೊತ್ತು. ಸಕ್ಕರೆ ಕಾಯಿಲೆ ಇರುವ ಕಾರಣಕ್ಕೆ, ಸದಾ ಕಾಲ ನೀರಿನಲ್ಲೇ ಇರುವ ಮೀನಿನಂತೆ ನೀರು ಕುಡಿಯುತ್ತೇನೆ. ಯಾಕೆಂದರೆ ನನಗೆ ನನ್ನ ಮಕ್ಕಳು 25 ವರ್ಷ ಆಗುವವರೆಗೂ ಬದುಕಿರಬೇಕೆಂಬ ಆಸೆ ಇದೆ' 2010ರಲ್ಲಿ ಇಂಗ್ಲೀಷ್‌ನ ವಾಣಿಜ್ಯ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಭಾರತದ ಷೇರು ಮಾರುಕಟ್ಟೆಯ ಬಿಗ್‌ ಬುಲ್‌ ಎಂದೇ ಗುರುತಿಸಿಕೊಂಡಿದ್ದ ರಾಕೇಶ್‌ ಜುಂಜುನ್‌ವಾಲಾ ಈ ಮಾತನ್ನಾಡಿದ್ದರು. ಆದರೆ, ಭಾನುವಾರ ಮುಂಬೈನಲ್ಲಿ ಅವರು ನಿಧನರಾದಾಗ ಅವರ ಅವಳಿ ಗಂಡು ಮಕ್ಕಳಿಗೆ ಬರೀ 12 ವರ್ಷ. ಇದರೊಂದಿಗೆ ಬಿಗ್‌ ಬುಲ್‌ನ ಅತೀದೊಡ್ಡ ಆಸೆ ಈಡೇರದೇ ಹೋಯಿತು. ರಾಕೇಶ್‌ ಜುಂಜುನ್‌ವಾಲಾ ತಂದೆ ಅದಾಯ ತೆರಿಗೆ ಅಧಿಕಾರಿಯಾಗಿದ್ದವರು. ಆದರೆ, ಅಪ್ಪನ ಹಣಕ್ಕಿಂತ ಸ್ವಂತ ಬಲದ ಮೇಲೆ ನಿಲ್ಲಬೇಕು ಎನ್ನುವ ಇಚ್ಛೆ ಹೊಂದಿದ್ದ ಜುಂಜುನ್‌ವಾಲಾಗೆ ಕಂಡಿದ್ದು ಷೇರು ಮಾರುಕಟ್ಟೆ 1985ರಲ್ಲಿ ಕಾಲೇಜಿನಲ್ಲಿರುವಾಗಲೇ ತಂದೆ ಕೊಟ್ಟ ಪಾಕೆಟ್‌ಮನಿ ಎಲ್ಲವನ್ನೂ ಸೇರಿಸಿ ಬರೀ 5 ಸಾವಿರದಲ್ಲಿ ಷೇರು ಖರೀದಿ ಮಾಡಿದ್ದ ರಾಕೇಶ್‌ ಜುಂಜುನ್‌ವಾಲಾ ಅವರ ಆಸ್ತಿ ಇಂದು 44 ಸಾವಿರ ಕೋಟಿಗಿಂತಲೂ ಹೆಚ್ಚು. ರಾಕೇಶ್‌ ಜುಂಜುನ್‌ವಾಲಾ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದಾಗ ಸೆನ್ಸೆಕ್ಸ್‌ನ ಅಂಕ ಬರೀ 150ರಲ್ಲಿತ್ತು. ಇಂದು ಇದೇ ಸೆನ್ಸೆಕ್ಸ್‌ನ ಅಂಕಗಳು 60 ಸಾವಿರಕ್ಕೆ ಮುಟ್ಟಿವೆ. 62 ವರ್ಷದ ರಾಕೇಶ್‌ ಜುಂಜುನ್‌ವಾಲಾ ಜೀವನದ 5 ಆಸಕ್ತಿಕರ ಅಂಶಗಳು ಇಲ್ಲಿವೆ.

