ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಭಾರತದ ಮುಂದಿದೆ ಅಗ್ನಿಪರೀಕ್ಷೆ! ವಿಶ್ವ ಆರ್ಥಿಕ ಸಮರ

Published : May 12, 2026, 05:58 PM IST
global issues

ಸಾರಾಂಶ

ಪಶ್ಚಿಮ ಏಷ್ಯಾದ ಯುದ್ಧ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ದೇಶದ ಜನತೆಗೆ 8 ಪ್ರಮುಖ ಸಂದೇಶಗಳನ್ನು ನೀಡಿದ್ದಾರೆ. ಚಿನ್ನದ ಖರೀದಿ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದು, ಈ ನಿರ್ಧಾರಗಳು ದೇಶದ ಆರ್ಥಿಕ ಭವಿಷ್ಯವನ್ನು ಹೇಗೆ ರೂಪಿಸಲಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಇಡೀ ದೇಶಕ್ಕೆ ಪ್ರಧಾನಿಯವರ ಸಂದೇಶ ಬಂದಿದೆ.. ಇದೇನು ನೋಟ್ ಬ್ಯಾನ್ ಥರ ಶಾಕಿಂಗೂ ಅಲ್ಲ, ಲಾಕ್ ಡೌನ್ನಂಥಾ ಗ್ರೌಂಡ್ ಬ್ರೇಕಿಂಗೂ ಅಲ್ಲ.. ಆದ್ರೆ, ಅದರಷ್ಟೇ ಕೌತುಕ ಮೂಡಿಸಿರೋ ವಿಷಯ ಇದು.. ಯುದ್ಧಕಾಲದ ಕಟ್ಟುನಿಟ್ಟಿನ ನಿಯಮಗಳನ್ನ ಶಾಂತಿಕಾಲದಲ್ಲೇ ಪಾಲಿಸಿ ಅಂತ ಪ್ರಧಾನಿ ಮೋದಿ 140 ಕೋಟಿ ಜನರಿಗೆ ಕರೆ ಕೊಟ್ಟಿದ್ದಾರೆ.. ಇದರ ಹಿಂದೆ ಸಾಮಾನ್ಯ ಕಾರಣಗಳಂತೂ ಇರಲ್ಲ.. ಒಂದು ಕಡೆ ಪಶ್ಚಿಮ ಏಷ್ಯಾದ ಯುದ್ಧ, ಇನ್ನೊಂದೆಡೆ ಚಿನ್ನದ ಆಮದಿಗೇ ಖರ್ಚಾಗ್ತಿರೋ ಕೋಟಿಗಟ್ಟಲೆ ಹಣ.. ಅದರ ಜೊತೆಗೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಕುಸೀತಾ ಇರೋ ರೂಪಾಯಿಯ ಮೌಲ್ಯ.. ಇದೆಲ್ಲವನ್ನೂ ನಿಭಾಯಿಸೋಕೆ ಮೋದಿ ಅಷ್ಟ ಸಂದೇಶ ರವಾನಿಸಿದ್ದಾರೆ.. ಹಾಗಾದ್ರೆ ಪ್ರತಿ ಭಾರತೀಯನ ಮನೆಯ ಜೇಬಿನ ಮೇಲೂ ಈ ನಿರ್ಧಾರ ಪರಿಣಾಮ ಬೀರಲಿದೆಯೇ? ಬರೀ ಚಿನ್ನ ಮಾತ್ರವಲ್ಲ, ನಮ್ಮ ದಿನನಿತ್ಯದ ಬದುಕಿನ ಬದಲಾವಣೆಗಳು ದೇಶದ ಭವಿಷ್ಯವನ್ನೇ ಹೇಗೆ ಬದಲಿಸಬಲ್ಲವು? ಇಲ್ಲಿದೆ ನೋಡಿ

