ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ದರ ಏರುತ್ತಲೇ ಇದ್ದು ಇದೀಗ ಪೆಟ್ರೋಲ್ ದರ ಅನೇಕ ನಗರಗಳಲ್ಲಿ 100 ರು ಗಡಿ ದಾಟಿದೆ.
ನವದೆಹಲಿ (ಫೆ.19): ಸತತ 10ನೇ ದಿನವಾದ ಗುರುವಾರ ಕೂಡಾ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀ.ಗೆ 34 ಮತ್ತು 32 ಪೈಸೆಯಷ್ಟು ಹೆಚ್ಚಳ ಮಾಡಿವೆ. ಹೀಗಾಗಿ ರಾಜಸ್ಥಾನದ ಶ್ರೀಗಂಗಾನಗರದ ಬಳಿಕ ಇದೀಗ ಮಧ್ಯಪ್ರದೇಶ ಅನುಪ್ಪುರದಲ್ಲೂ ಪೆಟ್ರೋಲ್ ದರ 100ರ ಗಡಿ ದಾಟಿದೆ.
ಅನುಪ್ಪುರದಲ್ಲಿ ಗುರುವಾರ ಪೆಟ್ರೋಲ್ ದರ 100.25 ರು. ಮತ್ತು ಡೀಸೆಲ್ ದರ 90.35 ರು. ದಾಟಿದೆ. ಇನ್ನು ಬುಧವಾರ 100ರ ಗಡಿ ದಾಟಿದ್ದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ದರ ಗುರುವಾರ 100.49 ರು.ಗೆ ತಲುಪಿದೆ. ಉಳಿದಂತೆ ಪೆಟ್ರೋಲ್ ದರ ಮುಂಬೈನಲ್ಲಿ 96.32 ರು. ಮತ್ತು ಬೆಂಗಳೂರಿನಲ್ಲಿ 92.89ಕ್ಕೆ ತಲುಪಿದೆ. ಇನ್ನು ಡೀಸೆಲ್ ದರ ಮುಂಬೈನಲ್ಲಿ 87.32 ರು. ಮತ್ತು ಮುಂಬೈನಲ್ಲಿ 85.09 ರು.ಗೆ ತಲುಪಿದೆ.
ಪೆಟ್ರೋಲ್ ದರ ಏರಿಕೆಗೆ ಹಿಂದಿನ ಸರ್ಕಾರ ಕಾರಣ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ! ...
ವಿವಿಧ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಬೇರೆ ಬೇರೆ ಪ್ರಮಾಣದ ವ್ಯಾಟ್, ಇತರೆ ಸೆಸ್‌ಗಳನ್ನು ವಿಧಿಸುತ್ತಿರುವ ಕಾರಣ, ಅವುಗಳ ದರ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಪೆಟ್ರೋಲ್‌ನ ಮೂಲ ಬೆಲೆಯ ಮೇಲೆ ಕೇಂದ್ರ ಸರ್ಕಾರ 32.90 ರು. ಹಾಗೂ ಡೀಸೆಲ್ ಮೇಲೆ 31.80 ರು. ಅಬಕಾರಿ ಸುಂಕ ವಿಧಿಸುತ್ತದೆ. ಇನ್ನುಳಿದ ಮಾರಾಟ ತೆರಿಗೆಯನ್ನು ರಾಜ್ಯಗಳು ವಿಧಿಸುತ್ತಿವೆ.