ವೀಲ್‌ಚೇರ್‌ನಲ್ಲಿ ಕಜ್ರಾರೆ ಹಾಡಿಗೆ ಡಾನ್ಸ್‌ ಮಾಡಿದ್ದ ಜುಂಜುನ್‌ವಾಲಾ: ಹಿಂದೊಮ್ಮೆ ರಾಕೇಶ್‌ ಜುಂಜುನ್‌ವಾಲಾ ಅವರ ವಿಡಿಯೋವೊಂದು ದೊಡ್ಡ ಮಟ್ಟದಲ್ಲಿ ವೈರಲ್‌ ಅಗಿತ್ತು. ಅದರಲ್ಲಿ ಅವರು ಬಾಲಿವುಡ್‌ನ ಕಜ್ರಾರೆ ಹಾಡಿಗೆ ವೀಲ್ಡ್‌ಚೇರ್‌ನಲ್ಲೇ ಕುಳಿತು ಡಾನ್ಸ್‌ ಮಾಡಿದ್ದರು. ಸಕ್ಕರೆ ಕಾಯಿಲೆ ಇದ್ದ ಕಾರಣಕ್ಕೆ, ಹೆಚ್ಚು ಹೊತ್ತು ನಿಂತಿದ್ದರೆ ಅವರ ಕಾಲುಗಳು ಊದಿಕೊಳ್ಳುತ್ತಿದ್ದವು. ಅದಲ್ಲದೆ, ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಆದರೆ, ವೀಲ್ಹ್‌ಚೇರ್‌ನಲ್ಲಿ ಕುಳಿತು ಅವರು ಮಾಡಿದ್ದ ಡಾನ್ಸ್‌, ಅವರಲ್ಲೆಷ್ಟು ಚೈತನ್ಯವಿತ್ತು ಎನ್ನುವುದನ್ನು ತೋರಿಸಿತ್ತು. ವೀಡಿಯೊದಲ್ಲಿ ಜುಂಜುನ್‌ವಾಲಾ ಅವರ ಪತ್ನಿ ರೇಖಾ, ಆಪ್ತರಾದ ಉತ್ಪಲ್ ಸೇಠ್, ಅಮಿತ್ ಗೋಲಾ ಮತ್ತು ಅನೇಕ ಕುಟುಂಬ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದರು.

ಸ್ಲಿಪ್ಪರ್‌ ಹಾಕಿಕೊಂಡು ಹಣಕಾಸು ಸಚಿವರ ಭೇಟಿ: ರಾಕೇಶ್ ಜುಂಜುನ್ವಾಲಾ ಅವರ ವ್ಯಕ್ತಿತ್ವದ ಇನ್ನೊಂದು ವಿಶೇಷವೆಂದರೆ ಅವರ ನಿರಾಸಕ್ತಿ. ಯಾರನ್ನಾದರೂ ಭೇಟಿಯಾಗಬೇಕಾದರೆ, ಔಪಚಾರಿಕತೆಯಲ್ಲಿ ಮುಳುಗುತ್ತಿರಲಿಲ್ಲ. ಕಳೆದ ವರ್ಷ ಅವರ ಎರಡು ಚಿತ್ರಗಳು ಅದಕ್ಕೆ ಉದಾಹರಣೆ ಆಗಿದ್ದವು. ಮೊದಲ ಚಿತ್ರದಲ್ಲಿ ಕೇವಲ ಸ್ಲಿಪ್ಪರ್‌ ಧರಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ್ದರೆ, 2ನೇ ಚಿತ್ರದಲ್ಲಿ ಇಸ್ತ್ರೀ ಇಲ್ಲದ ಶರ್ಟ್‌ನಲ್ಲಿ ಪ್ರಧಾನಿಯನ್ನು ಭೇಟಿ ಆಗಿದ್ದರು. ಈ ಕುರಿತಾಗಿ ಪ್ರಶ್ನೆ ಮಾಡಿದ್ದಾಗ, "600 ರೂಪಾಯಿ ಕೊಟ್ಟು ಶರ್ಟ್‌ಗೆ ಇಸ್ತ್ರೀ ಮಾಡಿಸಿದ್ದೆ. ಹಾಗಿದ್ದರೂ, ಇದು  ಈ ರೀತಿ ಕಂಡಿದೆ. ಅದಕ್ಕೆ ನಾನೇನು ಮಾಡೋಕೆ ಆಗುತ್ತೆ. ನಾನು ನನ್ನ ಆಫೀಸ್‌ಗೆ ಶಾರ್ಟ್‌ ಧರಿಸಿ ಹೋಗುತ್ತೇನೆ' ಎಂದಿದ್ದರು. ಈ ಸಂದರ್ಶನದಲ್ಲಿ, ಪ್ರಧಾನಿ ಮೋದಿಯವರೊಂದಿಗಿನ ಸಭೆಯಲ್ಲಿ ಏನಾಯಿತು ಎಂದು ಕೇಳಿದಾಗ. ಜುಂಜುನ್‌ವಾಲಾ ನಿರಾತಂಕವಾಗಿ ಉತ್ತರಿಸುತ್ತಾ, 'ಹನಿಮೂನ್‌ನಲ್ಲಿ ನನ್ನ ಹೆಂಡತಿ ಜೊತೆ ಏನಾಯ್ತು ಅನ್ನೋದನ್ನು ಹೇಳಲಿಕ್ಕೆ ಆಗುತ್ತದಾ?' ಎಂದು ಪ್ರಶ್ನಿಸಿದ್ದರು.