ಒಂದು ಪುಟ್ಟ ನೀರಿನ ಹಾದಿ ಇಡೀ ಜಗತ್ತನ್ನೇ ಮಂಡಿಯೂರಿಸಬಲ್ಲದು ಅಂದ್ರೆ ನಂಬ್ತೀರಾ? ಇರಾನ್ ಮತ್ತು ಓಮನ್ ನಡುವೆ ಇರೋ ಕೇವಲ 33 ಕಿಲೋಮೀಟರ್ ಅಗಲದ ಹೊರ್ಮುಜ್ ಜಲಸಂಧಿ ಸದ್ಯಕ್ಕೆ ಇಡೀ ಭೂಮಿಯ ಮೇಲೆ ಅತಿ ಹೆಚ್ಚು ಬೆಲೆ ಬಾಳೊ ಜಾಗ. ಯಾಕಂದ್ರೆ, ಇಡೀ ಜಗತ್ತಿಗೆ ಬೇಕಾದ ಶೇ. 20ರಷ್ಟು ತೈಲ ದಿನಾಲು ಇದೇ ಹಾದಿಯಲ್ಲಿ ಹೋಗಬೇಕು. ಫೆಬ್ರವರಿಯಲ್ಲಿ ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿಯಾದ ಬೆನ್ನಲ್ಲೇ, ಇರಾನ್ ಈ ಹಾದಿಯನ್ನೇ ಬಂದ್ ಮಾಡ್ತೀವಿ ಅಂತ ಗುಡುಗಿದೆ. ಹಡಗುಗಳ ಮೇಲೆ ದಾಳಿ ಶುರುವಾದ ಮೇಲೆ ಇನ್ಶೂರೆನ್ಸ್ ಕಂಪನಿಗಳು ಕೈ ಎತ್ತಿವೆ, ಶಿಪ್ಪಿಂಗ್ ಚಾರ್ಜ್ ಗಗನಕ್ಕೇರಿದೆ.. ಇದರ ಪರಿಣಾಮ, ಈಗ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದೆ.. ಇದು ಬರೀ ಬೆಲೆ ಏರಿಕೆಯಲ್ಲ, ಜಗತ್ತಿನ ಎಂಜಿನ್ ಅನ್ನು ಸ್ತಬ್ದಗೊಳಿಸಬಲ್ಲ ಮಹಾ ಆರ್ಥಿಕ ಭೂಕಂಪದ ಮುನ್ಸೂಚನೆ.

ಹೊರ್ಮುಜ್ ಕಿಚ್ಚು ಭಾರತದ ಮಧ್ಯಮ ವರ್ಗಕ್ಕೆ ತಟ್ಟಿದ್ದು ಹೇಗೆ?

ಭಾರತಕ್ಕೆ ಈ ಹೊರ್ಮುಜ್ ಬಿಕ್ಕಟ್ಟು, ನಮ್ಮ ಮನೆಯ ಅಡುಗೆ ಮನೆಯಿಂದ ಹಿಡಿದು ಕಂಪನಿಗಳ ಲಾಭದವರೆಗೂ ತಟ್ಟುವ ಪೆಟ್ಟು. ಯಾಕಂದ್ರೆ ನಾವು ಬಳಸೋ ಶೇ. 90ರಷ್ಟು ತೈಲ ವಿದೇಶದಿಂದ ಬರಬೇಕು, ಅದರಲ್ಲೂ ಶೇ. 40ರಷ್ಟು ಇದೇ ಅಪಾಯಕಾರಿ ಹಾದಿಯಲ್ಲಿ ಸಾಗಬೇಕು. ದಿನಕ್ಕೆ ಬರೋಬ್ಬರಿ 1700 ಕೋಟಿ ರೂಪಾಯಿಯನ್ನು ನಾವು ಬರೀ ಇಂಧನ ಆಮದಿಗೇ ಸುರಿತಾ ಇದೀವಿ. 2025ರಲ್ಲೇ ಶುರುವಾದ ಈ ಕಿಚ್ಚು, 2026ರ ಹೊತ್ತಿಗೆ ಜಗತ್ತಿನ ಆರ್ಥಿಕತೆಯನ್ನೇ ಪಾತಾಳಕ್ಕೆ ತಳ್ಳುವ ಭಯ ಹುಟ್ಟಿಸಿದೆ. ಸರಕಾರ ಒಂದೇ ಈ ಹೊರೆಯನ್ನ ತಡೆಯೋಕೆ ಸಾಧ್ಯವಿಲ್ಲ ಅನ್ನೋದು ಕಹಿಸತ್ಯ.. ಅದನ್ನೇ ಮೋದಿಯವರು ದೇಶದ ಮುಂದೆ ಹೇಳಿದಾರೆ.. ಅಷ್ಟ ಸಂದೇಶದ ಮೂಲಕ ದೇಶಕ್ಕೊಂದು ಎಚ್ಚರಿಕೆ ವಿಧಿಸಿದ್ದಾರೆ.

