ಆರ್ ಬಿಐ ಗವರ್ನರ್ ವಿಶ್ವದ ನಂ.1 ಬ್ಯಾಂಕರ್ ; A+ ರೇಟಿಂಗ್ ಪಡೆದ ಶಕ್ತಿಕಾಂತ ದಾಸ್ ಗೆ ಪ್ರಧಾನಿ ಅಭಿನಂದನೆ

Published : Sep 02, 2023, 05:55 PM IST
ಆರ್ ಬಿಐ ಗವರ್ನರ್ ವಿಶ್ವದ  ನಂ.1 ಬ್ಯಾಂಕರ್ ; A+ ರೇಟಿಂಗ್ ಪಡೆದ ಶಕ್ತಿಕಾಂತ ದಾಸ್ ಗೆ ಪ್ರಧಾನಿ ಅಭಿನಂದನೆ

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ವಿಶ್ವದ  ಕೇಂದ್ರೀಯ ಬ್ಯಾಂಕರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಈ ಸಾಧನೆಗೆ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.   

ನವದೆಹಲಿ (ಸೆ.2): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ವಿಶ್ವದ  ಕೇಂದ್ರೀಯ ಬ್ಯಾಂಕರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023ರಲ್ಲಿ ಅವರಿಗೆ A+ ರೇಟಿಂಗ್ ನೀಡಲಾಗಿದೆ. ಮೂರು ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳಿಗೆ  A+ ರೇಟಿಂಗ್ ನೀಡಲಾಗಿದೆ. ಈ ಪಟ್ಟಿಯಲ್ಲಿ ಶಕ್ತಿಕಾಂತ ದಾಸ್ ಮೊದಲ ಸ್ಥಾನದಲ್ಲಿದ್ದಾರೆ ಕೂಡ. ಜಾಗತಿಕ ಆರ್ಥಿಕ ಅನಿಶ್ಚಿತತೆ ಸಮಯದಲ್ಲಿ ಭಾರತೀಯ ಆರ್ಥಿಕತೆಯನ್ನು ಅವರು ನಿಭಾಯಿಸಿದ ರೀತಿಗೆ ಅಭಿನಂದನೆ ಸಲ್ಲಿಸಲಾಗಿದೆ. ಆರ್ಥಿಕ ಪ್ರಗತಿಗೆ ಬೆಂಬಲ ನೀಡುವ ಮೂಲಕ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ನೆರವು ನೀಡಿರೋದಕ್ಕೆ ಶಕ್ತಿಕಾಂತ ದಾಸ್ ಅವರಿಗೆ A+ ರೇಟಿಂಗ್ ನೀಡಲಾಗಿದೆ. ಈ ಸಾಧನೆಗೆ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಎಕ್ಸ್ ನಲ್ಲಿ ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿ ಪ್ರಧಾನಿ ಪೋಸ್ಟ್ ಹಾಕಿದ್ದು, ಭಾರತದ ಪಾಲಿಗೆ ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. 

ಶಕ್ತಿಕಾಂತ ದಾಸ್ ಆರ್ ಬಿಐ 25ನೇ ಗವರ್ನರ್ ಆಗಿ 2018ರ ಡಿಸೆಂಬರ್ 12ರಂದು ಅಧಿಕಾರ ಸ್ವೀಕರಿಸಿದ್ದರು.ಇದಕ್ಕೂ ಮುನ್ನ ದಾಸ್ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಇನ್ನು ಲಂಡನ್ ನಲ್ಲಿ ಜೂನ್ ನಲ್ಲಿ ನಡೆದ 2023ನೇ ಸಾಲಿನ ಸೆಂಟ್ರಲ್ ಬ್ಯಾಂಕಿಂಗ್ ಆವಾರ್ಡ್ಸ್ 2023ರಲ್ಲಿ ಶಕ್ತಿಕಾಂತ ದಾಸ್ ಅವರಿಗೆ 'ಗವರ್ನರ್ ಆಫ್ ದಿ ಇಯರ್' ಗೌರವ ನೀಡಲಾಗಿತ್ತು. 

