
ನವದೆಹಲಿ(ಜು.19): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ವಾಗ್ದಾನವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟೀಕಿಸಿದ್ದಾರೆ.
2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 5 ಟ್ರಿಲಿಯನ್ ಡಾಲರ್ ಏನು ಸ್ವರ್ಗದಿಂದ ಬರುತ್ತದೆಯೇ ಎಂದು ಪ್ರಣಬ್ ಪ್ರಶ್ನಿಸಿದ್ದಾರೆ.
ಇದೇ ವೇಳೆ ಯೋಜನಾ ಆಯೋಗವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರವನ್ನೂ ಪ್ರಣಬ್ ಟೀಕಿಸಿದ್ದಾರೆ. ಆರ್ಥಿಕತೆಗೆ ಸುಭದ್ರ ಅಡಿಪಾಯ ಹಾಕಬಲ್ಲ ಸಂಸ್ಥೆಯನ್ನು ರದ್ದುಗೊಳಿಸಿ, ಸದೃಢ ಆರ್ಥಿಕತೆಯನ್ನು ಸಾಧಿಸುವ ಮಾತುಗಳನ್ನಾಡುವುದು ಅಚ್ಚರಿಯ ಸಂಗತಿ ಎಂದು ಅವರು ಹರಿಹಾಯ್ದಿದ್ದಾರೆ.
ದೇಶ ಇಷ್ಟು ಸದೃಢ ಆರ್ಥಿಕ ವ್ಯವಸ್ಥೆಯನ್ನು ಹೊಂದಿರಬೇಕಾದರೆ ಈ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ಕೈಗೊಂಡ ಸುಧಾರಣಾ ಕ್ರಮಗಳೇ ಕಾರಣ ಎಂದು ಮಾಜಿ ರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಈ ದೇಶದಲ್ಲಿ ಐಐಟಿ, ಇಸ್ರೋದಂತ ಅದ್ಭುತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಮುಂದಿನ ಸರ್ಕಾರಗಳು ಅವುಗಳನ್ನು ಪೋಷಿಸಿ ಬೆಳೆಸಿದ ಪರಿಣಾಮ ದೇಶ ಇಂದು ಈ ಸ್ಥಿತಿಗೆ ಬಂದು ನಿಂತಿದೆ ಎಂದು ಪ್ರಣಬ್ ಹೇಳಿದ್ದಾರೆ.
ಯೋಜನಾ ಆಯೋಗವನ್ನೇ ರದ್ದುಪಡಿಸಿರುವ ಪ್ರಸ್ತುತ ಸರ್ಕಾರ, ಸದೃಢ ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.