ಮೋದಿಯವರು ಕೊಟ್ಟಿರೋ ಎಂಟು ಸಂದೇಶದಳಲ್ಲಿ ಮೊದಲನೆದು, ನಮ್ಮ ಓಡಾಟದ ಶೈಲಿಯನ್ನೇ ಬದಲಿಸಿಕೊಳ್ಳೊದು. ನಾವು ರೋಡ್ ಮೇಲೆ ಸುಡೋ ಪ್ರತಿಯೊಂದು ಲೀಟರ್ ಪೆಟ್ರೋಲ್ ಅಂದ್ರೆ, ಅದು ದೇಶದ ತಿಜೋರಿಯಿಂದ ಹೊರಹೋಗ್ತಿರೋ ಡಾಲರ್ ಅಂತಲೇ ಅರ್ಥ. ಇದಕ್ಕಾಗಿಯೇ ಮೋದಿ ಅವರು ಮೆಟ್ರೋ ಬಳಸಿ, ಕಾರ್-ಪೂಲಿಂಗ್ ಮಾಡಿ ಅಥವಾ ಇವಿಗೆ ಶಿಫ್ಟ್ ಆಗಿ ಅಂತ ಕೇಳ್ಕೊಂಡಿದ್ದಾರೆ. ಇನ್ನು ವರ್ಕ್ ಫ್ರಮ್ ಹೋಮ್ ಅನ್ನೋದು ಬರೀ ಕೋವಿಡ್ ಕಾಲದ ನೆನಪಲ್ಲ, ಅದು ಇವತ್ತಿನ ಆರ್ಥಿಕ ಯುದ್ಧದ ಅಸ್ತ್ರ. ಬೆಂಗಳೂರು, ಮುಂಬೈ ಥರದ ಸಿಟಿಗಳಲ್ಲಿ ಒಂದು 15% ಜನ ಮೆಟ್ರೋ ಅಥವಾ ಮನೆಯಿಂದಲೇ ಕೆಲಸ ಮಾಡೋಕೆ ಶುರು ಮಾಡಿದ್ರೂ, ದೇಶದ ಕೋಟ್ಯಂತರ ರೂಪಾಯಿ ಉಳಿಯುತ್ತೆ. ಇದು ಬರೀ ಪರಿಸರ ಉಳಿಸೋದಷ್ಟೇ ಅಲ್ಲ, ರೂಪಾಯಿಯ ಮೌಲ್ಯ ಕುಸಿಯದಂತೆ ತಡೆಯೋ ಗಣಿತ.

