ಈ ರಾಜ್ಯದ ಸರ್ಕಾರಿ ನೌಕರರಿಗೆ ಮುಂಗಡ ವೇತನ ಸೌಲಭ್ಯ; ಜೂ.1ರಿಂದಲೇ ಜಾರಿ

By Suvarna NewsFirst Published Jun 2, 2023, 4:31 PM IST
Highlights

ಸರ್ಕಾರಿ ನೌಕರರಿಗೆ ಮುಂಗಡವಾಗಿ ವೇತನ ಪಡೆಯುವ ಅವಕಾಶವನ್ನು ರಾಜಸ್ಥಾನ ಸರ್ಕಾರ ನೀಡಿದೆ. ಈ ಮೂಲಕ ಇಂಥ ಸೌಲಭ್ಯ ಕಲ್ಪಿಸುತ್ತಿರುವ ದೇಶದ ಮೊದಲ ರಾಜ್ಯವಾಗಿ ರಾಜಸ್ಥಾನ ಗುರುತಿಸಿಕೊಂಡಿದೆ. ಈ ಸೌಲಭ್ಯ ಜೂ.1ರಿಂದಲೇ ಜಾರಿಗೆ ಬಂದಿದೆ.ಕಳೆದ ವರ್ಷ ನೌಕರರ ಒತ್ತಾಯಕ್ಕೆ ಮಣಿದು ರಾಜಸ್ಥಾನ ಸರ್ಕಾರ ಎನ್ ಪಿಎಸ್ ಸ್ಥಗಿತಗೊಳಿಸಿ ಒಪಿಎಸ್ ಜಾರಿ ಮಾಡಿತ್ತು. 

ನವದೆಹಲಿ (ಜೂ.2): ಉದ್ಯೋಗಿಗಳಿಗೆ ವೇತನ ಪ್ರತಿ ತಿಂಗಳ ಕೊನೆಯಲ್ಲಿ ಸಿಗುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಸಾಮಾನ್ಯ. ಇದೇ ಕಾರಣಕ್ಕೆ ಕೆಲವೊಮ್ಮೆ ತಿಂಗಳ ಮಧ್ಯದಲ್ಲಿ ಹಣದ ತುರ್ತು ಅಗತ್ಯ ಎದುರಾದರೆ ಬೇರೆಯವರಿಂದ ಸಾಲ ಪಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಿರುವಾಗ ವೇತನವನ್ನು ಮುಂಗಡವಾಗಿ ಪಡೆಯುವ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬಹುತೇಕ ಉದ್ಯೋಗಿಗಳು ಯೋಚಿಸುವುದು ಕೂಡ ಇದೆ. ಈಗ ಇಂಥ ಒಂದು ಅವಕಾಶವನ್ನು ರಾಜಸ್ಥಾನ ಸರ್ಕಾರ ತನ್ನ ಉದ್ಯೋಗಿಗಳಿಗೆ ನೀಡಿದೆ. ಹೌದು, ರಾಜಸ್ಥಾನ ಸರ್ಕಾರಿ ನೌಕರರಿಗೆ ವೇತನವನ್ನು ಮುಂಗಡವಾಗಿ ಪಡೆಯುವ ಅವಕಾಶ ನೀಡಲಾಗಿದೆ. ಗಳಿಕೆ ವೇತನ ಮುಂಗಡ ಪಡೆಯುವ ಯೋಜನೆಯ ಅಡಿಯಲ್ಲಿ ರಾಜಸ್ಥಾನ ಸರ್ಕಾರ  ಈ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಮೇ 31ರಂದು ರಾಜಸ್ಥಾನ ಸರ್ಕಾರದ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ರಾಜಸ್ಥಾನ ಉದ್ಯೋಗಿಗಳಿಗೆ ಮುಂಗಡ ವೇತನ ಸೌಲಭ್ಯ ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ ಎನಿಸಿಕೊಂಡಿದೆ. ಈ ಸೌಲಭ್ಯ ಎಲ್ಲ ಉದ್ಯೋಗಿಗಳಿಗೂ ಜೂ.1ರಿಂದಲೇ ಜಾರಿಗೆ ಬರಲಿದೆ. ಇನ್ನು ಈ ಸೌಲಭ್ಯವನ್ನು ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ (ಐಎಫ್ ಎಂಎಸ್) 3.0 ಮೂಲಕ ಜಾರಿ ಮಾಡಲಾಗುತ್ತಿದೆ. 

ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳಲ್ಲಿ ಅನೇಕ ಬಾರಿ ಮುಂಗಡ ವೇತನ ಪಡೆಯಬಹುದು. ಆದರೆ, ಇದರ ಒಟ್ಟು ಮೊತ್ತ ಒಟ್ಟು ಮಾಸಿಕ ವೇತನದ ಶೇ.50ಕ್ಕಿಂತ ಹೆಚ್ಚಿರಬಾರದು. ಒಂದು ವೇಳೆ ಉದ್ಯೋಗಿ ಯಾವುದೇ ತಿಂಗಳ 21 ತಾರೀಖಿಗಿಂತ ಮೊದಲು ಮುಂಗಡ ವೇತನ ಪಡೆದಿದ್ದರೆ, ಆ ಮೊತ್ತವನ್ನು ಅವರ ಅದೇ ತಿಂಗಳ ವೇತನದಿಂದ ಕಡಿತಗೊಳಿಸಲಾಗುತ್ತದೆ. 