5 ಸಾವಿರದಿಂದ 46 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ ಬಿಗ್‌ ಬುಲ್‌ ರಾಕೇಶ್‌ ಜುಂಜುನ್‌ವಾಲಾ!

ನನ್ನ ಆಸ್ತಿಯಲ್ಲಿ ಶೇ.10ರಷ್ಟಿದ್ದರೂ ನಾನು ಇದೇ ರೀತಿ ಬದುಕುತ್ತೇನೆ: 2021 ರಲ್ಲಿ, ರಾಕೇಶ್ ಜುಂಜುನ್‌ವಾಲಾ ಅವರನ್ನು ಸಂದರ್ಶನವೊಂದರಲ್ಲಿ ಕಳೆದ 18 ತಿಂಗಳುಗಳಲ್ಲಿ ನಿಮ್ಮ ಪೋರ್ಟ್‌ಫೋಲಿಯೊ ರಾಕೆಟ್‌ನಂತೆ ಏರಿದೆ ಎಂದು ಪ್ರಶ್ನಿಸಲಾಗಿತ್ತು. ನಿಮ್ಮ ನಿವ್ವಳ ಮೌಲ್ಯ 40 ಸಾವಿರ ಕೋಟಿ ತಲುಪಿದೆ. ನೀವು ಅದನ್ನು ಹೇಗೆ ನೋಡುತ್ತೀರಿ? ಈ ಬಗ್ಗೆ ಜುಂಜುನ್‌ವಾಲಾ ತುಂಬಾ ಸರಳವಾಗಿ ಮಾತನಾಡಿದ್ದರು.  'ಇವನ್ನೆಲ್ಲಾ ಯಾಕೆ ಎಣಿಸಬೇಕು, ಯಾವುದನ್ನು ನಾನು ಎಣಿಸಬೇಕು. ಬ್ಯಾಲೆನ್ಸ್ ಶೀಟ್ ಅನ್ನು ಯಾರಿಗೆ ತೋರಿಸಬೇಕು? ನಮಗೆ ಪಾಲುದಾರರಿದ್ದಾರೆ, ಅವನಿಗೇ ಇದರಲ್ಲಿ ಆಸಕ್ತಿಯಿಲ್ಲ. ಇವತ್ತು ನನ್ನ ಬಳಿ ಇರುವ ಸಂಪತ್ತಿನ ಶೇ.10-15ರಷ್ಟಿದ್ದರೂ ಈ ಬದುಕು ಇರುತ್ತಿತ್ತು. ನಾನು ಆಗಲೂ ನಾನು ಇದೇ ವಿಸ್ಕಿಯನ್ನು ಕುಡಿಯುತ್ತಿದ್ದೆ. ಈಗ ಇರುವಂಥದ್ದೇ ಕಾರನ್ನು ಬಳಸುತ್ತಿದ್ದೆ. ಈಗಿರುವ ಮನೆಯಲ್ಲಿಯೇ ವಾಸಿಸುತ್ತಿದ್ದೆ. ಅದಕ್ಕಾಗಿಯೇ ನಾನು ಲೆಕ್ಕಿಸುವುದಿಲ್ಲ. ನನಗೆ ಷೇರ್‌ ಮಾರುಕಟ್ಟೆ ಒಂದೇ ಗೊತ್ತಿರುವ ವಿದ್ಯೆ. ಸುಮ್ಮನೆ ಕೂರೋದಿಕ್ಕೆ ಇದು ಬಿಡೋದಿಲ್ಲ. ಇದೊಂದೇ ಕೆಲಸ ಗೊತ್ತಿರುವ ಕಾರಣ ನಾನು ಈ ಕೆಲಸ ಮಾಡುತ್ತೇನೆ.' ಎಂದು ಹೇಳಿದ್ದರು. ನಿಮಗೆ ನೆನಪಿರಲಿ, ರಾಕೇಶ್ ಜುಂಜುನ್‌ವಾಲಾ ಅವರು ತಮ್ಮ ಗಳಿಕೆಯ 25% ಅನ್ನು ದಾನ ಮಾಡುತ್ತಾರೆ.