ಈಗೀಗ ಡಾಲರ್ ಎದುರು ರೂಪಾಯಿ ಜಾರಿ ಬೀಳ್ತಾ ಇದೆ.. ಸಾರ್ವಕಾಲಿಕ ಕುಸಿತವನ್ನೂ ಕಂಡಿತ.. ಇದನ್ನ ಸರ್ಕಾರ ಸರಿ ಮಾಡೋದು ದೊಡ್ಡ ಮ್ಯಾಟ್ರೇನೂ ಅಲ್ಲ. ಬಟ್, ಮೋದಿ ಸರ್ಕಾರ, ರೂಪಾಯಿ ತಾನೇ ತಾನಾಗಿ ಬಲವೃದ್ಧಿ ಸಾಧಿಸಬೇಕು ಅಂತ ಕಾಯ್ತಾ ಇದೆ ಅಷ್ಟೆ. ಹಾಗಾಗ್ಬೇಕು ಅಂದ್ರೆ, ದೇಶದ 140 ಕೋಟಿ ಜನ ಮೋದಿ ಸಂದೇಶಗಳನ್ನ ಪಾಲಿಸಬೇಕಿದೆ.. ಹೀಗಿರ್ಬೇಕಾದ್ರೆ, ಜಗತ್ತಿನ ಸ್ಥಿತಿ ಏನಾಗಿದೆ ಗೊತ್ತಾ? ಈಗ ಅತಿ ಮುಖ್ಯವಾದ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನ ಮಾಡೋಣ. ಪ್ರಶ್ನೆ ಇಷ್ಟೇ. ಇಷ್ಟ್ರಲ್ಲೇ ಪೆಟ್ರೋಲ್ ಡೀಸಲ್ ಬೆಲೆ ಜಾಸ್ತಿಯಾಗುತ್ತಾ? ಪೆಟ್ರೋಲ್ ನಮ್ಮ ಜೇಬನ್ನೇ ಸುಡುತ್ತಾ?

ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಮಾಡ್ತಿದ್ದ ವರ್ಕ್ ಫ್ರಮ್ ಹೋಮ್ ಈಗ ದೇಶವನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡೋ ಬ್ರಹ್ಮಾಸ್ತ್ರವೇ ಆಗಿ ಬದಲಾಗಿದೆ.. ಯಾವುದೋ ಒಂದು ಮೀಟಿಂಗ್‌ಗೆ ಬೆಂಗಳೂರಿಂದ ಮುಂಬೈಗೆ ಫ್ಲೈಟ್ ಹತ್ತಿ ಹೋಗೋ ಬದಲು ಅದನ್ನ ಜೂಮ್ ಕಾಲ್‌ನಲ್ಲಿ ಮುಗಿಸಿದ್ರೆ ಎಷ್ಟು ಇಂಧನ ಮತ್ತು ವಿದೇಶಿ ವಿನಿಮಯ ಉಳಿಯುತ್ತಲ್ವಾ? ಈ ಐಟಿ ಮತ್ತು ಕಾರ್ಪೊರೇಟ್ ಲೋಕದ ಮಿಲಿಯನ್ ಗಟ್ಟಲೆ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡೋಕೆ ಶುರು ಮಾಡಿದ್ರೆ, ಅದರ ರಿಸಲ್ಟ್ ಮುಂದಿನ ವರ್ಷವಲ್ಲ, ಕೇವಲ ಒಂದೆರಡು ವಾರಗಳಲ್ಲೇ ದೇಶದ ತಿಜೋರಿಯಲ್ಲಿ ಕಾಣ್ಸುತ್ತೆ.. ಇದು ಬರೀ ಕೆಲಸದ ಶೈಲಿ ಬದಲಿಸೋದಕ್ಕಿಂತಾ ಹೆಚ್ಚಾಗಿ, ನಮ್ಮ ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುತ್ತೆ.

