
ನವದೆಹಲಿ(ಅ.06): ಅಂತಾರಾಷ್ಟ್ರೀಯ ತೈಲ ಬೆಲೆ 2014ರ ಬಳಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಹೀಗಾಗಿ ಮಂಗಳವಾರ ದೇಶಾದ್ಯಂತ ಪೆಟ್ರೋಲ್(Petrol), ಡೀಸೆಲ್(Diesel) ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಂಡಿದೆ. ಇದರೊಂದಿಗೆ ಇಂಧನ ಬೆಲೆ ಈವರೆಗಿನ ದಾಖಲೆಯ ಗರಿಷ್ಠ ಮಟ್ಟತಲುಪಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ(Oil Price) ಬ್ಯಾರಲ್ಗೆ 82 ಡಾಲರ್ ದಾಟಿದ್ದು, ಬೆಲೆ ಇನ್ನಷ್ಟುಏರುವ ಸಾಧ್ಯತೆ ಇದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆ ಪ್ರತೀ ಲೀ.ಗೆ 25 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 30 ಪೈಸೆ ಏರಿಕೆ ಕಂಡಿದೆ.
ಬೆಂಗಳೂರಲ್ಲಿ ಪೆಟ್ರೋಲ್ 106.21 ರು. ಹಾಗೂ ಡೀಸೆಲ್ ಬೆಲೆ 96.66 ರು.ಗೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಏರಿಕೆ ಕಂಡು 102.64 ರು. ಗೆ ತಲುಪಿದ್ದು, ಮುಂಬೈನಲ್ಲಿ 108.67 ರು.ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ದೆಹಲಿ ಹಾಗೂ ಮುಂಬೈನಲ್ಲಿ ಕ್ರಮವಾಗಿ 91.07 ಹಾಗೂ 98.80 ರು. ಆಗಿದೆ
ಈ ವಾರದಲ್ಲಿ 6ನೇ ಬಾರಿ ಬೆಲೆ ಏರಿಕೆ ಮಾಡಿದ್ದರಿಂದ ದೇಶದ ವಿವಿಧೆಡೆ ಪೆಟ್ರೋಲ್ ಬೆಲೆ ದಾಖಲೆ ಬರೆದಿದೆ. 2 ವಾರದ ಅಂತರದಲ್ಲಿ 9 ಬಾರಿ ಇಂಧನ ದರದಲ್ಲಿ ಜಿಗಿತ ಕಂಡಿದ್ದರಿಂದ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಡೀಸೆಲ್ ಬೆಲೆ 100 ರು. ಗಡಿ ದಾಟಿದೆ.
ಸ್ಥಳೀಯ ತೆರಿಗೆಗಳನ್ನು ಆಧರಿಸಿ ವಿವಿಧ ರಾಜ್ಯಗಳಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.
ಭೋಪಾಲ್, ಇಂದೋರ್‌ನಲ್ಲಿ ಡೀಸೆಲ್ ಶತಕ:
ಮಂಗಳವಾರದ ಡೀಸೆಲ್ ಬೆಲೆ ಏರಿಕೆ ಬಳಿಕ ಮಧ್ಯಪ್ರದೇಶದ ಭೋಪಾಲ್ ಹಾಗೂ ಇಂದೋರ್‌ನಲ್ಲಿ ಡೀಸೆಲ್ ಬೆಲೆ 100 ರು. ಗಡಿ ದಾಟಿದೆ. ರಾಜ್ಯ ರಾಜಧಾನಿ ಭæೂೕಪಾಲ್‌ನಲ್ಲಿ ಡೀಸೆಲ್ ಬೆಲೆ 100.1 ರು. ಇದ್ದರೆ, ಪೆಟ್ರೋಲ್ ಬೆಲೆ 111.10 ರು.ಗೆ ಜಿಗಿದಿದೆ. ಎರಡೂ ನಗರಗಳಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 111 ರು.ಗೆ ಹೆಚ್ಚಾಗಿದೆ. ರಾಜ್ಯದ ಬಲಘಾಟ್ ಜಿಲ್ಲೆಯಲ್ಲಿ ಈಗಾಗಲೇ ಡೀಸೆಲ್ ಬೆಲೆ ಲೀ.ಗೆ 101 ರು. ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.