ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ, ಮತ್ತೊಮ್ಮೆ ತಮ್ಮ ಸೋದರನ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ಅನಿಲ್ ಅಂಬಾನಿ ಒಡೆತನದ ಆರ್‌ಕಾಂ ಕಂಪನಿ ಬಿಡ್ಡಿಂಗ್ ಸಲ್ಲಿಸಲು ನಿರ್ಧರಿಸಿದೆ ಎನ್ನಲಾಗಿದೆ.
ನವದೆಹಲಿ [ಜು.18]: ಇತ್ತೀಚೆಗಷ್ಟೇ ತಮ್ಮ ಸೋದರ ಅನಿಲ್ ಅಂಬಾನಿಗೆ 580 ಕೋಟಿ ರು. ಸಾಲ ನೀಡುವ ಮೂಲಕ ಅವರನ್ನು ಬಂಧನದಿಂದ ಪಾರು ಮಾಡಿದ್ದ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ, ಮತ್ತೊಮ್ಮೆ ತಮ್ಮ ಸೋದರನ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ಅನಿಲ್ ಅಂಬಾನಿ ಒಡೆತನದ ಆರ್‌ಕಾಂ ಕಂಪನಿ ಭರ್ಜರಿ 50000 ಕೋಟಿ ರು. ಸಾಲ ಮಾಡಿಕೊಂಡು, ದಿವಾಳಿಯಿಂದ ತಡೆ ಕೋರಿ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣವು ನಡೆಸಲಿರುವ ಹರಾಜು ಪ್ರಕ್ರಿಯೆ ವೇಳೆ ಮುಕೇಶ್ ಅವರ ಕಂಪನಿ ಬಿಡ್ಡಿಂಗ್ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೇ ಆರ್‌ಕಾಂನ ಸ್ಪೆಕ್ಟ್ರಂ ಅನ್ನು ಖರೀದಿಸಲು ಮುಕೇಶ್‌ರ ಜಿಯೋ ಮುಂದಾಗಿತ್ತಾದರೂ, ಅದಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ. ಇದೀಗ 5ಜಿ ಸೇವೆ ನೀಡಲು ನಿರ್ಧರಿಸಿರುವ ಮುಕೇಶ್ ಅಂಬಾನಿ ಅದಕ್ಕೆ ನೆರವಾಗಬಲ್ಲ ಆರ್‌ಕಾಂ ಕಂಪನಿಯ ಆಸ್ತಿ ಖರೀದಿಗೆ ನಿರ್ಧರಿಸಿದ್ದಾರೆ. ಆಸ್ತಿ ಎಂದರೆ ಆರ್‌ಕಾಂನ ಸ್ಪೆಕ್ಟ್ರಂ, ಟವರ್ ಮೊದಲಾದವುಗಳು ಸೇರಿವೆ. ಆರ್‌ಕಾಂ 18000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದರೆ, 50000 ಕೋಟಿ ರು. ಸಾಲ ಹೊಂದಿದೆ. ಹೀಗಾಗಿ ಎಷ್ಟುಮೊತ್ತಕ್ಕೆ ತಮ್ಮ ಸೋದರನ ಕಂಪನಿಯನ್ನು ಖರೀದಿಸಲು ಮುಕೇಶ್ ಒಲವು ತೋರಿಸುತ್ತಾರೆ ಎಂಬುದು ಇದೀಗ ಕುತೂಹಲದ ವಿಷಯವಾಗಿದೆ.
ಜೊತೆಗೆ ಆರ್‌ಕಾಂನ ಒಡೆತನದಲ್ಲಿರುವ ನವಿ ಮುಂಬೈನಲ್ಲಿ ಧೀರೂಭಾಯ್ ಅಂಬಾನಿ ನಾಲೆಡ್ಜ್ ಸಿಟಿಯನ್ನೂ ಖರೀದಿಸಲು ಮುಕೇಶ್ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇದೊಂದರ ಮೌಲ್ಯವೇ 25000 ಕೋಟಿ ರು.ಗೂ ಹೆಚ್ಚಿದೆ.
ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ
ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ, ಭಾರತ ನಂ.1 ಮತ್ತು ವಿಶ್ವದ 13ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ, 3.62 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಮುಕೇಶ್ ಅವರು ವಿಶ್ವದ 500 ಶ್ರೀಮಂತರ ವ್ಯಕ್ತಿಗಳನ್ನೊಳಗೊಂಡ ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪಟ್ಟಿಯಲ್ಲಿ ವಿಶ್ವದ 13ನೇ ಶ್ರೀಮಂತ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಪಟ್ಟಿಯಲ್ಲಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ 48 (1.4 ಲಕ್ಷ ಕೋಟಿರ ರು), ಎಚ್‌ಸಿಎಲ್ ಅಧ್ಯಕ್ಷ ಶಿವ ನಾಡರ್ 92 (1.01 ಲಕ್ಷ ಕೋಟಿ ರು.), ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಕ್ (96000 ಕೋಟಿ ರು.) 96ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 9.75 ಲಕ್ಷ ಕೋಟಿ ರು. ಹೊಂದಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ವಿಶ್ವದ ನಂಬರ್-1 ಶ್ರೀಮಂತರಾಗಿದ್ದಾರೆ.