ಅಂದ ಹಾಗೆ, ಇಡೀ ದೇಶದಲ್ಲಿ ಚರ್ಚೆಯಾಗಿದ್ದು, ಈ ಎರಡು ಸಂಗತಿಗಳಲ್ಲ.. ಇದಕ್ಕಿಂತಾ ಮುಖ್ಯವಾಗಿ, ದೇಶವಾಸಿಗಳ ಗಮನ ಸೆಳೆದಿದ್ದು ಈ ಮಾತು. ಮೋದಿ ಸಂದೇಶ 3 ಖರೀದಿಸಬೇಡಿ.. ಇನ್ನೊಂದು ವರ್ಷ ಖರೀದಿಸಲೇಬೇಡಿ.. ಮನೇಲಿ ಯಾವುದೇ ಫಂಕ್ಷನ್ ಆಗ್ಲಿ, ಸಮಾರಂಭವಾಗ್ಲಿ, ಚಿನ್ನವನ್ನ ಮಾತ್ರ ಖರೀದಿಸಲೇಬೇಡಿ. ಈ ಮಾತನ್ನ ಮೋದಿ ಅವರು ಹೇಳಿದ್ದೇ ತಡ, ಶುರುವಾಯ್ತು ನೋಡಿ ಸೆನ್ಸೇಷನ್. ಅಂದ ಹಾಗೆ ಮೋದಿ ಅವರೇನು ಚಿನ್ನ ಖರೀದಿಸೋದೇ ಬೇಡ ಅಂತ ಹೇಳ್ಬಿಟ್ಟಿದಾರಾ? ಇನ್ಮೇಲೆ ಯಾರೂ ಕೂಡ ಬಂಗಾರ ಕೊಂಡುಕೊಳ್ಳಲೇ ಬಾರದಾ? ಹೂಹು. ಅದರ ಅರ್ಥ ಹಾಗಲ್ಲ. ಮತ್ತೇನು? ನಿಮಗಿನ್ನೊಂದು ಸಂಗತಿ ಗೊತ್ತಿರ್ಲಿ, ಯಾವಾಗ ಆರೇಳು ತಿಂಗಳ ಹಿಂದೆ, ಬಂಗಾರದ ಬೆಲೆ ಜಿಂಕೆಯ ಹಾಗೆ ಜಿಗಿಯೋಕೆ ಶುರುವಾಯ್ತೋ, ಆಗಿಂದಲೇ ಬಂಗಾರ ಖರೀದಿಸೋರ ಸಂಖ್ಯೆಯೂ ಕಡಿಮೆಯಾಗಿದೆ. ಈಗ ಮೋದಿ ಅವರೇ ಆ ಮಾತು ಹೇಳಿರೋದ್ರಿಂದ, ಈ ಮಾತಿಗೆ ಮತ್ತಷ್ಟು ತೂಕ ಬಂದಂಗಾಗಿದೆ. ಅಷ್ಟಕ್ಕೂ ಬಂಗಾರ ಕೊಂಡ್ಕೊಬೇಡಿ ಅಂತ ಹೇಳೋ ಮೂಲಕ, ಮೋದಿ ಅವರು ಏನು ನಿಭಾಯಿಸೋಕೆ ಹೊರಟಿದ್ದಾರೆ? ಇಲ್ಲಿಗೇ ಈ ಕತೆ ನಿಲ್ಲೋದಿಲ್ಲ ವೀಕ್ಷಕರೇ. ಮೋದಿ ಅವರ ಸಂದೇಶ ದೇಶದಲ್ಲಿರೋ ಎಲ್ಲರಿಗೂ ಅಲ್ಲ. ಮತ್ಯಾರಿಗೆ?

