PM Kisan: ರೈತರಿಗೆ ಶುಭ ಸಮಾಚಾರ; ನಾಳೆ ಖಾತೆಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ?

By Suvarna News  |  First Published May 30, 2022, 6:05 PM IST

*ಆನ್ ಲೈನ್ ನಲ್ಲಿ ಫಲಾನುಭವಿ ಪಟ್ಟಿ ಚೆಕ್ ಮಾಡಬಹುದು
*ರೈತರ ಖಾತೆಗೆ ನಾಲ್ಕು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರದಿಂದ 2000ರೂ.
*ಈ ಯೋಜನೆಯಡಿ ರೈತರಿಗೆ  ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ
*ಇ -ಕೆವೈಸಿ ಪೂರ್ಣಗೊಳಿಸಲು ಮೇ 31 ಅಂತಿಮ ಗಡುವು


ನವದೆಹಲಿ (ಮೇ 30):  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಅಥವಾ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ (Central Government) ನಾಳೆ (ಮೇ 31) ರೈತರ ಖಾತೆಗಳಿಗೆ ಜಮೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಸರ್ಕಾರದಿಂದ ನಾಲ್ಕು ತಿಂಗಳಿಗೊಮ್ಮೆ ಸಿಗುವ ಸಹಾಯಧನದ ನಿರೀಕ್ಷೆಯಲ್ಲಿ ಕುಳಿತಿರುವ ರೈತರ ಕೈಗೆ ಶೀಘ್ರದಲ್ಲೇ ಹಣ ಸೇರಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮುಖಾಂತರ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ (Farmers) ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಈ ರೀತಿ ಇಲ್ಲಿಯ ತನಕ ಸರ್ಕಾರ 10 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ರೀತಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಮುನ್ನ ಕೇಂದ್ರ ಸರ್ಕಾರ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. 

Tap to resize

Latest Videos

PM KISAN Samman Nidhi:ಮೇ 31ರೊಳಗೆ ಈ ಕೆಲ್ಸ ಮಾಡದಿದ್ರೆ ಕೇಂದ್ರ ಸರ್ಕಾರ ರೈತರ ಖಾತೆಗೆ ಹಣ ಹಾಕಲ್ಲ!

ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಈ ಯೋಜನೆಯ ಪ್ರಯೋಜನ ಪಡೆಯುವ ರೈತ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು. ಇವೆರಡರ ಹೊರತಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಅರ್ಹ ರೈತರಿಗೆ ಎಸ್ ಎಂಎಸ್ ಅಲರ್ಟ್ ಕಳುಹಿಸುತ್ತವೆ. 

ಆನ್ ಲೈನ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ.
ಹಂತ 2: ಮುಖಪುಟದಿಂದ ನಿಮಗೆ ರೈತರ ಕಾರ್ನರ್ (Farmers Corner) ಎಂಬ ಪ್ರತ್ಯೇಕ ವಿಭಾಗ ಕಾಣಿಸುತ್ತದೆ.
ಹಂತ 3: ರೈತರ ಕಾರ್ನರ್ ವಿಭಾಗದಲ್ಲಿ 'ಫಲಾನುಭವಿ ಸ್ಥಿತಿ' (Beneficiary Status) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲವೇ ನೀವು ನೇರವಾಗಿ https://pmkisan.gov.in/BeneficiaryStatus.aspx ಲಿಂಕ್ ಗೆ ಭೇಟಿ ನೀಡಬಹುದು.
ಹಂತ 5: ಈಗ ನೀವು ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ -ಇವುಗಳಲ್ಲಿ ಯಾವುದಾದರೂ ಒಂದು ಮಾಹಿತಿಯನ್ನು ಆಯ್ಕೆ ಮಾಡಿ ಭರ್ತಿ ಮಾಡಿ.
ಹಂತ 6: ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ  'ಡೇಟಾ ಪಡೆಯಿರಿ' (Data option) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಫಲಾನುಭವಿ ಸ್ಥಿತಿ ಬಗ್ಗೆ ಮಾಹಿತಿ ಸಿಗುತ್ತದೆ.
ನೀವು ಪಿಎಂ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ್ದರು ಕೂಡ ಒಂದು ವೇಳೆ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಸರ್ಕಾರಕ್ಕೆ ನೇರವಾಗಿ ದೂರು ನೀಡಬಹುದು.

PM KISAN: ರೈತರಿಗೆ ಮತ್ತೆ ಗುಡ್‌ನ್ಯೂಸ್‌, eKYC ಮಾಡದಿದ್ದರೆ ಹಣ ಖಾತೆಗೆ ಬರಲ್ಲ, ಹೀಗೆ ಆಧಾರ್ ಲಿಂಕ್ ಮಾಡಿ!

ಇ-ಕೆವೈಸಿ ಪೂರ್ಣಗೊಳಿಸಲು ಮೇ 31 ಗಡುವು
ಪಿಎಂ-ಕಿಸಾನ್ ಯೋಜನೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಾರಂಭಿಸಿದ ಅನೇಕ ಸರ್ಕಾರ ಬೆಂಬಲಿತ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ.ದೇಶದ ರೈತರ ಏಳಿಗೆಗಾಗಿ ಮತ್ತು ಅವರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಇದನ್ನು ಪ್ರಾರಂಭಿಸಲಾಗಿದೆ. ವರದಿಗಳ ಪ್ರಕಾರ ರೈತ ಕುಟುಂಬಗಳಿಗೆ ನೆರವು ನೀಡಲು 2022ನೇ ಹಣಕಾಸು ಸಾಲಿನಲ್ಲಿ ಈ ತನಕ ಕೇಂದ್ರ ಸರ್ಕಾರ 1.80 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು.ಈ ಯೋಜನೆಯು ಆರಂಭದಲ್ಲಿ 2 ಹೆಕ್ಟೇರ್‌ವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMFs) ಉದ್ದೇಶಿಸಲಾಗಿತ್ತು, ಆದರೆ 01.06.2019 ರಿಂದ ಜಾರಿಗೆ ಬರುವಂತೆ,ಎಲ್ಲಾ ಭೂಹಿಡುವಳಿ ರೈತರನ್ನು ಒಳಗೊಳ್ಳಲು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಪಿಎಂ-ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ರೈತರು ಇ-ಕೆವೈಸಿ ಪೂರ್ಣಗೊಳಿಸೋದು ಅಗತ್ಯ. ಇ-ಕೆವೈಸಿ ಪೂರ್ಣಗೊಳಿಸಲು ಮೇ 31,  2022 ಅಂತಿಮ ಗಡುವು. 


 

click me!