
ಕಷ್ಟದ ಕಾಲಕ್ಕೆ ಹಣ ಸೇಫ್ ಆಗಿ ಇರಬೇಕು ಅಂತ ಬಯಸುವವರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಬೆಸ್ಟ್. ಇದರಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಅಂತ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಅನ್ನೋದು ಪೋಸ್ಟ್ ಆಫೀಸ್ ನೀಡುವ ಒಂದು ಸಣ್ಣ ಉಳಿತಾಯ ಯೋಜನೆ. ಶೇರು ಮಾರುಕಟ್ಟೆಯ ಏರಿಳಿತಗಳು ಇದರ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಮಧ್ಯಮ ಅವಧಿಗೆ ಹಣವನ್ನು ಸೇಫ್ ಆಗಿ ಇಡಲು ಇದು ಬೆಸ್ಟ್. ನೀವು ಕೇವಲ 1,000 ರೂಪಾಯಿಯಿಂದ ಹೂಡಿಕೆ ಶುರು ಮಾಡಬಹುದು. ಆಮೇಲೆ 100 ರೂಪಾಯಿ ಲೆಕ್ಕದಲ್ಲಿ ಎಷ್ಟು ಬೇಕಾದರೂ ಹಣ ಹಾಕಬಹುದು. ಇದಕ್ಕೆ ಗರಿಷ್ಠ ಮಿತಿ ಇಲ್ಲ. ಆದರೆ, ಈ ಸ್ಕೀಮ್‌ನಲ್ಲಿ ಹಾಕಿದ ಹಣವನ್ನು 5 ವರ್ಷಗಳ ಮೆಚ್ಯೂರಿಟಿ ಅವಧಿಯವರೆಗೆ ಹಾಗೇ ಬಿಡಬೇಕಾಗುತ್ತದೆ.
ಸದ್ಯಕ್ಕೆ NSC ಸ್ಕೀಮ್‌ನಲ್ಲಿ ವರ್ಷಕ್ಕೆ ಶೇ. 7.7 ರಷ್ಟು ಬಡ್ಡಿ ಸಿಗುತ್ತಿದೆ. ಇದರಲ್ಲಿ ಚಕ್ರಬಡ್ಡಿಯ ಲಾಭ ಕೂಡ ಇರುತ್ತೆ. ಆದರೆ, ಬಡ್ಡಿ ಹಣವನ್ನು ಮಧ್ಯದಲ್ಲಿ ಕೊಡಲ್ಲ, 5 ವರ್ಷದ ಮೆಚ್ಯೂರಿಟಿ ನಂತರ ಅಸಲಿನ ಜೊತೆ ಸೇರಿಸಿ ಕೊಡ್ತಾರೆ. ಉದಾಹರಣೆಗೆ, ನೀವು 5 ಲಕ್ಷ ರೂಪಾಯಿಯನ್ನು 5 ವರ್ಷಕ್ಕೆ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಟೈಮ್‌ನಲ್ಲಿ ಸುಮಾರು 7,24,517 ರೂ. ಸಿಗುತ್ತೆ. ಅಂದರೆ, ನಿಮ್ಮ 5 ಲಕ್ಷದ ಮೇಲೆ 2,24,517 ರೂ. ಬಡ್ಡಿ ಸಿಕ್ಕಂತಾಗುತ್ತೆ. ಸರ್ಕಾರವೇ ಬಡ್ಡಿ ದರವನ್ನು ನಿರ್ಧರಿಸುವುದರಿಂದ, ಮುಂದೆ ಇದು ಬದಲಾಗುವ ಸಾಧ್ಯತೆಯೂ ಇರುತ್ತೆ.
NSC ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಟ್ಯಾಕ್ಸ್ ಬೆನಿಫಿಟ್ ಕೂಡ ಸಿಗುತ್ತೆ. ಹಳೆಯ ತೆರಿಗೆ ಪದ್ಧತಿ (Old Tax Regime) ಆಯ್ಕೆ ಮಾಡಿಕೊಂಡವರು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂ. ವರೆಗೆ ವಿನಾಯಿತಿ ಪಡೆಯಬಹುದು. ಪ್ರತಿ ವರ್ಷ ಬರುವ ಬಡ್ಡಿಯನ್ನು ಮತ್ತೆ ಹೂಡಿಕೆ ಅಂತಲೇ ಪರಿಗಣಿಸುತ್ತಾರೆ. ಹಾಗಾಗಿ, ಮೊದಲ ನಾಲ್ಕು ವರ್ಷದ ಬಡ್ಡಿಯನ್ನು 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಬಳಸಿಕೊಳ್ಳಬಹುದು. ಆದರೆ, NSC ಬಡ್ಡಿಗೆ ಅಂತಲೇ ಪ್ರತ್ಯೇಕ ತೆರಿಗೆ ವಿನಾಯಿತಿ ಇಲ್ಲ ಅನ್ನೋದನ್ನು ನೆನಪಿಡಿ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿರುವ ಆಸ್ತಿ ಮತ್ತು ಹೂಡಿಕೆಗಳ ಪಟ್ಟಿಯಲ್ಲಿ NSC ಕೂಡ ಇದೆ. 2019ರ ಚುನಾವಣೆ ಟೈಮ್‌ನಲ್ಲಿ, ಈ ಸ್ಕೀಮ್‌ನಲ್ಲಿ 7.61 ಲಕ್ಷ ರೂ. ಇರುವುದಾಗಿ ಮೋದಿ ಹೇಳಿದ್ದರು. ಆ ಲೆಕ್ಕದಲ್ಲಿ ನೋಡಿದರೆ, ಈಗ ಆ ಮೊತ್ತ ಸುಮಾರು 9 ಲಕ್ಷ ರೂ. ಆಗಿರಬಹುದು. ಯಾವುದೇ ರಿಸ್ಕ್ ಇಲ್ಲದೆ ಒಳ್ಳೆ ರಿಟರ್ನ್ಸ್ ಬೇಕು ಅನ್ನೋರಿಗೆ ಇದು ಸೂಪರ್ ಆಪ್ಷನ್. ಈ ಸ್ಕೀಮ್‌ನಲ್ಲಿ ಹಣ ಹಾಕುವ ಮುನ್ನ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.