ಮೋದಿ ಅವರಾಡಿದ ಒಂದೊಂದು ಮಾತು ಕೂಡ, ದೇಶದ ಭವಿಷ್ಯನ ಡಿಸೈಡ್ ಮಾಡಲಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಅಷ್ಟಕ್ಕೂ, ಈ ನಿರ್ಣಯಗಳ ಹಿಂದಿರೋ ಅಸಲಿ ಉದ್ದೇಶ ಏನು? ಅದರ ಬಗ್ಗೆ ಮಾತಾಡೋ ಮುಂಚೆ, ಒಂದು ಸ್ಮಾಲ್ ಬ್ರೇಕ್. ಭಾರತ ಒಂದೇ ಅಲ್ಲ. ಅರ್ಧಕ್ಕರ್ಧ ಜಗತ್ತೇ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಒದ್ದಾಡ್ತಾ ಇದೆ. ಕೆಲವು ರಾಷ್ಟ್ರಗಳು, ಈಗಾಗ್ಲೇ ಕುಸಿಯೋಕೆ ಆರಂಭಿಸಿವೆ. ಆದ್ರೆ ಭಾರತ, ಈ ಕ್ಷಣಕ್ಕೂ ಗಟ್ಟಿಯಾಗಿ ನಿಂತಿದೆ.

ಮುಂದೇನು?

ಭಾರತದ ಎಕಾನಮಿ ಸದ್ಯಕ್ಕೆ ಸುಭದ್ರವಾಗಿದೆ. ನಮ್ಮ ಐಟಿ ಎಕ್ಸ್‌ಪೋರ್ಟ್ ಚೆನ್ನಾಗಿದೆ, ವಿದೇಶದಲ್ಲಿರೋ ಭಾರತೀಯರು ಕಳಿಸೋ ದುಡ್ಡು ದೊಡ್ಡ ಮಟ್ಟದಲ್ಲಿದೆ, ರಿಸರ್ವ್ ಬ್ಯಾಂಕ್ ಹತ್ತಿರ ಹಣದ ದಾಸ್ತಾನು ಕೂಡ ಗಟ್ಟಿಯಾಗಿದೆ.. ಆದ್ರೆ, ಹೊರಗಿನಿಂದ ಬರ್ತಿರೋ ಹೊಡೆತಗಳು ಒಂದೆರಡಲ್ಲ. ನಾವು ಎಷ್ಟು ಸಂಪಾದಿಸ್ತೀವಿ ಅನ್ನೋದಕ್ಕಿಂತ ಹೆಚ್ಚಾಗಿ, ಕಚ್ಚಾ ತೈಲ ಮತ್ತು ಚಿನ್ನಕ್ಕೆ ಎಷ್ಟು ಖರ್ಚು ಮಾಡ್ತೀವಿ ಅನ್ನೋದು ಈಗ ದೇಶದ ಭವಿಷ್ಯನಾ ಡಿಸೈಡ್ ಮಾಡಲಿದೆ.

ವೀಕ್ಷಕರೇ ನಿಮಗೆ ಗೊತ್ತಾ? ಹೊರಗಡೆ 3000 ರೂಪಾಯಿ ಇರೋ ಒಂದು ಚೀಲ ಗೊಬ್ಬರನ ನಮ್ಮ ದೇಶದ ರೈತರಿಗೆ ಸರಕಾರ ಕೇವಲ 300 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗೋ ಹಾಗೆ ಮಾಡ್ತಿದೆ. ಇನ್ನು ಪೆಟ್ರೋಲ್-ಡೀಸೆಲ್ ರೇಟ್ ಸಿಕ್ಕಾಪಟ್ಟೆ ಜಾಸ್ತಿ ಆದ್ರೂ ನಾವು ರೋಡ್ ಮೇಲೆ ಆರಾಮಾಗಿ ಓಡಾಡಲಿ ಅಂತ ಕಳೆದ ಹತ್ತು ವಾರಗಳಲ್ಲಿ ಸರಕಾರ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಯನ್ನ ತನ್ನ ಜೇಬಿನಿಂದ ಭರಿಸಿದೆ. ಆದ್ರೆ ನೆನಪಿಡಿ, ಈ ಸಬ್ಸಿಡಿ ಅನ್ನೋದು ಮ್ಯಾಜಿಕ್ ಅಲ್ಲ, ಅದಕ್ಕೂ ಒಂದು ಲಿಮಿಟ್ ಇದೆ. ಸರಕಾರದ ಖಜಾನೆಯಲ್ಲಿರೋ ದುಡ್ಡು ಕರಗ್ತಾ ಹೋದ್ರೆ ದೇಶ ಅಪಾಯಕ್ಕೆ ಸಿಲುಕುತ್ತೆ. ಅದಕ್ಕಾಗಿಯೇ ಮೋದಿ ಅವರು ನೇರವಾಗಿ ಜನರ ಹತ್ತಿರ ಬಂದಿದ್ದಾರೆ. ಸಂದೇಶ ನೀಡಿದ್ದಾರೆ.