ಇಪಿಎಫ್ ಪಾಸ್ ಬುಕ್ ನಲ್ಲಿ ಇನ್ನೂ ಬಡ್ಡಿ ಅಪ್ಡೇಟ್ ಆಗದಿದ್ರೆ ಚಿಂತಿಸಬೇಡಿ, ಯಾವುದೇ ನಷ್ಟವಾಗದು: EPFO

ಇನ್ನು ಈ ಸೌಲಭ್ಯವನ್ನು ಬಳಸಿಕೊಳ್ಳಲು ಇಚ್ಛಿಸುವ ರಾಜ್ಯ ಸರ್ಕಾರಿ ನೌಕರರು ತಮ್ಮ ಎಸ್ ಎಸ್ ಒ ಐಡಿ (SSO ID) ಬಳಸಿಕೊಂಡು IFMS 3.0 ಲಾಗಿನ್ ಆಗಬೇಕು. ಅವರ ಒಪ್ಪಿಗೆ ಸೂಚಿಸಬೇಕು ಹಾಗೂ ಮುಚ್ಚಳಿಕೆಯನ್ನು ಸೇವಾ ಪೂರೈಕೆದಾರರು ಅಥವಾ ಹಣಕಾಸು ಸಂಸ್ಥೆಗೆ ನೌಕರರ ಸ್ವಯಂ ಸೇವೆ ಮೂಲಕ ನೀಡಬೇಕು. ಇನ್ನು ನೌಕರರು ಹಣಕಾಸು ಸೇವಾ ಪೂರೈಕೆದಾರರ ಆನ್ ಲೈನ್ ಪೋರ್ಟಲ್ ಗೆ ನೇರವಾಗಿ ಲಾಗಿನ್ ಆಗುವ ಮೂಲಕ ಕೂಡ ಮುಚ್ಚಳಿಕೆ ಸಲ್ಲಿಕೆ ಮಾಡಬಹುದು. ಆ ಬಳಿಕ ಐಎಫ್ ಎಂಎಸ್ (IFMS) ವೆಬ್ ಸೈಟ್ ಗೆ ಭೇಟಿ ನೀಡಿ ಒಟಿಪಿ ಆಧಾರಿತ ಪ್ರಕ್ರಿಯೆ ಮೂಲಕ ತಮ್ಮ ಒಪ್ಪಿಗೆ ನೀಡಬೇಕು.

ITR Filing:ಸ್ವ ಉದ್ಯೋಗ ಹೊಂದಿರುವ ವ್ಯಕ್ತಿ ಕೂಡ HRA ಕ್ಲೇಮ್ ಮಾಡಬಹುದಾ?

ನೌಕರ ಹಣಕಾಸು ಸಂಸ್ಥೆ/ ಸೇವಾ ಪೂರೈಕೆದಾರರಿಗೆ ಒಂದು ಬಾರಿಗೆ ಸಲ್ಲಿಕೆ ಮಾಡಿದ ಮುಚ್ಚಳಿಕೆ ರಾಜಸ್ಥಾನ ಹಣಕಾಸು ಸೇವೆ ಪೂರೈಕೆ ಲಿಮಿಟೆಡ್ (RFSDL)ಜೊತೆಗೆ ಆ ಸಂಸ್ಥೆಯ ಗುತ್ತಿಗೆ ಅವಧಿ ಮುಗಿಯುವ ತನಕ ಮಾನ್ಯತೆ ಹೊಂದಿರುತ್ತದೆ. ಇನ್ನು ಸರ್ಕಾರಿ ನೌಕರರು ಮುಂಗಡವಾಗಿ ಪಡೆದುಕೊಂಡ ಹಣಕ್ಕೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಿಲ್ಲ. ಕೇವಲ ವಹಿವಾಟು ಶುಲ್ಕವನ್ನು ಮಾತ್ರ ಹಣಕಾಸು ಸಂಸ್ಥೆಗಳು ವಸೂಲಿ ಮಾಡುತ್ತವೆ. ಈ ಸೌಲಭ್ಯದಿಂದ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಊಹಿಸಲಾಗಿದೆ. ಈ ಸೌಲಭ್ಯದಿಂದಾಗಿ ಅವರು ಅಗತ್ಯ ವೆಚ್ಚಗಳನ್ನು ನಿಭಾಯಿಸಲು ಅಧಿಕ ಬಡ್ಡಿದರದಲ್ಲಿ ಹಣವನ್ನು ಸಾಲ ಪಡೆಯಬೇಕಾದ ಅಗತ್ಯವಿಲ್ಲ. 

ಕಳೆದ ವರ್ಷ ರಾಜಸ್ಥಾನ ಸರ್ಕಾರ ನೌಕರರ ಮನವಿ ಹಿನ್ನೆಲೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ  ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್ ) ಮರುಜಾರಿಗೊಳಿಸಿತ್ತು. 

click me!