
ಮುಂಬೈ: ಷೇರು ಮಾರುಕಟ್ಟೆಯಲ್ಲಿ ತಾಳ್ಮೆಯಿದ್ರೆ ಕೋಟ್ಯಧಿಪತಿಗಳಾಗಬಹುದು ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಸರಿಯಾದ ಷೇರು ಖರೀದಿ ಮತ್ತು ಅವುಗಳ ಸರಿಯಾದ ನಿರ್ವಹಣೆಯಿಂದ ಕಡಿಮೆ ಸಮಯದಲ್ಲಿ ಅತ್ಯಧಿಕ ಹಣ ಗಳಿಸಬಹುದು. ಕಡಿಮೆ ಸಮಯದಲ್ಲಿ ಉತ್ತಮ ರಿಟರ್ನ್ ನೀಡುವ ಹಲವು ಮಲ್ಟಿಬ್ಯಾಗರ್ ಷೇರುಗಳಿವೆ. ಈ ಮಲ್ಟಿಬ್ಯಾಗರ್ ಷೇರುಗಳು ಡಿಮೆ ಅವಧಿಯಲ್ಲಿ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುತ್ತವೆ. ಅಂತಹ ಮಲ್ಟಿಬ್ಯಾಗರ್ ಷೇರುಗಳಲ್ಲಿ ಪಿಕಾಡಿಲಿ ಅಗ್ರೋ ಇಂಡಸ್ಟ್ರೀಸ್ ಸಹ ಒಂದಾಗಿದೆ. ಈ ಷೇರು ಕೇವಲ 5 ವರ್ಷದಲ್ಲಿ ಹೂಡಿಕೆದಾರರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದೆ. 2020ರಲ್ಲಿ ಈ ಕಂಪನಿಯ ಷೇರುಗಳನ್ನು ಖರೀದಿಸಿದ್ದರೆ, 2025ರಲ್ಲಿ ನಿಮಗೆ 142ಪಟ್ಟು ಲಾಭವನ್ನು ನೀಡಿವೆ ಅಂದ್ರೆ ನಂಬಲೇಬೇಕು.
2020 ಮಾರ್ಚ್ 27ರಂದು ಪಿಕಾಡಿಲಿ ಅಗ್ರೋ ಇಂಡಸ್ಟ್ರೀಸ್ ಕಂಪನಿಯ ಒಂದು ಷೇರಿನ ಬೆಲೆ 5.52 ರೂಪಾಯಿ ಆಗಿತ್ತು. ಕೋವಿಡ್ ಕಾಲಘಟ್ಟದ ಬಳಿಕ ಷೇರುಗಳ ಬೆಲೆ 5 ವರ್ಷದಲ್ಲಿ 800 ರೂಪಾಯಿಯ ಗಡಿ ತಲುಪಿದೆ. ಕಳೆದ ಶುಕ್ರವಾರ ಈ ಷೇರು 2.64% ಇಳಿಕೆಯೊಂದಿಗೆ ₹782.50ಕ್ಕೆ ವಹಿವಾಟು ಮುಗಿಸಿದೆ. ಒಂದು ಹಂತದಲ್ಲಿ ₹815 ರ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಶುಕ್ರವಾರ ಲಾಭ ಗಳಿಕೆಯಿಂದಾಗಿ ಕೊನೆಯಲ್ಲಿ ಇಳಿಕೆಯೊಂದಿಗೆ ತನ್ನ ವಹಿವಾಟು ಮುಗಿಸಿದೆ.
5 ವರ್ಷಗಳಲ್ಲಿ 142 ಪಟ್ಟು ಲಾಭ
ಪಿಕಾಡಿಲಿ ಅಗ್ರೋ ಷೇರು ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರ ಹಣವನ್ನು 142 ಪಟ್ಟು ಹೆಚ್ಚಿಸಿದೆ. ಅಂದರೆ, ಯಾರಾದರೂ ಹೂಡಿಕೆದಾರರು ಮಾರ್ಚ್ 2020 ರ ಕೊನೆಯಲ್ಲಿ ₹1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಅದನ್ನು ಇಲ್ಲಿಯವರೆಗೆ ಉಳಿಸಿಕೊಂಡಿದ್ದರೆ, ಇಂದು ಅವರ ಹಣ ₹1.41 ಕೋಟಿಗೂ ಹೆಚ್ಚಾಗಿರುತ್ತಿತ್ತು.
ಇದನ್ನೂ ಓದಿ: ಕಿತ್ನೇ ಘಾಜಿ ಆಯೇ ಕಿತ್ನೇ ಗಯೇ: ಹಿಂಡನ್‌ಬರ್ಗ್ ಮುಚ್ಚುವ ಬೆನ್ನಲೇ Adani group CFO ಟ್ವಿಟ್ ವೈರಲ್
₹1019 ರ ಗರಿಷ್ಠ ಮಟ್ಟ ತಲುಪಿದ ಷೇರು
ಪಿಕಾಡಿಲಿ ಅಗ್ರೋ ಷೇರಿನ 52 ವಾರಗಳ ಗರಿಷ್ಠ ಮಟ್ಟ ₹1019.90 ಆಗಿದ್ದರೆ, 52 ವಾರಗಳ ಕನಿಷ್ಠ ಮಟ್ಟ ₹278 ಆಗಿದೆ. ಪ್ರಸ್ತುತ ಷೇರಿನ ಮಾರುಕಟ್ಟೆ ಬಂಡವಾಳ ₹7382 ಕೋಟಿ, ಷೇರಿನ ಮುಖಬೆಲೆ ₹10 ಆಗಿದೆ. ಕಂಪನಿಯು ಆಲ್ಕೋಹಾಲ್ ಮತ್ತು ಬ್ರೂವರಿ ವಲಯಕ್ಕೆ ಸೇರಿದೆ. ಕಂಪನಿಯು ಏಪ್ರಿಲ್ 2015 ಮತ್ತು ಅಕ್ಟೋಬರ್ 2015 ರಲ್ಲಿ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಇದಲ್ಲದೆ, ಸೆಪ್ಟೆಂಬರ್ 21, 2023 ರಂದು ಷೇರು ಒಂದಕ್ಕೆ ₹0.20 ಲಾಭಾಂಶವನ್ನು ನೀಡಿದೆ. ಇದಕ್ಕೂ ಮೊದಲು ಕಂಪನಿಯು ಸೆಪ್ಟೆಂಬರ್ 2022, ಸೆಪ್ಟೆಂಬರ್ 2021, ಸೆಪ್ಟೆಂಬರ್ 2020 ಮತ್ತು ಸೆಪ್ಟೆಂಬರ್ 2013 ರಲ್ಲಿ ಲಾಭಾಂಶ ನೀಡಿತ್ತು.
Disclaimer:ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: Infosys share price: ಷೇರು ಬೆಲೆ ಕುಸಿತದಿಂದ ಒಂದೇ ನಿಮಿಷದಲ್ಲಿ ₹1800 ಕೋಟಿ ಕಳೆದುಕೊಂಡ ನಾರಾಯಣಮೂರ್ತಿ ಫ್ಯಾಮಿಲಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.