ಮೋದಿಯವರ ಈ 8 ಮಂತ್ರಗಳು ಇವತ್ತಿನ ಬಿಕ್ಕಟ್ಟಿಗೆ ಪರಿಹಾರವಲ್ಲ. ಮುಂದಿನ ದಶಕದಲ್ಲಿ ಜಗತ್ತು ಎದುರಿಸಲಿರುವ ಭೀಕರ ಆರ್ಥಿಕ ಸುನಾಮಿಗೆ ನಾವು ಕಟ್ಟಿಕೊಳ್ಳುತ್ತಿರುವ ಮುನ್ನೆಚ್ಚರಿಕೆಯ ಕೋಟೆ. ಒಂದು ಕಡೆ ಪೆಟ್ರೋಲ್ ಬಿಟ್ಟು ಇವಿಗೆ ಶಿಫ್ಟ್ ಆಗೋಣ ಅಂದ್ರೆ ಅದಕ್ಕೆ ಬೇಕಾದ ಲಿಥಿಯಂ, ಕೋಬಾಲ್ಟ್‌ನಂತಹ ಖನಿಜಗಳಿಗೂ ನಾವು ವಿದೇಶಗಳನ್ನೇ ನಂಬಬೇಕಿದೆ. ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದಾಗಿ ನಮ್ಮ ಬೆಳೆಗಳೂ ಕೈಕೊಡುತ್ತಿವೆ.. ಮೋದಿ ಅವರೇನೋ ಜನಸಾಮಾನ್ಯರ ಹತ್ತಿರ ಬಂದು ಉಳಿತಾಯ ಮಾಡಿ ಅಂತ ಕೇಳ್ತಿರೋದು ಕಹಿಸತ್ಯವನ್ನ ಬಿಚ್ಚಿಡ್ತಿದೆ.. ಅದೇನಂದ್ರೆ, ಸರಕಾರ ಒಂದರಿಂದಲೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ ಅನ್ನೋದು. ಕೋವಿಡ್ ಕಾಲದಲ್ಲಿ ಮಾಸ್ಕ್ ಧರಿಸೋದು ನಮ್ಮ ಜವಾಬ್ದಾರಿಯಾಗಿದ್ದರೂ, ವ್ಯಾಕ್ಸಿನ್ ಕೊಡೋದು ಸರಕಾರದ ಕೆಲಸವಾಗಿತ್ತು.. ಹಾಗೆಯೇ ಇಲ್ಲಿ ನಾವು ನಮ್ಮ ಬಳಕೆನಾ ನಾವೇ ನಿಯಂತ್ರಿಸಬೇಕಿದೆ.. ಜನರ ಇಚ್ಛಾಶಕ್ತಿ, ಜೊತೆಗೆ ಸರಕಾರ ಒಟ್ಟಾಗಿ ಹೆಜ್ಜೆ ಹಾಕಿದ್ರೆ ಮಾತ್ರ ಗೆಲ್ಲಬಹುದಾದ ದೊಡ್ಡ ಆರ್ಥಿಕ ಸಮರ ಇದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ; ಬಡವರ ಲೋಕಲ್ ಎಣ್ಣೆ ಶೇ.20 ದುಬಾರಿ, ಶ್ರೀಮಂತರ ಬ್ರ್ಯಾಂಡ್‌ಗಳ ದರ ಇಳಿಕೆ!
ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!