ಸೆಪ್ಟೆಂಬರ್ ತಿಂಗಳಿಂದ ತರಕಾರಿ ಬೆಲೆ ಇಳಿಕೆ: ಆರ್ ಬಿಐ ಗವರ್ನರ್

ಇನ್ನು ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ಸ್ ರಿಪೋರ್ಟ್ ಕಾರ್ಡ್ 2023 ರಲ್ಲಿ ಶಕ್ತಿಕಾಂತ ದಾಸ್ ಮೊದಲ ಸ್ಥಾನ ಗಳಿಸಿದ್ದರೆ, ಸ್ವಿಟ್ಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಗವರ್ನರ್  ಥಾಮಸ್ ಜೆ ಜೋರ್ಡಾನ್ ಎರಡನೇ ಸ್ಥಾನ ಹಾಗೂ ವಿಯೆಟ್ನಾಂ ಬ್ಯಾಂಕರ್ ನ್ಗುಯೆನ್ ಥಿ ಹಾಂಗ್ ಮೂರನೇ ಸ್ಥಾನ ಗಳಿಸಿದ್ದಾರೆ. 'A'ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ. ಹಾಗೆಯೇ 'F'ವೈಫಲ್ಯದ ಸಂಕೇತವಾಗಿದೆ. 

ಪ್ರಧಾನಿ ಅಭಿನಂದನೆ
ಶಕ್ತಿಕಾಂತ ದಾಸ್ ಅವರಿಗೆ ಸಿಕ್ಕಿರುವ ಈ ವಿಶೇಷ ಮನ್ನಣೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 'ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆಗಳು. ಭಾರತದ ಪಾಲಿಗೆ ಇದು ಹೆಮ್ಮೆಯ ಕ್ಷಣ. ಜಾಗತಿಕ ವೇದಿಕೆಯಲ್ಲಿ ನಮ್ಮ ಹಣಕಾಸಿನ ನಾಯಕತ್ವವನ್ನು ಇದು ಪ್ರತಿಬಿಂಬಿಸಿದೆ. ಅವರ ಸಮರ್ಪಣೆ ಹಾಗೂ ದೂರದೃಷ್ಟಿ ನಮ್ಮ ರಾಷ್ಟ್ರದ ಬೆಳವಣಿಗೆ ಪಯಣವನ್ನು ಇನ್ನಷ್ಟು ಸದೃಢಗೊಳಿಸಲಿದೆ' ಎಂದು ಎಕ್ಸ್ ನಲ್ಲಿ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ರೇಟಿಂಗ್ ಹೇಗೆ ನೀಡಲಾಗುತ್ತದೆ
ಜಗತ್ತಿನ ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಹಣದುಬ್ಬರ ನಿಯಂತ್ರಣ, ಆರ್ಥಿಕ ಅಭಿವೃದ್ಧಿ ಗುರಿಗಳು, ಕರೆನ್ಸಿ ಸ್ಥಿರತೆ ಹಾಗೂ ಬಡ್ಡಿದರವನ್ನು ನಿರ್ವಹಿಸಿದ ರೀತಿಯನ್ನು ಮೌಲ್ಯಮಾಪನ ಮಾಡಿ 'A'ನಿಂದ 'F'ತನಕ ರೇಟಿಂಗ್ ನೀಡಲಾಗುತ್ತದೆ. 

101 ದೇಶಗಳ ಕೇಂದ್ರೀಯ ಬ್ಯಾಂಕ್ ಗವರ್ನರ್ ಗ್ರೇಡಿಂಗ್
ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ 1994ರಿಂದಲೂ 101 ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಗ್ರೇಡಿಂಗ್ ಮಾಡುತ್ತ ಬಂದಿದೆ. ಇದರಲ್ಲಿ ಯುರೋಪಿಯನ್ ಯೂನಿಯನ್, ಪೂರ್ವ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್, ದಿ ಬ್ಯಾಂಕ್ ಆಫ್ ಸೆಂಟ್ರಲ್ ಆಫ್ರಿಕನ್ ಸ್ಟೇಟ್ಸ್ ಹಾಗೂ  ಪಶ್ಚಿಮ ಆಫ್ರಿಕನ್ ರಾಜ್ಯಗಳ ಸೆಂಟ್ರಲ್ ಬ್ಯಾಂಕ್ ಗಳು ಕೂಡ ಸೇರಿವೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್