Rakesh Jhunjhunwala ವಿಧಿವಶ: ಬಿಗ್‌ ಬುಲ್‌ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಮದ್ಯ ಹಾಗೂ ಸಿಗಾರ್‌ನ ಹುಚ್ಚು: 2010ರ ಸಂದರ್ಶನದಲ್ಲಿ ಮೊದಲ ಬಾರಿಗೆ ಅವರು ತಾವು ಡಯಾಬಿಟೀಸ್‌ನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಅದಲ್ಲದೆ, ಮದ್ಯ ಹಾಗೂ ಸಿಗಾರ್‌ನ ಹುಚ್ಚಿನ ಬಗ್ಗೆಯೂ ತಿಳಿಸಿದ್ದರು. ಆದರೆ, ಇದಕ್ಕಾಗಿ ಬಹಳ ಎಚ್ಚರಿಕೆಯಲ್ಲೂ ಇದ್ದೇನೆ ಎಂದಿದ್ದರು. 'ಕಟ್ಟುನಿಟ್ಟಾದ ಶಿಸ್ತನ್ನು ಅನುಸರಿಸಬೇಕು ಎನ್ನುವುದನ್ನು ಅರಿತುಕೊಂಡಿದ್ದೇನೆ. ನಾನು ಮಧುಮೇಹಿ ಮತ್ತು ಮೀನಿನಂತೆ ಕುಡಿಯುತ್ತೇನೆ. ನನ್ನ ಅವಳಿಗಳಿಗೆ 25 ವರ್ಷ ತುಂಬುವುದನ್ನು ನಾನು ನೋಡಲು ಬಯಸುತ್ತೇನೆ ಎಂದಿದ್ದರು.  ಸಂದರ್ಶನದಲ್ಲಿ, ಜುಂಜುನ್‌ವಾಲಾ ನನಗೆ ಜೀವನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದರು. ನಾನು ನನ್ನ ವೈಯಕ್ತಿಕ ಅಭ್ಯಾಸಗಳನ್ನು ಸುಧಾರಿಸಬೇಕು ಮತ್ತು ಹೆಚ್ಚು ವ್ಯಾಯಾಮ ಮಾಡಬೇಕೆಂಬುದು ನನ್ನ ಏಕೈಕ ಆಸೆಯಾಗಿತ್ತು ಎಂದಿದ್ದರು. ಆದರೆ, ಜೀವನಪೂರ್ತಿ ಅವರಿಗೆ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ.

ಪತ್ನಿಯ ಬಳೆ ಬೇಕಾದ್ರೂ ಮಾರಿ ಷೇರು ಖರೀದಿಸ್ತೇನೆ: ಅಪಾಯಗಳನ್ನು ತೆಗೆದುಕೊಳ್ಳಲು ಎಂದಿಗೂ ಜುಂಜುನ್‌ವಾಲಾ ಹೆದರುತ್ತಿರಲಿಲ್ಲ. ನಾನು ಮಹಿಳೆಯರು ಹಾಗೂ ಮಾರ್ಕೆಟ್‌ನ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಮಹಿಳೆ ಪ್ರೀತಿ ತುಂಬಿದ ಗಣಿ. ಇನ್ನು ಮಾರ್ಕೆಟ್‌ ರಿಸ್ಕ್‌ಗಳೇ ಹೆಚ್ಚಿರುವ ಜಾಗ. ಮಹಿಳೆಯಲ್ಲಿ ನಿಮಗೆ ಮೊಗೆದಷ್ಟು ಪ್ರೀತಿ ಸಿಗುತ್ತದೆ. ಮಾರ್ಕೆಟ್‌ನಲ್ಲಿ ನಿಮಗೆ ಮೊಗೆದಷ್ಟು ಹಣ ಸಿಗುತ್ತದೆ. ರಿಸ್ಕ್‌ ತೆಗೆದುಕೊಳ್ಳುವುದು ನನ್ನ ಹವ್ಯಾಸ. ಷೇರು ಮಾರುಕಟ್ಟೆ ಏನಾದರೂ ಉತ್ತಮ ಅವಕಾಶ ನೀಡಿದರೆ, ನನ್ನ ಹೆಂಡತಿಯ ಕೈಬಳೆಯನ್ನಾದರೂ ಮಾರಿ ನಾನು ಹಣ ಹೂಡಿಕೆ ಮಾಡುತ್ತೇನೆ ಎಂದು ಹೇಳಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!